ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಯಾವತ್ತೂ ಪ್ರವಾಹದ ವಿರುದ್ಧ ಈಜೋದೇ ನನ್ನ ಜಾಯಮಾನ

Rashmi Kasaragodu
Updated On : 20 Mar 2014, 12:30 pm

ಕನ್ನಡಪ್ರಭ ವಾರ್ತೆ  ಗುಲ್ಬರ್ಗ  ಮಾ.19
ದಳದಿಂದ ಹೊರಬಂದು ಕಮಲಪಡೆ ಸೇರಿದ್ದ ವೈಜನಾಥ ಪಾಟೀಲ್, ಅಲ್ಲಿನ ಗೊಂದಲಗಳಿಂದ ಬೇಸತ್ತು ಯಡಿಯೂರಪ್ಪ ಬೆಂಬಲಿಗರಾಗಿ ಕೆಜೆಪಿಗೆ ಜೈ ಎಂದಿದ್ದರು. ಮತ್ತೆ ಕೆಜೆಪಿ- ಬಿಜೆಪಿ ವಿಲೀನ ಪ್ರಕ್ರಿಯೆಯಿಂದಲೂ ಬೇಸತ್ತು ಮೌನವಾಗಿದ್ದ ಅವರು, ಇದೀಗ ಹೈ.ಕ. ಭಾಗಕ್ಕೆ ಪ್ರತ್ಯೇಕ ಸಂವಿಧಾನ ಕೊಡುವ ಕೆಲಸ ಮಾಡಿದ್ದು ಕಾಂಗ್ರೆಸ್ ಎಂದು ಅದಕ್ಕೇ ಜೈಹೋ ಎನ್ನಲು ಸಜ್ಜಾಗಿದ್ದಾರೆ.
  ಬೀದರ್‌ನಲ್ಲಿ ಮಾ.20ರಂದು ಕಾಂಗ್ರೆಸ್ ಸೇರಲಿರುವ ವೈಜನಾಥ ಪಾಟೀಲ್ ಗುಲ್ಬರ್ಗ ಹಾಗೂ ಬೀದರ್ ಸೇರಿದಂತೆ ಹೈ-ಕ ನೆಲದಲ್ಲಿ ಕಲಂ 371(ಜೆ)ಗೆ ಬಲ ನೀಡಿರುವ ಕಾಂಗ್ರೆಸ್ ಜಪ ಮಾಡಲಿದ್ದಾರೆ. 'ಕೈ' ಹಿಡಿಯುವ ಮುನ್ನಾ ದಿನ 'ಕನ್ನಡಪ್ರಭ' ಜೊತೆ ಮಾತನಾಡಿದ ವೈಜನಾಥ ಪಾಟೀಲ್ ಬಿಚ್ಚು ನುಡಿಗಳಿವು...
1. ಇದೇನಿದು ಪಾಟೀಲರೇ ದಿಢೀರ್ ಕೈಪಡೆ ಸೇರುವ ನಿರ್ಧಾರ ಮಾಡಿದ್ರಲ್ಲಾ?
- ಅಯ್ಯೋ.., ಏಕದಂ ಕೈಗೊಂಡ ನಿರ್ಧಾರ ಇದಲ್ರಿ, ಈಚೆಗಷ್ಟೇ ಚುನಾವಣೆ ರಾಜಕೀಯಕ್ಕೆ ಬೈ ಹೇಳಿದ್ದೆ. ಯಾರನ್ನು ಬೆಂಬಲಿಸಬೇಕೆಂಬ ಗೊಂದಲವಿತ್ತು. ಹೈ-ಕ ಹೋರಾಟ ಸಮಿತಿಯ ಸಭೆ ನಡೀತು. ಅಲ್ಲಿ ಹಲವು ಸಂಗತಿಗಳ ಚರ್ಚೆಯೂ ನಡೆಯಿತು. ಕಲಂ 371(ಜೆ)ಗೆ ಬೆಂಬಲವಾಗಿ ದೆಹಲಿ ಹಂತದಲ್ಲಿ ಗಟ್ಟಿಯಾಗಿ ನಿಂತ ಕಾಂಗ್ರೆಸ್‌ಗೆ ಬೆಂಬಲಿಸಬೇಕು ಅಂತ ನಾನಂತೂ ಕೈಹಿಡಿದಿರುವೆ. ದೇಶದಾಗ ಮೋದಿ ಹವಾ ಅಂತಾರಲ್ರಿ, ನಮ್ದು ಗಾಳಿ ವಿರುದ್ಧ ದಿಕ್ಕಿನಲ್ಲಿ ನಡೆಯುವ, ಪ್ರವಾಹದ ವಿರುದ್ಧ ಈಜಿ ಗೆಲ್ಲುವುದೇ ಜಾಯಮಾನ, ಅದನ್ನೇ ಈಗ್ಲೂ ಮಾಡಿರುವೆ.
