ಖರ್ಗೆ ಗೆಲವಿಗೆ ಅಭಿವೃದ್ಧಿ ಕಾರ್ಯಗಳೇ ಶ್ರೀರಕ್ಷೆ
ಜೇವರ್ಗಿ: ಕಳೆದ ಐದು ವರ್ಷಗಳ ಅವಧಿಯಲ್ಲಿ ಕೇಂದ್ರದ ಯುಪಿಎ ಸರ್ಕಾರದ ಸಾಧನೆಗಳು ಹಾಗೂ ಜಿಲ್ಲೆಯಲ್ಲಿ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಅವರ ಗೆಲವಿಗೆ ಶ್ರೀರಕ್ಷೆಯಾಗಲಿವೆ ಎಂದು ಶಾಸಕ ಡಾ. ಅಜಯಸಿಂಗ್ ವಿಶ್ವಾಸ ವ್ಯಕ್ತಪಡಿಸಿದರು.
ತಾಲೂಕಿನ ಯಡ್ರಾಮಿ ಪಟ್ಟಣದಲ್ಲಿ ಜೇವರ್ಗಿ ಹಾಗೂ ಯಡ್ರಾಮಿ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಆಯೋಜಿಸಿದ್ದ ಭಾರತ ನಿರ್ಮಾಣ ಪಾದಯಾತ್ರೆ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿ, ಖರ್ಗೆ ಅವರು ಸಂವಿಧಾನದ 371(ಜೆ) ಕಲಂಗೆ ತಿದ್ದುಪಡಿ ತರುವುದರ ಮೂಲಕ ಹಿಂದುಳಿದ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ನಾಂದಿ ಹಾಡಿದ್ದಾರೆ ಎಂದರು.
ಕಡಗಂಚಿಯಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯ ಸ್ಥಾಪನೆ, ಗುಲ್ಬರ್ಗದಲ್ಲಿ ಇಎಸ್ಐ ಆಸ್ಪತ್ರೆ ಆರಂಭ, ರೇಲ್ವೆ ವಿಭಾಗೀಯ ಕಚೇರಿ ಆರಂಭ, ಕೋಲಾರ ಹಾಗೂ ಯಾದಗಿರಿಯಲ್ಲಿ ರೇಲ್ವೆ ಬೋಗಿ ಕಾರ್ಖಾನೆ ಸ್ಥಾಪನೆ ಹಾಗೂ ಬೀದರ್-ಗುಲ್ಬರ್ಗ ರೇಲ್ವೆ ಮಾರ್ಗ ನಿರ್ಮಾಣ ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಖರ್ಗೆ ಅವರ ಕಾರ್ಯವೈಖರಿ ಕಂಡ ಜಿಲ್ಲೆಯ ಜನತೆ ಅವರನ್ನು ಎರಡನೇ ಅವಧಿಗೆ ಅಧಿಕ ಬಹುಮತದಿಂದ ಲೋಕಸಭೆಗೆ ಆರಿಸಿ ಕಳಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಎಂಎಲ್ಸಿ ಅಲ್ಲಂಪ್ರಭು ಪಾಟೀಲ್ ಮಾತನಾಡಿದರು. ಶಿವಶರಣಪ್ಪ ಕೋಬಾಳ, ರುಕುಂ ಪಟೇಲ್ ಇಜೇರಿ, ಕಾಸಿಂ ಪಟೇಲ್ ಮದಬಾಳ, ಮಲ್ಲಿಕಾರ್ಜುನ ಸಾಹು ಆಲೂರ, ಚಂದ್ರಶೇಖರ ಹರಳನಾಳ, ಮಲ್ಲಾರಾವ್ ಕುಲಕರ್ಣಿ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಂಡಿದ್ದರು. ಅಮೃತಗೌಡ ಪಾಟೀಲ್ ವಡಗೇರಾ ಸ್ವಾಗತಿಸಿದರು. ಚಂದ್ರಶೇಖರ ಪುರಾಣಿಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಲ್ಲಿಕಾರ್ಜುನ ಹಲಕರ್ಟಿ ನಿರೂಪಿಸಿದರು. ಮಲ್ಲಾರರಾವ್ ಕುಲಕರ್ಣಿ ವಂದಿಸಿದರು.