ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

16 ಹಣಾಹಣಿ; ಸಂಸತ್ ಪ್ರವೇಶಿಸಿದ್ದು ಐವರೇ

Rashmi Kasaragodu
Updated On : 19 Mar 2014, 11:24 am

 ಅಪ್ಪಾರಾವ್ ಸೌದಿ
ಕನ್ನಡಪ್ರಭ ವಾರ್ತೆ  ಬೀದರ್  ಮಾ.18
ಬೀದರ್ ಹಾಗೂ ಗುಲ್ಬರ್ಗ ಜಿಲ್ಲೆಯೂ ಸೇರಿದಂತೆ 8 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬೀದರ್ ಲೋಕಸಭಾ ಕ್ಷೇತ್ರಕ್ಕೆ 1952ರಿಂದ ಇಲ್ಲಿಯವರೆಗೆ ಒಟ್ಟು 15 ಸಾರ್ವತ್ರಿಕ ಚುನಾವಣೆಗಳು ನಡೆದಿವೆ. ಆದರೆ ಸಂಸತ್ ಪ್ರವೇಶಿಸಿದವರು 5 ಜನ ಮಾತ್ರ.
  ಈ ಕ್ಷೇತ್ರ 15 ಸಾರ್ವತ್ರಿಕ ಲೋಕಸಭಾ ಚುನಾವಣೆಗಳೊಂದಿಗೆ ಒಂದು ಉಪಚುನಾವಣೆಯನ್ನು ಕಂಡಿದ್ದು ಇದರಲ್ಲಿ 10 ಬಾರಿ ಕಾಂಗ್ರೆಸ್ ಜಯಗಳಿಸಿದ್ದರೆ ಒಂದು ಬಾರಿ ಎನ್‌ಸಿಜೆ ಮತ್ತು 5 ಬಾರಿ ಬಿಜೆಪಿ ಪಕ್ಷ ಲೋಕಸಭಾ ಸ್ಥಾನವನ್ನು ತನ್ನದಾಗಿಸಿಕೊಂಡಿದ್ದು ಇದೀಗ 16ನೇ ಸಾರ್ವತ್ರಿಕ ಚುನಾವಣೆಯನ್ನು ಎದುರಿಸುತ್ತಿದೆ.
  ಬೀದರ್ ಜಿಲ್ಲೆಯ ಬೀದರ್, ಬೀದರ್ ದಕ್ಷಿಣ, ಹುಮನಾಬಾದ್, ಭಾಲ್ಕಿ, ಔರಾದ್ ಮತ್ತು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳಲ್ಲದೆ ಗುಲ್ಬರ್ಗ ಜಿಲ್ಲೆಯ ಚಿಂಚೋಳಿ ಮತ್ತು ಆಳಂದ ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡಂತೆ ಸುಮಾರು 15 ಲಕ್ಷ ಮತದಾರನ್ನು ಹೊಂದಿರುವ ಬೀದರ್ ಲೋಕಸಭಾ ಕ್ಷೇತ್ರಕ್ಕೆ ಇದೀಗ ಕಾಂಗ್ರೆಸ್ ಮತ್ತೊಮ್ಮೆ ಧರಂಸಿಂಗ್ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿದ್ದರೆ ಹಿಂದಿನ ಚುನಾವಣೆಯಲ್ಲಿ ಪ್ರಮುಖ ಎದುರಾಳಿಯಾಗಿದ್ದ ಬಿಜೆಪಿ ಇನ್ನೂ ಅಭ್ಯರ್ಥಿ ಆಯ್ಕೆಯ ಗೊಂದಲದಲ್ಲಿದ್ದು ಜೆಡಿಎಸ್ ತನ್ನ ಅಭ್ಯರ್ಥಿಯನ್ನಾಗಿ ಮಾಜಿ ಸಚಿವ ಬಂಡೆಪ್ಪ ಖಾಶೆಂಪೂರ್ ಅವರನ್ನು ಘೋಷಿಸಿದೆ.
