ಪಬ್ಲಿಕ್ ಶಾಲೆ ಆರ್ಟಿಇ ಪಟ್ಟಿ ರದ್ದತಿಗೆ ದಸಂಸ ಒತ್ತಾಯ
ಚಿತ್ತಾಪುರ: ತಾಲೂಕಿನ ವಾಡಿಯ ಡಿಎವಿ ಪಬ್ಲಿಕ್ ಶಾಲೆಯಲ್ಲಿ 2014 ನೇ ಸಾಲಿಗಾಗಿ ಅರ್ಹ ಆರ್ಟಿಇ ಫಲಾನುಭವಿಗಳ ಪಟ್ಟಿಯು ಸಂಪೂರ್ಣವಾಗಿ ದೋಷಪೂರಿತವಾಗಿದೆ. ಅದನ್ನು ರದ್ದು ಮಾಡಿ ಅರ್ಹ ಫಲಾನುಭವಿಗಳ ಪಟ್ಟಿ ಪ್ರಕಟಿಸುವಂತೆ ಕ್ರಮ ಕೈಗೊಳ್ಳಬೇಕೆಂದು ದಸಂಸ ತಾಲೂಕು ಸಂಚಾಲಕ ರಮೇಶ ಕವಡೆ ಒತ್ತಾಯಿಸಿದ್ದಾರೆ. ಡಿಎವಿ ಪಬ್ಲಿಕ್ ಶಾಲೆಯವರು ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡದೇ ರಾಜಕೀಯ ಒತ್ತಡಕ್ಕೆ ಹಾಗೂ ಹಣದ ಅಮಿಷಕ್ಕೆ ಒಳಗಾಗಿ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ವಾಡಿ ವಾರ್ಡ್ 6, 7, 17 ರಲ್ಲಿಯ ಮಕ್ಕಳು ಒಂದು ಕಿ.ಮೀ ಅಂತರದಲ್ಲಿದ್ದರೂ ಮಕ್ಕಳನ್ನು ಪರಿಗಣಿಸಿಲ್ಲ. ಪಾಲಕರನ್ನು ಸಭೆಗೆ ಕರೆಯದೇ ಅವರ ಗಮನಕ್ಕೆ ತರದೇ ನೌಕರರ ಮಕ್ಕಳನ್ನು ಅಯ್ಕೆ ಮಾಡಿಕೊಂಡಿರುತ್ತಾರೆ. ಇದರಿಂದ ಬಡ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎಂದರು. ಆಯ್ಕೆ ಮಾಡಿರುವ ಪಟ್ಟಿಯು ಸರ್ಕಾರದ ನಿಯಮದ ವಿರುದ್ಧ ಇರುವುದರಿಂದ ಅದನ್ನು ರದ್ದುಪಡಿಸಿ, ಪಾಲಕರ ಸಮ್ಮುಖದಲ್ಲಿ ಲಾಟರಿ ಮೂಲಕ ಅಯ್ಕೆ ಮಾಡಬೇಕು. ಒಂದು ವೇಳೆ ವಿಳಂಬ ನೀತಿ ಅನುಸರಿಸಿದಲ್ಲಿ ಅಂತಹ ಶಾಲೆಗಳ ವಿರುದ್ಧ ಮತ್ತು ಸಂಬಂದಿಸಿದ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ದಸಂಸ ಎಚ್ಚರಿಕೆ ನೀಡಿದೆ.