2. ಹೈ-ಕ ಹೋರಾಟ ಸಮಿತಿ ರೂವಾರಿ ತಾವು, ಹೀಗೆ ಕಾಂಗ್ರೆಸ್‌ಗೆ ಜೈ ಅಂದ್ರೆ ಸಮಿತಿ ಕಥೆ ಏನು?
- ಸಮಿತಿಯಲ್ಲಿ ಎಲ್ಲ ಪಕ್ಷದವರು ಇದ್ದಾರ್ರಿ, ಅಲ್ಲಿ ನಮ್ಮ ವೈಯಕ್ತಿಕ ರಾಜಕೀಯ ವಿಚಾರಗಳ ಚರ್ಚೆ ಮಾಡುತ್ತ ಕುಳಿತ್ರ ಆಗೋದಿಲ್ಲ. ಅದೊಂದು ಪ್ರದೇಶದ ಏಳಿಗೆ ಬಯಸಿ ಹುಟ್ಟಿಕೊಂಡಿರುವ ಹೋರಾಟ ಸಮಿತಿ. ಹೀಗಾಗಿ ವೈಯಕ್ತಿಕ ರಾಜಕೀಯ ನೆಲೆಗಟ್ಟಿನ ನಿರ್ಣಯಗಳಿಗೆ ಸಮಿತಿಯ ವ್ಯವಹಾರ ಯಾವತ್ತಿದ್ರೂ ದೂರ ಇಡಲೇಬೇಕು. ಅದಕ್ಕೇ ನಾನಂತೂ ನನ್ನ 'ಕೈ'ಗೆ ಜೈ ಅನ್ನೋ ನಿರ್ಣಯ ಅಲ್ಲಿ ಚರ್ಚಿಸಿಲ್ಲ. ಬರುವ ದಿನಗಳಲ್ಲಿ ಸಮಿತಿ ಹಾಗೇ ಮುಂದುವರಿತದೆ, ಅಲ್ಲಿನ ಕೆಲಸ ಕಾರ್ಯಗಳು ಹಾಗೇ ಇರುತ್ತವೆ.
3. ಕಾಂಗ್ರೆಸ್ ಸೇರಿದ ಮೇಲೂ ನೀವು ಹೈ-ಕ ಹೋರಾಟ ಸಮಿತಿಯ ಜೊತೆಗೇ ಹೆಜ್ಜೆ ಹಾಕ್ತೀರಾ?
- ಅದನ್ನ ಈಗಲೇ ಹೇಳಲಾಗದು. ಸಮಿತಿಯ ವ್ಯವಹಾರದಲ್ಲಿ ದಿಢೀರ್ ಏನಾದರೂ ಮಾತನಾಡಲಾಗದು. ನಾನಂತೂ ಕಾಂಗ್ರೆಸ್ ಸೇರುವೆ. ನಂತರ ಸಭೆ ಕರೆದು ಚರ್ಚಿಸುವೆ. ಸಮಿತಿಯಲ್ಲಿ ಅನೇಕರು ಹಿರಿಯರಿದ್ದಾರೆ. ಅವರು ಹೇಗಂತಾರೋ ಹಾಗೇ ಚರ್ಚಿಸಿ, ಸಾಧಕ- ಬಾಧಕ ತಾಳೆ ಹಾಕಿ ನೋಡಿ ನಿರ್ಣಯ ಕೈಗೊಂಡರಾಯ್ತು.