  ಇತ್ತೀಚಿನ ಅಂಕಿ ಅಂಶಗಳ ಪ್ರಕಾರ (ಹೊಸ ಸೇರ್ಪಡೆ ಹೊರತು ಪಡಿಸಿ) 8,10,401 ಪುರುಷ ಮತದಾರರು ಹಾಗೂ 7,35,745 ಮಹಿಳಾ ಮತದಾರರು, ಇತರೆ 65 ಮತದಾರರನ್ನು ಹೊಂದಿರುವ ಈ ಕ್ಷೇತ್ರದಲ್ಲೀಗ ಕಳೆದ 2009ರಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿರುವ ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಸಂಸದರಾಗಿದ್ದಾರೆ.
  ಕಳೆದ 1957ರಲ್ಲಿ ಬೀದರ್ ದ್ವಿಸದಸ್ಯ ಕ್ಷೇತ್ರವಾಗಿದ್ದದ್ದು 1963ರಲ್ಲಿ ಮೀಸಲು ಕ್ಷೇತ್ರವಾಗಿ ಮಾರ್ಪಟ್ಟಿದ್ದು ಅಂದಿನಿಂದ ದಿ. ರಾಮಚಂದ್ರ ವೀರಪ್ಪ 7 ಬಾರಿ ಸಂಸದರಾಗಿ ಆಯ್ಕೆಯಾಗಿದ್ದರೆ ಕಾಂಗ್ರೆಸ್‌ನ ಶಂಕರದೇವ ಒಟ್ಟು ಎರಡು ಬಾರಿ (ಒಂದು ಬಾರಿ ಎನ್‌ಸಿಜೆ) ಹಾಗೂ ಕಾಂಗ್ರೆಸ್‌ನಿಂದ ನರಸಿಂಗರಾವ್ ಸೂರ್ಯವಂಶಿ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು.
  ಸತತ ಗೆಲುವುಗಳನ್ನು ಕಂಡಿದ್ದ ರಾಮಚಂದ್ರ ವೀರಪ್ಪ ಅವರು ತಮ್ಮ ಜೀವಿತಾವಧಿಯಲ್ಲಿ ಎರಡು ಸಲ ಮಾತ್ರ (1971 ಮತ್ತು 1977) ಸೋಲಿನ ರುಚಿ ಕಂಡಿದ್ದರು. ಮೂರು ಚುನಾವಣೆಗಳಲ್ಲಿ (1980, 1984 ಮತ್ತು 1989) ಅವರು ಸ್ಪರ್ಧಿಸಿರಲಿಲ್ಲ.
  1962 ಮತ್ತು 1967ರಲ್ಲಿ ರಾಮಚಂದ್ರ ವೀರಪ್ಪ ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಜಯ ಸಾಧಿಸಿದ್ದರೆ 1991, 1996, 1998, 1999 ಹಾಗೂ 2004ರಲ್ಲಿ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಜಯ ದಾಖಲಿಸಿದ್ದರು. ಇನ್ನು ನರಸಿಂಗರಾವ್ ಸೂರ್ಯವಂಶಿ ಅವರು ಕಾಂಗ್ರೆಸ್‌ನಿಂದ 1980, 1984, 1989 ಹಾಗೂ 2004ರಲ್ಲಿ ನಡೆದ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಜಯಗಳಿಸಿದ್ದರು.