ಆದೇಶವಿದ್ದರೂ ನಿಲ್ಲದ ಬಸ್ಸುಗಳು; ಆಕ್ರೋಶ
ಶಹಾಪುರ: ತಾಲೂಕಿನ ಖಾನಾಪುರ ಕ್ಯಾಂಪ್ ಹತ್ತಿರ ತಡೆರಹಿತ ಬಸ್ಸುಗಳು ಹೊರತುಪಡಿಸಿ ಉಳಿದೆಲ್ಲ ಬಸ್ಸುಗಳು ನಿಲುಗಡೆ ಮಾಡಬೇಕು. ಈ ರೀತಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿಗಳ ಆದೇಶವಿದ್ದರೂ, ಬಸ್ ನಿರ್ವಾಹಕರು ಚಾಲಕರು ಆದೇಶಕ್ಕೆ ಕಿಮ್ಮತ್ತು ನೀಡದೆ ಖಾನಾಪುರ ಕ್ಯಾಂಪ್ ಹತ್ತಿರ ಬಸ್ ನಿಲ್ಲಿಸುತ್ತಿಲ್ಲವೆಂದು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಡಿಸೆಂಬರ್ನಲ್ಲೇ ಖಾನಾಪುರ ಕ್ಯಾಂಪಿನ ಕಾರ್ಯನಿರ್ವಾಹಕ ಅಭಿಯಂತರರು ಮತ್ತು ಯಾದಗಿರಿ ಮತಕ್ಷೇತ್ರದ ಶಾಸಕರು ಸಾರ್ವಜನಿಕರ ಮತ್ತು ಕ್ಯಾಂಪಿನ ನೌಕರರ ವರ್ಗದವರ ಹಿತದೃಷ್ಟಿಯಿಂದ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಪತ್ರ ಬರೆದಿದ್ದು, ಅದರ ಪ್ರಕಾರ ಅಧಿಕಾರಿಗಳು ಸ್ಪಂದಿಸಿದ್ದರೂ, ನಿರ್ವಾಹಕರ, ಚಾಲಕರು ಮಾತ್ರ ಆದೇಶ ತಮಗೆ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ. ಈ ಕುರಿತು ಪ್ರಯಾಣಿಕರೊಬ್ಬರು ತಮ್ಮ ತೊಂದರೆಯನ್ನು ತಿಳಿಸಿದ್ದು, ಯಾದಗಿರಿಯಿಂದ ಶಹಾಪುರ ಶಹಾಪುರದಿಂದ ಯಾದಗಿರಿಗೆ ಸಂಚರಿಸುವ ಬಸ್ಸುಗಳು ಕಡ್ಡಾಯ ನಿಲುಗಡೆಗೆ ಮತ್ತೊಮ್ಮೆ ನಿರ್ದೇಶಿಸಬೇಕೆಂದು ಮನವಿ ಮಾಡಿದ್ದಾರೆ.
ಅಂಚೆ ವಿಮೆ ಮಾಡಿ ಲಾಭ ಪಡೆಯಿರಿ
ಯಾದಗಿರಿ: ಗ್ರಾಮೀಣ ಭಾಗದ ಜನರಿಗಾಗಿಯೇ ಇರುವ ಗ್ರಾಮೀಣ ಅಂಚೆ ಜೀವವಿಮೆ ಮಾಡಿ ಇದರ ಲಾಭ ಪಡೆಯಬೇಕೆಂದು ಗುಲ್ಬರ್ಗ ಅಂಚೆ ವರಿಷ್ಠಾಧಿಕಾರಿ ಎನ್. ಪ್ರಕಾಶ್ ಹೇಳಿದರು. ನಗರದ ಸ್ಟೇಷನ್ ಉಪ ಅಂಚೆ ಕಚೇರಿ ವ್ಯಾಪ್ತಿಯಲ್ಲಿ ಬರುವ ಉಳ್ಳೆಸೂಗೂರ ಗ್ರಾಮದಲ್ಲಿ ನಡೆದ ಅಂಚೆ ವಿಮಾ ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ, ಈ ದೇಶದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿಯೇ ನಮ್ಮ ಅಂಚೆ ಇಲಾಖೆಯಲ್ಲಿ ಈ ವಿಮಾ ಸೌಲಭ್ಯ ಇತ್ತು. 1995ರಲ್ಲಿ ಗ್ರಾಮೀಣ ಜನತೆಗಾಗಿಯೇ ಮಾಡಿದ ಈ ಅಂಚೆ ಜೀವ ವಿಮೆಯು ಬಹಳ ಲಾಭದಾಯಕವಾಗಿದೆ ಎಂದರು. ಯಾದಗಿರಿ ಉಪ ವಿಭಾಗದ ಸಹಾಯಕ ಅಂಚೆ ಅಧೀಕ್ಷಕ ಕೆ. ಮಹಾದೇವಪ್ಪ ಮಾತನಾಡಿ, ಕಡಿಮೆ ಪ್ರೀಮಿಯಂ, ಹೆಚ್ಚಿನ ಬೋನಸ್ ಇರುವ ಈ ಪಾಲಿಸಿಯ ಲಾಭ ಪಡೆಯಬೇಕೆಂದು ಮನವಿ ಮಾಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಊರಿನ ಹಿರಿಯರಾದ ಚನ್ನಾರೆಡ್ಡಿ ಮಾಲಿ ಪಾಟೀಲ್ ಉಳ್ಳೆಸೂಗೂರ, ಗ್ರಾಮದ ಪ್ರತಿಯೊಬ್ಬರೂ ಅಂಚೆ ಇಲಾಖೆ ಈ ವಿಮೆ ಮಾಡಿಸಿ, ಲಾಭ ಪಡೆಬೇಕು ಎಂದರು. ಪ್ರಧಾನ ಅಂಚೆ ಪಾಲಕರಾದ ಅಮೃತರಾವ್ ಸೀತಾಳಗೇರಿ, ಬಲದೇವ ನಾಯಕ ಇತರರಿದ್ದರು.
ಏಡ್ಸ್ ತಡೆಗೆ ಜಾಗೃತಿಯೇ ಮದ್ದು: ಡಾ. ಮುಕ್ಕಾ
ಯಾದಗಿರಿ: ಏಡ್ಸ್ ರೋಗವನ್ನು ತಡೆಯಲು ಅನೇಕ ರೀತಿಯ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ರೋಗಿಗಳ ಕುರಿತಾಗಿ ಜನರಲ್ಲಿ ಅಸ್ಪೃಶ್ಯ ಭಾವನೆ ಮೊದಲು ದೂರವಾಗಬೇಕಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮಲ್ಲಿಕಾರ್ಜುನ ಮುಕ್ಕಾ ಹೇಳಿದ್ದಾರೆ.ನಗರದ ಸರ್ಕಾರಿ ಪದವಿ ಮಹಾವಿದ್ಯಾಯಲ್ಲಿ ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ ಹಾಗೂ ಯಾದಗಿರಿ ಜಿಲ್ಲಾ ರೆಡ್ ರಿಬ್ಬನ್ ಕ್ಲಬ್ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಏಡ್ಸ್ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಏಡ್ಸ್ ತಡೆಗೆ ಜನಸಾಮಾನ್ಯರಲ್ಲಿ ಅರಿವು ಬಹಳ ಮುಖ್ಯ. ಇದರ ನಿಯಂತ್ರಣಕ್ಕೆ ಪ್ರತಿಯೊಬ್ಬರು ಜಾಗೃತರಾಗಿ ಸಮಾಜದಲ್ಲಿ ಈ ಪಿಡುಗಿನ ಕುರಿತು ಜನರಲ್ಲಿ ಮಾಹಿತಿ ರವಾನಿಸಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಸುಭಾಶ್ಚಂದ್ರ ಕೌಲಗಿ, ಎಚ್ಐವಿ ಏಡ್ಸ್ ನಿಯಂತ್ರಿಸಲು ಯುವ ಪೀಳಿಗೆ ಪಣ ತೊಡಬೇಕೆಂದರು.
ಅಕ್ಷರ ದಾಸೋಹ ನೌಕರರ ಬೇಡಿಕೆ ಈಡೇರಿಕೆಗೆ ಮನವಿ
ಯಾದಗಿರಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದವರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಸಮಿತಿ ಅಧ್ಯಕ್ಷೆ ಕಲ್ಪನಾ ಗುರಸುಣಿಗಿ, ಪ್ರತಿಯೊಂದು ಮಗುವು ಶಿಕ್ಷಣವನ್ನು ಪಡೆಯಬೇಕು. ಅಕ್ಷರ ದಾಸೋಹ ಯೋಜನೆ ಅಡಿಯಲ್ಲಿ ಕೆಲಸ ಮಾಡುವ 90,000 ಸಿಬ್ಬಂದಿಗಳನ್ನು ಕಡಿಮೆ ವೇತನದಲ್ಲಿ ದುಡಿಸಿಕೊಳ್ಳುವ ಸರ್ಕಾರದ ನೀತಿ ಖಂಡನಿಯವಾಗಿದೆ ಎಂದರು. ಸರ್ಕಾರ ಮಕ್ಕಳ ಹಾಜರಾತಿಯ ಆಧಾರದಲ್ಲಿ ಅಕ್ಷರ ದಾಸೋಹ ನೌಕರರನ್ನು ಕೆಲಸದಿಂದ ತೆಗೆಯುವ ಪ್ರಕ್ರಿಯೆಯನ್ನು ಕೈಬಿಟ್ಟರೆ ಮಾತ್ರ ನಾವು ಏ. 10ರಿಂದ ಪ್ರಾರಂಭವಾಗುವ ಬೇಸಿಗೆ ಅಡುಗೆಯನ್ನು ಸಿದ್ದಪಡಿಸಲು ಹಾಜರಾಗುತ್ತೇವೆ. ಇಲ್ಲವಾದರೆ ನಾವು ಕೆಲಸಕ್ಕೆ ಬರುವುದಿಲ್ಲ ಎಂದು ಮನವಿಯಲ್ಲಿ ಹೇಳಲಾಗಿದೆ. ಅಕ್ಷರ ದಾಸೋಹ ನೌಕರರನ್ನು ಕಾಯಂ ಮಾಡಿ ಸಾಮಾಜಿಕ ಭದ್ರತೆ ಒಳಗೊಂಡಂತೆ ಇಎಸ್ಐ ಗುಂಪು ವಿಮೆ ನಿಧಿ ಹಾಗೂ ನಿವೃತ್ತಿ ವೇತನ ನೀಡಬೇಕು. ಪ್ರತಿ ತಿಂಗಳ ಮೊದಲ ವಾರದಲ್ಲಿ ಸಂಬಳ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಮೌಲ್ಯಯುಕ್ತ ನಾಟಕಗಳಿಂದ ಸಮಾಜ ಸುಧಾರಣೆ
ಶಹಾಪುರ: ಮೌಲ್ಯಯುಕ್ತ ನಾಟಕಗಳಿಂದ ಸಮಾಜ ಸುಧಾರಣೆಗೆ ಪ್ರೇರಣೆ ಸಿಗಲಿದ್ದು, ನಾಟಕ ರಂಗವನ್ನು ಉಳಿಸಿ ಬೆಳೆಸುವ ಕಾರ್ಯಕ್ಕೆ ಸರ್ವರು ಮುಂದಾಗಬೇಕು ಎಂದು ಗುಂಬಳಾಪುರ ಮಠದ ಸಿದ್ದೇಶ್ವರ ಸ್ವಾಮೀಜಿ ತಿಳಿಸಿದರು. ತಾಲೂಕಿನ ಮೂಡಬೂಳ ಗ್ರಾಮದಲ್ಲಿ ಕಡಕೋಳ ಮಡಿವಾಳೇಶ್ವರರ ಜಾತ್ರಾಮಹೋತ್ಸವ ನಿಮಿತ್ತ ಗ್ರಾಮದ ವತಿಯಿಂದ ಪತಿಭಕ್ತಿ ನಾಟಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ದೇಶಿಯ ಸೊಗಡು, ಜಾನಪದ ಕಲೆ, ಗ್ರಾಮೀಣ ಭಾಗದ ಜನತೆಗೆ ಮನರಂಜನೆಯ ಜೊತೆಗೆ ಕಲೆಯ ಬಗ್ಗೆ ಹೆಚ್ಚು ತಿಳುವಳಿಕೆ ಮೂಡಿಸುವಲ್ಲಿ ನಾಟಕಗಳು ಮಹತ್ತರ ಪಾತ್ರ ವಹಿಸುತ್ತವೆ ಎಂದರು. ಕಾರ್ಯಕ್ರಮದಲ್ಲಿ ಡಾ. ಚಂದ್ರಶೇಖರ ಸುಬೇದಾರ, ಮರಿಗೌಡ ಹುಲಕಲ್, ಕಡಕೋಳ ಮಠದ ರುದ್ರಮುನಿ ಶಿವಾಚಾರ್ಯರು ಮಾತನಾಡಿದರು. ನಾಟಕಕಾರ, ಕವಿ, ಸಾಹಿತಿ, ಎಲ್.ಬಿ.ಕೆ. ಆಲ್ದಾಳ ಮತ್ತು ಶರಣಪ್ಪ ಮಾಸ್ತರ ಅಂಗಡಿ ಅವರಿಗೆ ಸನ್ಮಾನಿಸಲಾಯಿತು. ವೇದಿಕೆ ಮೇಲೆ ರಾಮರಡ್ಡಿ, ಈರಣ್ಣ ದೇಸಾಯಿ, ಅಶೋಕರಾವ ಕುಲಕರ್ಣಿ, ಬಸ್ಸುಗೌಡ, ಸಂಗನಗೌಡ, ಶಿವನಗೌಡ ಮಾಲಿಪಾಟೀಲ, ಸಂಗನಬಸ್ಸಪ್ಪ, ಗುರುರಾಜ ಕುಲಕರ್ಣಿ ಮತ್ತಿತರರಿದ್ದರು.
