ಅಲ್ಲಂಪ್ರಭು ಜಾತ್ರೆಗೆ ಭಕ್ತರ ದಂಡು
ಆಳಂದ: ತಾಲೂಕಿನ ಮಾಡಿಯಾಳ ಗ್ರಾಮದಿಂದ ಶಿವರಾಯ ಮುತ್ತ್ಯಾ ವಡಿಯಾರ ನೇತೃತ್ವದಲ್ಲಿ ಬೀದರ್ ಜಿಲ್ಲೆಯ ಅಷ್ಟೂರ ಗ್ರಾಮದ ಅಲ್ಲಂಪ್ರಭುವಿನ ಜಾತ್ರೆಗೆ ಹಲವಾರು ಭಕ್ತರು, ಮಹಿಳೆಯರು, ಮಕ್ಕಳು ಭಕ್ತಿ- ಭಾವದಿಂದ ಪಾದಯಾತ್ರೆ ಮೂಲಕ ತೆರೆಳಿದರು. ಸುಮಾರು ಒಂದು ತಿಂಗಳು ಕಾಲ ನಡೆಯುವ ಅಲ್ಲಂಪ್ರಭುವಿನ ಜಾತ್ರೆಗೆ ಮಾಡಿಯಾಳ ಗ್ರಾಮದ ಶಿವರಾಯ್ಯ ಮುತ್ತ್ಯಾ ವಡಿಯಾರ ಅಷ್ಟೂರ ಗ್ರಾಮಕ್ಕೆ ಹೋಗಿ ಜಾತ್ರೆಗೆ ಚಾಲನೆ ನೀಡುವರು. ಪ್ರತಿದಿನ ಸ್ಥಳೀಯರಿಂದ ಪುರಾಣ ಪ್ರವಚನ, ಭಜನೆ, ಧಾರ್ಮಿಕ ಸಭೆ ಆಯೋಜಿಸಿ ಭಕ್ತರಿಗೆ ಮನೋರಂಜನೆ ಒದಗಿಸುವರು. ಅಲ್ಲದೆ ಬಂದ ಭಕ್ತರಿಗೆ ದಾಸೋಹ ವ್ಯವಸ್ಥೆ ಮಾಡಿಕೊಡುವುದರ ಮೂಲಕ ಯಾವುದೇ ಕೊರತೆಯಾಗದಂತೆ ಗ್ರಾಮಸ್ಥರು ನಿಗಾ ವಹಿಸುವರು. ಬಹುದಿನಗಳಿಂದಲೂ ಬೀದರ್ ಜಿಲ್ಲೆಗೂ ಆಳಂದ ತಾಲೂಕಿನ ಮಾಡಿಯಾಳ ಗ್ರಾಮಕ್ಕೂ 800 ವರ್ಷಗಳ ಇತಿಹಾಸವಿದೆ. ಶಿವರಾಯ ಮುತ್ತ್ಯಾ ವಡಿಯಾರ ಅವರು 11ನೇ ತಲೆಮಾರಿನ ಪೂಜಾರಿಯಾಗಿ ನೇಮಕಗೊಂಡಿದ್ದಾರೆ. ಇದು ಇವರ 27ನೇ ಜಾತ್ರೆಯಾಗಿದೆ. ಪ್ರತಿ ವರ್ಷ ಹೋಳಿಹಬ್ಬದ ನಂತರ ಅಷ್ಟೂರ ಗ್ರಾಮಕ್ಕೆ ತೆರೆಳಿ ಜಾತ್ರೆಗೆ ಚಾಲನೆ ನೀಡುವರು.
ಭೋವಿ ಸಮಾಜದ ಅಧ್ಯಕ್ಷರಾಗಿ ಚೌಧರಿ
ಶಹಾಬಾದ್: ಇತ್ತೀಚೆಗೆ ನಡೆದ ನಗರದ ಭೋವಿ (ವಡ್ಡರ) ಸಮಾಜದ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಸುಭಾಷ ಚೌಧರಿ ಅವರನ್ನು, ಪ್ರಧಾನ ಕಾರ್ಯದರ್ಶಿಯನ್ನಾಗಿ ವೆಂಕಟೇಶ ಬಿ. ಕುಸಾಳೆ ಅವರನ್ನು ಆವಿರೋಧವಾಗಿ ಆಯ್ಕೆ ಮಾಡಲಾಯಿತು. ಸಮಾಜದ ಮುಖಂಡರಾದ ರಾಜು ಮೇಸ್ತ್ರಿ, ಶಿವಾಜಿ ಕುಸಾಳೆ, ವೆಂಕಟೇಶ ಕುಸಾಳೆ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ಸಂಚಾಲಕರಾಗಿ ಶೇರಿಕಾರ ನೇಮಕ
ಶಹಾಬಾದ್: ನಗರ ಘಟಕದ ಬಜರಂಗ ದಳದ ಸಂಚಾಲಕರಾಗಿ ಬಸವರಾಜ ಶೇರಿಕಾರ ಅವರನ್ನು ಜಿಲ್ಲಾ ಅಧ್ಯಕ್ಷ ಚಂದ್ರಕಾಂತ ಕಾಳಗಿ, ತಾಲೂಕು ಅಧ್ಯಕ್ಷ ರಾಮು ಕುಸಾಳೆ ನೇಮಿಸಿದ್ದಾರೆ. ಸಹ ಸಂಚಾಲಕರಾಗಿ ಸಂತೋಷ ಪುಲಸೇ, ಮನೋಹರ ಅವರನ್ನು ನೇಮಿಸಲಾಗಿದೆ.
