ಕಾವಲುಗಾರನ ಕೊಂದು ದರೋಡೆ
ಗುಲ್ಬರ್ಗ: ಇಲ್ಲಿನ ಗಂಜ್ ಪ್ರದೇಶದ ಸ್ಟೇಟ್ ಬ್ಯಾಂಕ್ ಆಫ್ ಹೈದ್ರಾಬಾದ್ ಕಾಲೋನಿಯಲ್ಲಿರುವ ನಿಮ್ರಾ ಮಂಜಿಲ್ ಮನೆಯ ಕಾವಲುಗಾರರನ್ನು ಕೊಲೆ ಮಾಡಿ ಲಕ್ಷಾಂತರ ರುಪಾಯಿ ಮೌಲ್ಯದ ನಗ- ನಾಣ್ಯ ದೋಚಿಕೊಂಡು ಹೋಗಿರುವ ಘಟನೆ ಮಂಗಳವಾರ ನಸುಕಿನಲ್ಲಿ ಸಂಭವಿಸಿದೆ. ರಿಯಲ್ ಇಸ್ಟೇಟ್ ಉದ್ಯಮಿ ಸೈಯ್ಯದ್ ಜಾವೇದ್ ನೂಮಾನ್ ಎಂಬುವವರಿಗೆ ಸೇರಿದ ಮನೆಯಲ್ಲಿ ಈ ದರೋಡೆ ಸಂಭವಿಸಿದೆ. ಮನೆಯ ಕಾವಲುಗಾರ ಎಂಎಸ್ಕೆ ಮಿಲ್ ನಿವಾಸಿ ಅಬ್ದುಲ್ ನಬಿ ಅಲ್ಲಾವುದ್ದೀನ್ ಸಾಬ್ (55) ಕೊಲೆಯಾದವರು. ಇವರ ಕತ್ತು ಕುಯ್ದು ಕೊಲೆ ಮಾಡಲಾಗಿದ್ದು ಸಾಕ್ಷಿ ನಾಶಕ್ಕಾಗಿ ಶವ ಸುಡುವ ಪ್ರಯತ್ನಗಳೂ ನಡೆದಿವೆ.
ದಾಖಲೆ ಪತ್ರಗಳಿಗೆ ಬೆಂಕಿ: ಮನೆಯಲ್ಲಿನ ಸೂಟ್ಕೇಸ್ನಲ್ಲಿನ ದಾಖಲೆ ಪತ್ರಗಳನ್ನು ಚೆಲ್ಲಾಪಿಲ್ಲಿ ಮಾಡಿ ಅವುಗಳಿಗೆ ಬೆಂಕಿ ಇಡಲಾಗಿದೆ. ಅಲ್ಮೇರಾ ಒಡೆದು ಅಲ್ಲಿಂದ ಚಿನ್ನಾಭರಣ, ಹಣ ಸೇರಿದಂತೆ ಲಕ್ಷಾಂತರ ರುಪಾಯಿ ಮೌಲ್ಯದ ನಗದು, ಒಡವೆ ಅಪರಿಸಿರುವ ಶಂಕೆಗಳಿವೆ. ಮನೆಯೊಡೆಯ ಸೈಯ್ಯದ್ ನೂಮಾನ್ ಕುಟುಂಬ ಸದಸ್ಯರ ಸಮೇತ ದೆಹಲಿಗೆ ಹೋಗಿದ್ದಾಗ ಈ ಘಟನೆ ಸಂಭವಿಸಿದೆ. ಅವರು ದೆಹಲಿಯಿಂದ ಮರಳಿ ಬಂದ ಮೇಲಷ್ಟೇ ಈ ಘಟನೆಯಲ್ಲಿ ಏನೆಲ್ಲಾ ಕಳವಾಗಿದೆ ಎಂಬುದರ ಮಾಹಿತಿ ದೊರಕಲಿದೆ. ಈ ಪ್ರಕರಣ ಎಸ್ಬಿಎಚ್ ಬಡಾವಣೆಯಲ್ಲಿ ಭಯದ ಅಲೆ ಹುಟ್ಟುಹಾಕಿದೆ. ಬಡಾವಣೆಯ ಜನತೆ ತಮ್ಮ ಸುತ್ತಲೇ ಇಂತಹ ಘೋರ ಕುಕೃತ್ಯ ನಡೆದಿದೆಯಲ್ಲ ಎಂದು ಭೀತಿಗೊಳಗಾಗಿದ್ದಾರೆ.