ಕೊಳವೆಬಾವಿ ದುರಸ್ತಿಗೆ ಗ್ರಾಮಸ್ಥರ ಆಗ್ರಹ
ಶಹಾಪುರ: ಕಳೆದ ಸುಮಾರು ದಿನಗಳಿಂದ ಕೆಟ್ಟು ನಿಂತಿರುವ ಬೋರೆವೆಲ್ ರಿಪೇರಿಗಾಗಿ ಪುರಸಭೆಗೆ ಮನವಿ ಮಾಡಿದರೂ ಅಧಿಕಾರಿಗಳು, ಸಿಬ್ಬಂದಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ವಾರ್ಡ್ ಸಂಖ್ಯೆ 2ರ ಬುದ್ಧ ನಗರದ ನಿವಾಸಿಗಳು ಖಾಲಿ ಕೊಡಗಳನ್ನು ಬೋರ್ವೆಲ್ ಮುಂದೆ ಇಟ್ಟು ಪುರಸಭೆಯ ಕಾರ್ಯವೈಖರಿಯನ್ನು ಖಂಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ದಲಿತ ಸಂಘಟನೆಯ ಮುಖಂಡ ಬಸವರಾಜ ನಾಟೇಕಾರ, ವಾರ್ಡ್ 2 ಬುದ್ಧನಗರ ಬಡಾವಣೆಯು ಸಂಪೂರ್ಣ ಮೂಲಸೌಕರ್ಯದಿಂದ ವಂಚಿತವಾಗಿದೆ.
ನೀರು ಸಂಗ್ರಹಣಾ ಕೇಂದ್ರದಿಂದ ಬರುವ ನೀರು ಪೈಪಲೈನ್ ಸೋರಿಕೆಯಿಂದ ಕಲುಷಿತವಾಗಿದ್ದು ಶುದ್ಧ ಕುಡಿಯುವ ನೀರು ಸಿಗದಂತಾಗಿದೆ. ಈಗಾಗಲೇ ಕಲುಷಿತ ನೀರು ಸೇವಿಸಿ ಕೆಲವರು ಸಾಂಕ್ರಾಮಿಕ ರೋಗದ ಭೀತಿಯಿಂದ ಬಳಲುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದರು.
ಯುವ ಮುಖಂಡರಾದ ಅಪ್ಪಣ್ಣ, ಇಂದ್ರಮ್ಮ, ನಾಗಮ್ಮ, ಭೀಮರಾಯ, ಮಲ್ಲಪ್ಪ ಇತರರು ಇದ್ದರು.