ಗೆಲವಿನ ಅಂತರ ಹಿಗ್ಗಿದ್ರೆ ಸಾಕು, ಅದೇ ನನಗೆ ಅವಿರೋಧ ಆಯ್ಕೆ
ಕ.ಪ್ರ. ವಾರ್ತೆ ಗುಲ್ಬರ್ಗ ಮಾ.20
ಸಾಕಷ್ಟು ಕೆಲ್ಸ ಮಾಡೀನಿ, ಹಾಗಂತ ಸುಮ್ನೆ ಕೂಡೋ ಹಾಗಿಲ್ಲ. ಅತಿಯಾದ ವಿಶ್ವಾಸ ಎಲ್ಲ ಕಾಲಕ್ಕೂ ಸರಿಯಲ್ಲ. ಪಾಪು, ರಾಯರೆಡ್ಡಿಯಂಥವರು ಅವಿರೋಧ ಆಯ್ಕೆ ಹೇಳಿಕೆ ನೀಡಿದ್ದಾರೆ. ಅದು ಅವರ ಸದಭಿಮಾನದ ಸಂಕೇತ. ಪ್ರಜಾಪ್ರಭುತ್ವದ ಜೀವಂತಿಕೆಗೆ ಚುನಾವಣೆಯೇ ಮದ್ದು, ಅದನ್ನೆದುರಿಸಲು ಸಿದ್ಧ. ನನ್ನ ಕೆಲಸ ಕಾರ್ಯಗಳನ್ನು ಮೆಚ್ಚಿಕೊಳ್ಳುತ್ತಿರುವ ಜನತೆ ಚುನಾವಣೆಯಲ್ಲಿ ನನ್ನ ಕೈ ಹಿಡಿದು ಗೆಲವಿನ ಅಂತರ ಹಿಗ್ಗುವಂತೆ ಮಾಡಿದರೆ ಅದೇ ನನ್ನ ಅವಿರೋಧ ಆಯ್ಕೆ ಅಂತ ತಿಳಿಯುವೆ...
- ಸತತ 9 ಬಾರಿ ಅಸೆಂಬ್ಲಿ ಚುನಾವಣೆ ಸ್ಪರ್ಧಿಸಿ ಗೆದ್ದು, ಇದೀಗ ಪುನರಾಯ್ಕೆ ಬಯಸಿ ಗುಲ್ಬರ್ಗ ಮೀಸಲು ಕ್ಷೇತ್ರದಿಂದ ಅಖಾಡದಲ್ಲಿರುವ ಖರ್ಗೆ ಗುರುವಾರ ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಆಡಿದ ಮಾತುಗಳಿವು.
ಕಾರ್ಮಿಕ, ರೇಲ್ವೆ ಸಚಿವನಾಗಿ ಗುಲ್ಬರ್ಗ, ಹೈ-ಕ ಸೇರಿದಂತೆ ರಾಜ್ಯಾದ್ಯಂತ ಸಾಕಷ್ಟು ಜನಪರ ಕೆಲಸಗಳನ್ನು ಮಾಡಿರುವೆ. ಜನಮೆಚ್ಚುಗೆಯೂ ದೊರಕಿದೆ ಎಂದ ಖರ್ಗೆ, ರೇಲ್ವೆ ವಲಯದಲ್ಲಿನ ಅನೇಕ ಯೋಜನೆಗಳನ್ನು ಆರಂಭಿಸಲಾಗಿದೆ. ಅವುಗಳನ್ನು ಬರುವ ದಿನಗಳಲ್ಲಿ ಪೂರ್ಣ ಮಾಡಲು ಜನಾಶೀರ್ವಾದ ಸಿಗುತ್ತದೆ ಎಂಬ ಆಶಯ ನನ್ನದು ಎಂದರು.