4. ಕಾಂಗ್ರೆಸ್ ಬಗ್ಗೆ ನಿಮ್ಮ ದೃಷ್ಟಿಕೋನವೇ ಭಿನ್ನವಾಗಿತ್ತು, ಈಗ ನೋಡಿದ್ರೆ...?
- ನೋಡ್ರಿ ಮೊದ್ಲೆಲ್ಲಾ ನಾನು ಬೈದಿರುವೆ. ಈಚೆಗಿನ ವರ್ಷಗಳಲ್ಲಿ ಕಾಂಗ್ರೆಸ್ ಹೈ.ಕ. ಭಾಗದ ಕಲಂ 371 ಬೇಡಿಕೆಗೆ ಭಾರಿ ಬಂಬಲ ನೀಡಿತು. ಅದನ್ನು ನಾವು ಭೇಷ್ ಅನ್ನಲೇಬೇಕಲ್ಲ. ಬಿಜೆಪಿಯವರು ಸಂಸತ್ತಿನಲ್ಲಿ ಮಸೂದೆ ಬಂದಾಗ ಕೈ ಎತ್ತಿದ್ರೆ ಸಾಕೇ, ಕಾಂಗ್ರೆಸ್ಸಿಗರು ಮಸೂದೆ ರೂಪ ಕೊಟ್ರು. ನಮಗೊಂದು ಪ್ರತ್ಯೇಕ ಸಂವಿಧಾನ ಕೊಟ್ರು. ಕೇಂದ್ರ ಮಸೂದೆ ಕೊಟ್ಟ ಮರುಕ್ಷಣವೇ ರಾಜ್ಯದಲ್ಲೂ ಸಿದ್ದರಾಮಯ್ಯ ಸರ್ಕಾರ ಪ್ರತ್ಯೇಕ ನಿಯಮ ರಚಿಸಿ ಹೈ-ಕ ಮಂದಿಗೆ ಅನೇಕ ಲಾಭಗಳನ್ನು ನೀಡಿದೆ. ಇದೆಲ್ಲ ಕಾಂಗ್ರೆಸ್ ಇಚ್ಛಾಶಕ್ತಿಯ ಫಲವಲ್ಲವೇ?
5. 'ಕೈ'ಗೆ ಜೈ ಎನ್ನುತ್ತಿದ್ದೀರಿ.., ನಿಮ್ಮ ಮುಂದಿನ ನಡೆ ಏನು?
- ಚುನಾವಣೆ ರಾಜಕೀಯಕ್ಕೆ ಬೈ ಹೇಳಿದ್ದೇನೆ, ಅದಕ್ಕೇ ಬದ್ಧನಾಗಿರುತ್ತೇನೆ. ಇನ್ನು ಕೈ ಪಕ್ಷದಲ್ಲಿದ್ದುಕೊಂಡೇ ರಾಜ್ಯ, ರಾಷ್ಟ್ರದ ಪ್ರಗತಿಗೆ ಕೈಜೋಡಿಸುವೆ. ಬರುವ ದಿನಗಳಲ್ಲಿ ಹೈ-ಕ ಭಾಗಕ್ಕೆ ಕಲಂ 371(ಜೆ) ಲಾಭ ಹೆಚ್ಚಿನ ವಿಧದಲ್ಲಿ ದೊರಕುವಂತೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುವೆ. ಎಲ್ಲ ಪಕ್ಷಕ್ಕೂ ಬೆಂಬಲಿಸಿ ನೋಡಿದ್ದೇನೆ. ಈಗ ಕಾಂಗ್ರೆಸ್ ಸರತಿ ಬಂದಿದೆ. ಅದಕ್ಕೆ ಬೆಂಬಲಿಸುತ್ತಿದ್ದೇನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement