ಸಾರಿಗೆ ಕಾರ್ಮಿಕರ ಆರೋಗ್ಯ ತಪಾಸಣೆ
ಶಹಾಪುರ: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ನಾರಾಯಣ ಹೆಲ್ತ್ ಸಿಟಿ ಅವರ ಸಂಯುಕ್ತಾಶ್ರಯದಲ್ಲಿ ವಿಭಾಗದ ಸಿಬ್ಬಂದಿ ಹಾಗೂ ಅವರ ಕುಟುಂಬ ವರ್ಗದವರಿಗೆ ಹೃದಯ ಸಂಬಂಧಿ ರೋಗ ಮತ್ತು ನರರೋಗ ತಪಾಸಣೆ ಶಿಬಿರವನ್ನು ಪಟ್ಟಣದ ನೂತನ ಬಸ್ನಿಲ್ದಾಣದ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಯಾದಗಿರಿ ಈ.ಕ.ರ.ಸಾ ವಿಭಾಗೀಯ ನಿಯಂತ್ರಣಾಧೀಕಾರಿ ಮಲ್ಲಿಕಾರ್ಜುನಯ್ಯ ಮಾತನಾಡಿ, 'ಎಲ್ಲರಿಗೂ ಆರೋಗ್ಯ, ಎಲ್ಲೆಡೆಯೂ ಆರೋಗ್ಯ' ಎಂಬ ಕಾರ್ಯಕ್ರಮದ ಮೂಲಕ ಸಮುದಾಯ ಆರೋಗ್ಯ ಸುಧಾರಿಸುವ ನಿಟ್ಟಿನಲ್ಲಿ ಈ.ಕ.ರ ಸಾರಿಗೆ ಸಂಸ್ಥೆ ಉತ್ತಮ ಕಾರ್ಯ ಮಾಡುತ್ತಿದೆ. ಈ ಮೂಲಕ ಕಾರ್ಮಿಕರ ಹಿತಾಸಕ್ತಿಗೆ ಮುಂದಾಗಿದೆ ಎಂದು ತಿಳಿಸಿದರು. ನಾರಾಯಣ ಹೆಲ್ತ್ ಸಿಟಿ ವೈದ್ಯ ಡಾ. ವಿಶ್ವಾಸ, ಡಾ. ಅರ್ಜುನ, ಡಾ. ಅನಿರ್ಬಾನ, ದೇವರಾಜನಾಯಕ್ ಉಪಸ್ಥಿತರಿದ್ದರು. ಶಿಬಿರದಲ್ಲಿ 200ಕ್ಕಿಂತಲೂ ಹೆಚ್ಚು ಸಾರಿಗೆ ಕಾರ್ಮಿಕರ ತಪಾಸಣೆ ನಡೆಸಲಾಯಿತು. ಶಿಬಿರದಲ್ಲಿ ಕಾರ್ಮಿಕ ಕಲ್ಯಾಣ ಅಧಿಕಾರಿ ಮಹಿಪಾಲ ಬೇಗಾರ, ಗೋಪಾಲರಾವ ಮತ್ತು ಘಟಕ ವ್ಯವಸ್ಥಾಪಕ ಕೃಷ್ಣಮೂರ್ತಿ, ಸಿಬ್ಬಂದಿ ಉಪಸ್ಥಿತರಿದ್ದರು.
ಸತತ ಪ್ರಯತ್ನದಿಂದ ಯಶಸ್ಸು ಸಾಧ್ಯ
ಸುರಪುರ: ಜೀವನದಲ್ಲಿ ವಿದ್ಯಾರ್ಥಿಗಳು ಸತತ ಪ್ರಯತ್ನದಿಂದ ಉನ್ನತಿ ಸಾಧಿಸಬಹುದು ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಶಾಂತಪ್ಪ ಬೂದಿಹಾಳ ತಿಳಿಸಿದರು. ತಾಲೂಕಿನ ರಂಗಂಪೇಟೆಯ ಶಾಂತಿಕೇತನ ವಿದ್ಯಾವರ್ಧಕ ಸಂಘದ ಗುರುಕುಲ ಶಿಕ್ಷಣ ಸಂಸ್ಥೆಯ ವತಿಯಿಂದ ಈಚೆಗೆ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಿದ್ದರು. ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮ ಗುಣಗಳನ್ನು ಅಳವಡಿಸಿಕೊಂಡು ಸಮಾಜದಲ್ಲಿ ಅತ್ಯುತ್ತಮ ವ್ಯಕ್ತಿಗಳಾಗಿ ಬಾಳಬೇಕು ಎಂದು ಸಲಹೆ ನೀಡಿದರು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ, ಅವರನ್ನು ಸರಿ ದಾರಿಯಲ್ಲಿ ನಡೆಸಬೇಕು. ದೇಶಾಭಿಮಾನವನ್ನು ತುಂಬುವ ಮೂಲಕ ಭವ್ಯ ಭಾರತದ ಸತ್ಪಪ್ರಜೆಗಳಾಗಿ ನಿರ್ಮಿಸುವ ಗುರುತರ ಹೊಣೆ ಶಿಕ್ಷಕರಿಗಿದೆ ಎಂದರು. ಸಂಸ್ಥೆಯ ಅಧ್ಯಕ್ಷ ಸೋಮಶೇಖರ ಶಾಬಾದಿ ಅಧ್ಯಕ್ಷತೆ ವಹಿಸಿದ್ದರು ರೈತ ಮುಖಂಡ ಡಾ.ಶರಣಪ್ಪ ಯಾಳಗಿ ಇತರರಿದ್ದರು.
ಹತ್ತಿಗೆ ಬೆಂಕಿ:
70 ಸಾವಿರ ನಷ್ಟ
ಯಾದಗಿರಿ: ಟ್ರ್ಯಾಕ್ಟರ್ನಲ್ಲಿ ಮಾರಾಟಕ್ಕೆ ಸಾಗಿಸುತ್ತಿದ್ದ ಹತ್ತಿಗೆ ಆಕಸ್ಮಿಕ ಬೆಂಕಿ ತಗುಲಿ ಸುಮಾರು 70 ಸಾವಿರ ರೂ. ನಷ್ಟವಾಗಿದೆ. ತಾಲೂಕಿನ ಕಟಗಿಶಹಾಪುರದ ಹೊನ್ನಪ್ಪ ಎಂಬ ರೈತ ಬೆಳೆದ 20 ಕ್ವಿಂಟಾಲ್ ಹತ್ತಿಯನ್ನು ಟ್ರ್ಯಾಕ್ಟರ್ನಲ್ಲಿ ಮಾರಾಟಕ್ಕೆ ಸಾಗಿಸುತ್ತಿದ್ದಾಗ, ನಗರದ ಹೊಸಳ್ಳಿ ಕ್ರಾಸ್ ಹತ್ತಿರ ಬೆಂಕಿ ತಗುಲಿ ಸುಮಾರು 15 ಕ್ವಿಂಟಾಲ ಹತ್ತಿ ಸುಟ್ಟು ಭಸ್ಮವಾಗಿದೆ. ಸುದ್ದಿ ತಿಳಿದ ಅಗ್ನಶಾಮಕ ದಳದ ಸಿಬ್ಬಂದಿ ಆಗಮಿಸಿ ನಂದಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.