ಪ್ರಜಾಪ್ರಭುತ್ವದಲ್ಲಿ ಅವಿರೋಧ ಆಯ್ಕೆ ಬೇಡ: ಖರ್ಗೆ
ಕ.ಪ್ರ. ವಾರ್ತೆ ಆಳಂದ ಮಾ.20
ಸಂವಿಧಾನ ಉದ್ದೇಶದಂತೆ ಸ್ಥಳೀಯ, ರಾಜ್ಯ ಮತ್ತು ಕೇಂದ್ರ ಸರ್ಕಾರದ ಆಡಳಿತವನ್ನು ನಡೆಸಲು ಚುನಾಯಿತ ಪ್ರತಿನಿಧಿಗಳ ಚುನಾವಣೆ ನಡೆಯಬೇಕು. ಆದ್ದರಿಂದ ನಾನು ಅವಿರೋಧ ಆಯ್ಕೆ ಬಯಸುವುದಿಲ್ಲ, ಚುನಾವಣೆ ಎದುರಿಸುತ್ತೇನೆಂದು ರೇಲ್ವೆ ನಿಕಟ ಪೂರ್ವ ಸಚಿವ ಹಾಗೂ ಗುಲ್ಬರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಗುಲ್ಬರ್ಗ ಗ್ರಾಮೀಣ ಮತ್ತು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ತಾಲೂಕಿನ ವಿ.ಕೆ.ಸಲಗರ ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಏರ್ಪಡಿಸಿದ್ದ ನವಭಾರತ ನಿರ್ಮಾಣ ಅಭಿಯಾನ ಉದ್ದೇಶಿಸಿ ಮಾತನಾಡಿದರು.
ಅಭಿವೃದ್ಧಿ ಕೆಲಸ ಮಾಡಿರುವ ಖರ್ಗೆ ಅವರಿಗೆ ಅವಿರೋಧ ಆಯ್ಕೆ ಮಾಡಬೇಕೆಂದು ಪಾಟೀಲ ಪುಟಪ್ಪನವರು ಸೇರಿದಂತೆ ನಾಡಿನ ಅನೇಕ ಹಿರಿಯರು, ಅಭಿಮಾನಿಗಳು ಹೇಳಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜೀವಂತಿಕೆಗೆ ಚುನಾವಣೆ ಅಗತ್ಯ. ಬಹುಮತ ನೀಡುವ ಹಕ್ಕು ಮತದಾರರ ಮೇಲಿದೆ. ಅಭ್ಯರ್ಥಿಯ ಅಭಿವೃದ್ಧಿ ಕಾರ್ಯಗಳನ್ನು ನೋಡಿ ವೋಟು ಕೊಡಿ ಎಂದು ಖರ್ಗೆ ಮನವಿ ಮಾಡಿದರು.
ಮೋದಿ ವಿರುದ್ಧ ಟೀಕೆ: ದೇಶವನ್ನು ಸುಭದ್ರಗೊಳಿಸಲು ಕಾಂಗ್ರೆಸ್ ಬೆಂಬಲಿಸಿ, ಯಾವುದೇ ಕಾರಣಕ್ಕೂ ದೇಶವನ್ನು ಒಡೆಯುವ ಬಿಜೆಪಿಯನ್ನು ನಂಬಬೇಡಿ ಎಂದು ಕಿವಿಮಾತು ಹೇಳಿದ ಅವರು, ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಜನಪರ ರೈತಪರ ಇರುವ ವ್ಯಕ್ತಿಯಲ್ಲ. ಅವರು ಪಡೆದುಕೊಳ್ಳುತ್ತಿರುವ ಪ್ರಚಾರವನ್ನು ನೋಡಿದಾಗ ಉನ್ನತ ಜನರನ್ನು ಉದ್ಯಮಿಗಳನ್ನು ಓಲೈಸಿಕೊಂಡು ಸ್ವಾರ್ಥ ಸಾಧನೆಯಲ್ಲಿ ತೊಡಗಿಸಿಕೊಂಡಿರುವುದು ಗೊತ್ತಾಗುತ್ತದೆ ಎಂದು ಆರೋಪಿಸಿದರು.
ಶಾಸಕ ಜಿ.ರಾಮಕೃಷ್ಣ ಮಾತನಾಡಿ, ಜನರಿಗಾಗಿ ದುಡಿದ ಇಂಥ ಮಹಾನ್ ನಾಯಕರಿಗೆ ಮತ ನೀಡಿ ಗೆಲ್ಲಿಸಬೇಕೆಂದು ಮನವಿ ಮಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿನಾಥ ಪಾಟೀಲ ಸ್ವಂತ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಪಂ ಅಧ್ಯಕ್ಷ ರಮೇಶ ಮರಗೋಳ, ಕೆಎಂಎಫ್ ಅಧ್ಯಕ್ಷ ಸೋಮಶೇಖರ ಗೋನಾಯಕ, ಹೊನ್ನನಾಯಕ, ಸುಭಾಷ ಮುರುಡ ಮುಂತಾದವರು ಉಪಸ್ಥಿತರಿದ್ದರು.
ಪ್ರೌಢಶಾಲೆ ಶಿಕ್ಷಕ ವೃತ್ತಿಗೆ ರಾಜಿನಾಮೆ ನೀಡಿದ ಶರಣು ಸಲಗರ ಮತ್ತಿತರರು ಖರ್ಗೆ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದರು. ಶರಣಗೌಡ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಅಂಬರಾಯ ಅಷ್ಟಗಿ ವಂದಿಸಿದರು.