ಜನಪರ ಕೆಲಸಗಳೇ ಶ್ರೀರಕ್ಷೆ: ಶೋಷಿತರು, ಮಹಿಳೆಯರು ಹಾಗೂ ಕಡುಬಡವರ ಪರವಾಗಿ ತಾವು ಅನೇಕ ಪ್ರಗತಿ ಕೆಲಸಗಳಿಗೆ ಚಾಲನೆ ನೀಡಿದ್ದೇನೆ. ಆ ಯೋಜನೆಗಳ ಫಲಾನುಭವಿಗಳೂ ಆಗಿದ್ದಾರೆ. ರೇಲ್ವೆ ವಲಯದಲ್ಲಿನ ಕೆಲಸಗಳನ್ನು ತಾವೇ ನಿತ್ಯವೂ ನೋಡುತ್ತಿದ್ದಾರೆ. ಹೀಗಿರುವಾಗ ಜನರ ನಿರೀಕ್ಷೆಯಂತೆ ಕೆಲಸ ಮಾಡಿರುವ ತೃಪ್ತಿಯಿದೆ. ಚುನಾವಣೆಯಲ್ಲಿ ಇದೇ ಅಲ್ಲವೆ ಗೆಲವಿಗೆ ಶ್ರೀರಕ್ಷೆ ಎಂದರು ಖರ್ಗೆ.
ಸಂವಿಧಾನದ ಕಲಂ 371(ಜೆ) ಜಾರಿಗೊಂಡಿದ್ದು, ಇಎಸ್ಐಸಿ ಆಸ್ಪತ್ರೆ, ಕೇಂದ್ರೀಯ ವಿವಿ ಹೀಗೆ ಹಲವು ಯೋಜನೆಗಳನ್ನು ಗುಲ್ಬರ್ಗಕ್ಕೆ ತಂದವರು ನೀವು, ಈ ಬಾರಿ ಪ್ರಗತಿ ಕೆಲಸಗಳ ಹಿನ್ನೆಲೆಯಲ್ಲಿ ನೋಡಿದರೆ ತಮ್ಮ ಗೆಲವು ನಿಶ್ಚಿತ ಎಂಬ ಮಾತುಗಳಿವೆ, ಏನಂತೀರಿ ಎಂಬ ವರದಿಗಾರರ ಪ್ರಶ್ನೆಗೆ ಸ್ಪಂದಿಸಿದ ಅವರು, ಅತಿಯಾದ ವಿಶ್ವಾಸ ಸರಿಯಲ್ಲ. ಪ್ರಜಾಪ್ರಭುತ್ವ, ಚುನಾವಣೆಯಲ್ಲಿ ಅತಿಯಾದ ವಿಶ್ವಾಸವೇ ಕೆಲವೊಮ್ಮೆ ಮುಳುವಾಗುತ್ತದೆ ಎಂದರು.
ಕೈಕಟ್ಟಿ ಕುಳಿತರೆ ಆಗದು: ಚುನಾವಣೆಯನ್ನು ಚುನಾವಣೆಯಾಗಿಯೇ ಸ್ವೀಕರಿಸಬೇಕೇ ಹೊರತು ಜನಪರ ಕೆಲಸಗಳೇ ಗೆಲವು ತಂದು ಕೊಡುತ್ತವೆ, ಚುನಾವಣೆಯಲ್ಲಿ ಏಕೆ ಓಡಾಡುವುದು ಎಂದು ಕುಳಿತರೆ ಆಗದು. ಪಕ್ಷ, ಶಾಸಕರು, ನಾಯಕರಾಯಾಗಿ ಎಲ್ಲರೂ ಸಂಘಟಿತರಾಗಿ ಹೆಜ್ಜೆ ಇಟ್ಟಾಗ ಮಾತ್ರ ಗೆಲವು ಹೊಂದಲು ಸಾಧ್ಯ ಎಂದು ಖರ್ಗೆ ಮಾರ್ಮಿಕವಾಗಿ ನುಡಿದರು.