  ಹೀಗೆಯೇ ಬೀದರ್ ಕ್ಷೇತ್ರವನ್ನು ಬಿಜೆಪಿ ಭದ್ರಕೋಟೆಯನ್ನಾಗಿಸಿದ್ದ ರಾಮಚಂದ್ರ ವೀರಪ್ಪ ಅವರ ನಿಧನಾನಂತರ 2004ರ ಅಕ್ಟೋಬರ್ ತಿಂಗಳಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ರಾಮಚಂದ್ರ ವೀರಪ್ಪ ಅವರ ಪುತ್ರ ಬಸವರಾಜ ಆರ್ಯ ಅವರನ್ನು ಕಣಕ್ಕಿಳಿಸಿದ್ದ ಬಿಜೆಪಿಗೆ ಕಾಂಗ್ರೆಸ್‌ನ ನರಸಿಂಗರಾವ್ ಸೂರ್ಯವಂಶಿ ವಿರುದ್ಧ 13 ಸಾವಿರ ಮತಗಳ ಅಂತರದಿಂದ ಸೋಲು ಅನುಭವಿಸಬೇಕಾಗಿ ಬಂದಿತ್ತು. ಅಂದು ಜೆಡಿಎಸ್‌ನಿಂದ ಕಣಕ್ಕಿಳಿದಿದ್ದ ಬಾಬು ಹೊನ್ನಾನಾಯಕ 1.67ಲಕ್ಷ ಮತಗಳನ್ನು ಪಡೆದು ಗಮನ ಸೆಳೆದಿದ್ದರೆ ತದನಂತರ ಮಾಜಿ ಸಿಎಂ ಧರಂಸಿಂಗ್ ಕಳೆದ 2009ರ ಚುನಾವಣೆಯಲ್ಲಿ ಸಂಸತ್ ಪ್ರವೇಶಿಸಿ ಬಿಜೆಪಿ ಭದ್ರ ಕೋಟೆಯನ್ನು ಛಿದ್ರಗೊಳಿಸಿ ಕಾಂಗ್ರೆಸ್ ಧ್ವಜ ಹಾರಿಸಿದ್ದರು.
ಕಳೆದ 2009ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಹಾಲಿ ಸಂಸದ ಧರಂಸಿಂಗ್ 3.38ಲಕ್ಷ ಮತಗಳನ್ನು ಪಡೆದು ಅಂದಿನ ಬಿಜೆಪಿ ಅಭ್ಯರ್ಥಿಯಾಗಿದ್ದ ಗುರುಪಾದಪ್ಪ ನಾಗಮಾರಪಳ್ಳಿ ವಿರುದ್ಧ 39,619 ಮತಗಳ ಅಂತರದಿಂದ ಜಯ ದಾಖಲಿಸಿದ್ದರು.
  ಇದೀಗ 2014ರ ಈ ಸಾರ್ವತ್ರಿಕ ಚುನಾವಣೆಯಲ್ಲಿ ಬೀದರ್ ಲೋಕಸಭಾ ಕ್ಷೇತ್ರದ ಚುನಾವಣಾ ಅಖಾಡಾ ಇನ್ನೂ ಸ್ಪಷ್ಟವಾಗಿರದಿದ್ದರೂ ನಿತ್ಯ ಒಂದಿಲ್ಲೊಂದು ರಾಜಕೀಯ ಚಟುವಟಿಕೆಗಳು ಗರಿಗೆದರುತ್ತಿದ್ದರೆ ಚುನಾವಣೆಯ ಕಾವು ಬೇಸಿಗೆಯ ಬಿಸಿಲಿನೊಂದಿಗೆ ನೆತ್ತಿಗೇರಿದಂತಿದೆ.
  ಕಾಂಗ್ರೆಸ್‌ನಿಂದ ಹಾಲಿ ಸಂಸದ ಧರಂಸಿಂಗ್, ಜೆಡಿಎಸ್‌ನಿಂದ ಮಾಜಿ ಸಚಿವ ಬಂಡೆಪ್ಪ ಖಾಶೆಂಪೂರ್ ಈಗಾಗಲೇ ಘೋಷಿತ ಅಭ್ಯರ್ಥಿಗಳಾಗಿದ್ದು ಬಿಜೆಪಿ ಇನ್ನೂ ತನ್ನ ಹುರಿಯಾಳುವಿನ ಹೆಸರು ಅಂತಿಮಗೊಳಿಸಿಲ್ಲ.
  ಬೀದರ್ ಲೋಕಸಭಾ ಕ್ಷೇತ್ರಕ್ಕೆ ಆಯ್ಕೆ ಬಯಸಿ ಕಾಂಗ್ರೆಸ್‌ನಿಂದ ಸಂಸದ ಧರಂಸಿಂಗ್ ಅವರು ಪಕ್ಷದ ರಾಜ್ಯಾಧ್ಯಕ್ಷ ಪರಮೇಶ್ವರ ಅವರ ಸಮ್ಮುಖದಲ್ಲಿ ಇದೇ ಮಾ. 20ರಂದು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಪಕ್ಷ ಸ್ಪಷ್ಟಪಡಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement