ಅಭಿವೃದ್ಧಿಯಲ್ಲಿ ಸಂಘಟನೆಗಳ ಪಾತ್ರ ಮಹತ್ವದ್ದು: ಗೌಡ
ಯಾದಗಿರಿ: ಸಂಘಟನೆಗಳು ರಾಜ್ಯದಲ್ಲಿ ಗ್ರಾಮೀಣ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಕೆಲಸ ಮಾಡುತ್ತಿರುವುದು ನಿಜಕ್ಕೂ ಶ್ಲಾಘನಿಯವಾಗಿದೆ ಎಂದು ಗ್ರಾಮದ ಮುಖಂಡ ಶರಣಪ್ಪಗೌಡ ಕಾರಡ್ಡಿ ಹೇಳಿದರು.
ತಾಲೂಕಿನ ಮಲ್ಹಾರ ಗ್ರಾಮದಲ್ಲಿ ಕರವೇ ಗ್ರಾಮ ಘಟಕದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಸಂಘಟನೆಗಳು ಲಕ್ಷಾಂತರ ಕಾರ್ಯಕರ್ತರ ಮೂಲಕ ಕನ್ನಡ ನಾಡು ನುಡಿ, ನೆಲ, ಜಲ, ಭಾಷೆ ಬಗ್ಗೆ ಹೋರಾಡುತ್ತಿವೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕರವೇ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ಮಾತನಾಡಿ ಗ್ರಾಮೀಣ ಭಾಗದಲ್ಲಿನ ಅನೇಕ ಸಮಸ್ಯೆಗಳನ್ನು ಹೋರಾಟದ ಮೂಲಕ ಅಧಿಕಾರಿಗಳ ಗಮನ ಸೆಳೆದು ಅವುಗಳ ಪರಿಹಾರಕ್ಕೆ ಶ್ರಮಿಸುತ್ತೇವೆ ಎಂದರು.
ಗ್ರಾಮೀಣ ಜನರಿಗೆ ಉದ್ಯೋಗ, ಕುಡಿಯುವ ನೀರು, ರಸ್ತೆ, ಉತ್ತಮ ಗುಣ ಮಟ್ಟದ ಶಿಕ್ಷಣ ಸುಧಾರಿಸಲು ತಾವೆಲ್ಲರೂ ಕೈ ಜೋಡಿಸಿದಾಗ ಅಭಿವೃದ್ಧಿ ಕಾಣಲು ಸಾಧ್ಯ. ಲೋಕಸಭೆ ಚುನಾವಣೆಯಲ್ಲಿ 18 ವರ್ಷ ಮೇಲ್ಟಟ್ಟ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡುವುದರ ಮೂಲಕ ಸೂಕ್ತ ಅಭ್ಯರ್ಥಿಗೆ ಮತ ನೀಡಬೇಕೆಂದು ಎಂದು ಮನವಿ ಮಾಡಿದರು.
ಕನ್ನಡಾಂಬೆ ಭಾವಚಿತ್ರಕ್ಕೆ ಶಾಲೆಯ ಮುಖ್ಯ ಗುರುಗಳಾದ ಶಂಕ್ರಮ್ಮ ಪೂಜೆ ಸಲ್ಲಿಸಿದರು. ಹಣಮಂತ ಲಿಂಗೇರಿ, ಗೌರವಾಧ್ಯಕ್ಷ ಭೀಮಾಶಂಕರ ರಾಯಪ್ಪನೋರ, ನಾಗರಾಜ ಶೆಟ್ಟಗೇರಾ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.
ನೂತನ ಗ್ರಾಮ ಘಟಕದ ಪದಾಧಿಕಾರಿಗಳು: ಹಣಮಂತ ಟಿ. ನಾಯಕ, (ಅಧ್ಯಕ್ಷ), ಹಣಮಂತ ಎಸ್.ಕಾವಲಿ (ಗೌ. ಅಧ್ಯಕ್ಷ), ಸಣ್ಣ ಭೀಮಪ್ಪ ನಾಯಕ, ಮಲ್ಲಪ್ಪ ಎಚ್. ಮರಮನೋರ (ಉಪಾಧ್ಯಕ್ಷರು), ಕಾಶಪ್ಪ ನಾಯಕ (ಪ್ರ. ಕಾರ್ಯದರ್ಶಿ), ವಗ್ಗಯ್ಯ ಪೂಜಾರಿ (ಸಂಘಟನಾ ಕಾರ್ಯದರ್ಶಿ), ಮರೆಪ್ಪ ನಾಯಕ (ಕಾರ್ಯದರ್ಶಿ), ಗೋವಿಂದರಾಜ ಬಾಗಲಿ (ಸಂಚಾಲಕ), ಸುರೇಶ ನಾಯಕ (ಖಜಾಂಚಿ), ಮಹಿಪಾಲರಡ್ಡಿಗೌಡ (ಸಲಹೆಗಾರ), ದೌಲತಅಲಿ, (ಸಹ ಕಾರ್ಯದರ್ಶಿ), ಚಂದಪ್ಪ ನಾಯಕ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.