ಮಹಲರೋಜಾ ಜಾತ್ರೆಯಲ್ಲಿ ದನಗಳ ಜಾತ್ರೆ
ಶಹಾಪುರ: ತಾಲೂಕಿನ ಮಹಲರೋಜ ಗ್ರಾಮದ ಯಮನೂಸರಪ್ಪ ಮುತ್ಯಾರ ಜಾತ್ರಾ ಮಹೋತ್ಸವದ ಅಂಗವಾಗಿ ್ಟಶನಿವಾರ ದನಗಳ ಜಾತ್ರೆಗೆ ಚಾಲನೆ ನೀಡಲಾಯಿತು. ನಂತರಗುಂಡು ಮತ್ತು ಚೀಲ ಎತ್ತುವ ಕಾರ್ಯಕ್ರಮ ನಡೆಯಿತು. ಗಂಗನಾಳದ ಹೈಯಾಳಪ್ಪಗೌಡ ಅವರು 150 ಕೆ.ಜಿ ಗುಂಡು ಮತ್ತು 175 ಕೆ.ಜಿ ಚೀಲವನ್ನು ಎತ್ತುವ ಮೂಲಕ ವಿಜೇತರಾದರು. ವಿಜೇತ ಹೈಯಾಳಪ್ಪಗೌಡ ಅವರಿಗೆ ಹಣಮಂತ್ರಾಯ ಪೂಜಾರಿ ಅವರು 2 ಬೆಳ್ಳಿ ಕಡಗ ಮತ್ತು 1,100 ರೂ.ಗಳನ್ನು ಬಹುಮಾನವಾಗಿ ನೀಡಿದರು.ನಂತರ ಕುಸ್ತಿ ಕಾರ್ಯಕ್ರಮ ನಡೆಯಿತು.ಈ ಪಂದ್ಯದಲ್ಲಿ ಬಿಜಾಪುರ ಜಿಲ್ಲೆಯ ಇಂಡಿ ತಾಲೂಕಿನವರಾದ ಶಿವಾನಂದ ದುಮಕಿನಾಳ ಅವರು ಪ್ರಶಸ್ತಿ ಗೆದ್ದರು. ಶಿವಾನಂದ ಅವರಿಗೆ 1 ಬೆಳ್ಳಿ ಕಡಗ ಮತ್ತು 2,100 ರೂ.ಗಳ ಬಹುಮಾನವನ್ನು ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ ಜಿಲ್ಲೆಗಳಿಂದ ದೊಡ್ಡ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು. ಇಲ್ಲಿನದನಗಳ ಜಾತ್ರೆಗೆ ಸುತ್ತಮುತ್ತಲಿನ ಹಳ್ಳಿಗಳಿಂದ ಜನರು ತಮ್ಮ ದನಗಳನ್ನು ತಂದು ಮಾರಾಟ ಮಾಡುತ್ತಾರೆ. ಈ ಜಾತ್ರೆಯಲ್ಲಿ ಒಳ್ಳೆಯ ರಾಸುಗಳಿಗೆ ಬಹುಮಾನವನ್ನು ನೀಡಲಾಗುತ್ತದೆ.
ಆಕಸ್ಮಿಕ ಬೆಂಕಿಗೆ ಕಬ್ಬು ಭಸ್ಮ; ಲಕ್ಷಾಂತರ ಹಾನಿ
ಆಳಂದ: ಆಕಸ್ಮಿಕ ಬೆಂಕಿ ತಗುಲಿ 5 ಎಕರೆ ಕಬ್ಬು ಭಸ್ಮಗೊಂಡಿರುವ ಘಟನೆ ತಾಲೂಕಿನ ಸರಸಂಬಾ ಗ್ರಾಮದಲ್ಲಿ ಈಚೆಗೆ ನಡೆದಿದೆ. ಸಿದ್ದಾರಾಮ ನರಸಪ್ಪಾ ಭಕರೆ ಇವರ ಸರ್ವೆ ನಂಬರ್ 272ರಲ್ಲಿ ಕಟಾವಿಗೆ ಬಂದ 5 ಎಕರೆ ಕಬ್ಬು ಬೆಂಕಿಗೆ ಆಹುತಿಯಾಗಿದ್ದು, ಅಂದಾಜು ರು. 