3 ಕರುಗಳಿಗೆ ಜನ್ಮ ನೀಡಿದ ಹಸು
ಶಹಾಬಾದ್: ಶಹಾಬಾದ್ ಬಳಿಯ ಮುಗಳನಾಗಾವಿ ಗ್ರಾಮದ ರೈತ ಈರಣ್ಣ ಶರಣಪ್ಪ ದಂಡೋತಿ ಅವರ ನಿವಾಸದಲ್ಲಿ ಈಚೆಗೆ ಆಕಳೊಂದು ಮೂರು ಕರುವಿಗೆ ಜನ್ಮ ನೀಡಿದೆ. ಮೂರು ಕರುಗಳ ಪೈಕಿ ಒಂದು ಹೋರಿ ಮತ್ತು ಎರಡು ಆಕಳು ಕರುಗಳಿವೆ. ಮೂರು ಕರುಗಳು ಆರೋಗ್ಯವಾಗಿದ್ದು ಗ್ರಾಮಸ್ಥರು ಈ ಅಪರೂಪದ ಕ್ಷಣಗಳನ್ನು ನೋಡಿ ಆನಂದಿಸುತ್ತಿದ್ದಾರೆ.
ಮಟಕಾ: ಒಬ್ಬನ ಬಂಧನ
ಗುಲ್ಬರ್ಗ: ಇಲ್ಲಿನ ಶಿವಾಜಿ ನಗರದ ಮಸೀದಿ ಹತ್ತಿರ ಮಟಕಾ ಬರೆದುಕೊಳ್ಳುತ್ತಿದ್ದಾಗ ಪೊಲೀಸರು ನಡೆಸಿದ ದಾಳಿಯಲ್ಲಿ ಕೋಬಾಜಿ ಪವಾರ್ ಸಿಕ್ಕಿಬಿದ್ದಿದ್ದಾನೆ. ಡಿಸಿಐಬಿ ಘಟಕದ ಸಿಬ್ಬಂದಿ ಈ ದಾಳಿ ನಡೆಸಿ ಪವಾರರನ್ನು ಬಂಧಿಸಿ ವಶಕ್ಕೆ ತೆಗೆದುಕೊಂಡಿದ್ದಾರೆ. ಬಂಧಿತನಿಂದ 1,800 ಜಪ್ತಿ ಮಾಡಲಾಗಿದೆ. ಚೌಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪದಾಧಿಕಾರಿಗಳು
ಕೆಂಭಾವಿ: ಫತ್ತೆಪುರ ಗ್ರಾಮದಲ್ಲಿ ಗೋಲಂಪಲ್ಲಿಯ ವಾಲ್ಮಿಕಿ ಅಶ್ರಮದ ವರದಾನೇಶ್ವರ ಸ್ವಾಮಿಗಳ ಸಮ್ಮುಖದಲ್ಲಿ ಇತ್ತೀಚೆಗೆ ಮಹರ್ಷಿ ವಾಲ್ಮಿಕಿ ಯುವಕ ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸಿದ್ದಪ್ಪ ಟಣಕೆದಾರ (ಅಧ್ಯಕ್ಷ), ಬಸವರಾಜ ಯಾಳಗಿ (ಉಪಾಧ್ಯಕ್ಷ), ಶರಣು ಮುಡುಬೋಳ (ಕಾರ್ಯದರ್ಶಿ), ದಯಾನಂದ ರಾಜಾಪುರ (ಸ. ಕಾರ್ಯದರ್ಶಿ), ಹಣಮಂತ್ರಾಯ ಕಾಡಮಗೇರಿ (ಖಜಾಂಚಿ) ಆಯ್ಕೆಯಾದರು.