ಹಿಂದುಳಿದ ವರ್ಗದವರ ಎಸ್ಸಿ, ಎಸ್ಟಿ ಸೇರ್ಪಡೆ ಬೇಡ
ಶಹಾಪುರ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮೀಸಲಾತಿ ಪಟ್ಟಿಗೆ ಹಿಂದುಳಿದ ವರ್ಗದವರನ್ನು ಸೇರಿಸುತ್ತಿರುವ ಶಿಫಾರಸ್ಸನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಆಗ್ರಹಿಸಿ ಮಹರ್ಷಿ ವಾಲ್ಮೀಕಿ ನಾಯಕ ಯುವಕ ಘಟಕ ಸಂಘದಿಂದ ರಾಜ್ಯಪಾಲರಿಗೆ ತಹಸೀಲ್ದಾರರ ಮೂಲಕ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಯಾದಗಿರಿ ಜಿಲ್ಲಾ ವಾಲ್ಮಿಕಿ ನಾಯಕ ನೌಕರರ ಸಂಘದ ಮುಖಂಡ ಯಮನಪ್ಪ ನಾಯಕ, ಸರ್ಕಾರ ಹಿಂದುಳಿದ ವರ್ಗದವರನ್ನು ಪ.ಜಾತಿ, ಪ.ಪಂಗಡಕ್ಕೆ ಸೇರಿಸುವ ಶಿಫಾರಸ್ಸು ಮಾಡುವ ಮೂಲಕ ದಲಿತ ಜನಾಂಗದವರಿಗೆ ಸಿಗಬೇಕಾದ ಸೌಲಭ್ಯಗಳನ್ನು ಮೊಟಕುಗೊಳಿಸುವ ವ್ಯವಸ್ಥಿತ ಹುನ್ನಾರ ನಡೆಸಿದ್ದು ಈಗಾಗಲೇ ಹಿಂದುಳಿದ ವರ್ಗದವರು ರಾಜಕೀಯವಾಗಿ, ಆರ್ಥಿಕವಾಗಿ ಸಬಲರಾಗಿದ್ದಾರೆ. ಅವರನ್ನು ಪ.ಜಾತಿ ಪ.ಪಂಗಡಕ್ಕೆ ಸೇರಿಸುವ ಮೂಲಕ ಶೋಷಿತ ಸಮುದಾಯ ಜನಾಂಗಕ್ಕೆ ಅನ್ಯಾಯವಾಗಲಿದೆ. ತಕ್ಷಣವೇ ಸರ್ಕಾರ ಸಂಪುಟದಲ್ಲಿ ಕೈಗೊಂಡ ಅನುಮೋದನೆಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.
ಬೇಡಿಕೆಗಳು: ನಕಲಿ ಜಾತಿ ಪ್ರಮಾಣ ಪತ್ರಗಳ ವಿತರಣೆ ಕೂಡಲೇ ನಿಲ್ಲಬೇಕು ಮತ್ತು ನಕಲಿ ಜಾತಿ ಪತ್ರ ಪಡೆದು ಮುಂಬಡ್ತಿ ಪಡೆದ ಅಧಿಕಾರಿಗಳನ್ನು ಕರ್ತವ್ಯದಿಂದ ವಜಾಗೊಳಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ವಾಲ್ಮೀಕಿ ಯುವ ಘಟಕದ ಅಧ್ಯಕ್ಷ ರಾಘವೇಂದ್ರ ಯಕ್ಚಿಂತಿ ತಿರುಪತಿ, ಭೀಮಾಶಂಕರ, ಧರ್ಮರಾಜ, ಶಿವಶರಣ, ರವಿಚಂದ್ರನ್, ಹಣಮಂತರೆಡ್ಡಿ ಇತರರು ಇದ್ದರು.