10 ಲಕ್ಷಕ್ಕಿಂತ ಅಧಿಕ ಹಾನಿಯಾಗಿದೆ. ಸ್ಥಳಕ್ಕೆ ಕಂದಾಯ, ಕೃಷಿ ಅಧಿಕಾರಿಗಳು ಭೇಟಿ ನೀಡಿ ಹಾನಿ ಪರಿಶೀಲಿಸಿದ್ದಾರೆ. ಮಾದನಹಿಪ್ಪರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಬ್ಬು ಭಸ್ಮ: ಆಕಸ್ಮಿಕ ಬೆಂಕಿ ತಗುಲಿ 4 ಎಕರೆ ಕಬ್ಬು ಭಸ್ಮಗೊಂಡಿರುವ ಘಟನೆ ತಾಲೂಕಿನ ಹಿರೋಳಿ ಗ್ರಾಪಂ ವ್ಯಾಪ್ರಿಯ ಭೀಮಪೂರ ಗ್ರಾಮದಲ್ಲಿ ನಡೆದಿದೆ. ರಮೇಶ ಚೌಗೂಲೆ ಇವರಿಗೆ ಸೇರಿದ ಈ ಭೂಮಿಯನ್ನು ಗ್ರಾಪಂ ಅಧ್ಯಕ್ಷ ಅಣ್ಣಪ್ಪಾ ಶಹಾಪೂರೆ ಅವರು ಉಳುಮೆ ಮಾಡುತ್ತಿದ್ದರು. ಅಂದಾಜು 8 ಲಕ್ಷ ರುಪಾಯಿ ಹಾನಿ ಸಂಭವಿಸಿದೆ ಎಂದು ವರದಿಯಾಗಿದೆ.
ತೊಗರಿ ಖರೀದಿ ಸ್ಥಗಿತ ಬೇಡ: ಶಾಸಕರ ಆಗ್ರಹ
ಶಹಾಪುರ: ತೊಗರಿ ಖರೀದಿಯನ್ನು ಮಾ. 31ರ ನಂತರ ಸ್ಥಗಿತಗೊಳಿಸಲು ಹೊರಟಿರುವ ಸರ್ಕಾರದ ಕ್ರಮವನ್ನು ಶಾಸಕ ಗುರುಪಾಟೀಲ ಶಿರವಾಳ ಖಂಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಟ್ಟಣದಲ್ಲಿ ಜನವರಿ ಮೊದಲ ವಾರದಿಂದ ನಿಗದಿತ ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿ ಕೇಂದ್ರ ಪ್ರಾರಂಭವಾಗಿದ್ದು, ಮಾರ್ಚ್ ತಿಂಗಳಲ್ಲಿಯೂ 10 ದಿನ ಯಾವುದೋ ನೆಪದಲ್ಲಿ ಕೇಂದ್ರ ಸ್ಥಗಿತವಾಗಿದ್ದು, ರೈತರು ಕೇಂದ್ರಕ್ಕೆ ಅಲೆದಾಡಿದರೂ ಪ್ರಯೋಜವಾಗಿಲ್ಲ. ಈ ಕುರಿತು ತೊಗರಿ ಖರೀದಿ ಕೇಂದ್ರದಲ್ಲಿನ ತುಮಕೂರಿನ ಖಾಸಗಿ(ಎನ್ಸಿಡಿಎಕ್)ಎನ್ಜಿಓದವರನ್ನು ವಿಚಾರಿಸಿದರೆ ನಿಗದಿತವಾಗಿ ಸರ್ಕಾವಾಗಲಿ, ತೊಗರಿ ಮಂಡಳಿಯಾಗಲಿ ಸೂಕ್ತ ನಿರ್ದೇಶನ ನೀಡುತ್ತಿಲ್ಲವೆಂದು ಹೇಳುತ್ತಿದ್ದಾರೆ. ರೈತರ ತೊಗರಿ ಖರೀದಿ ಮಾಡುವಲ್ಲಿ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ. ಇನ್ನೂ ಸಾಕಷ್ಟು ಸಂಖ್ಯೆಯಲ್ಲಿ ರೈತರು ತೊಗರಿ ಮಾರಾಟ ಮಾಡುವವರಿದ್ದು ನಿಗದಿತ ಬೆಂಬಲ ಬೆಲೆ ಹೊರಗಡೆ ಸಿಗುತ್ತಿಲ್ಲ. ಕ್ವಿಂಟಾಲ್ ಒಂದಕ್ಕೆ ಸರ್ಕಾರ 5000 ನಿಗದಿಪಡಿಸಿದ್ದು ರೈತರು ಅದರಲ್ಲೇ ಸಂತೃಪ್ತಿ ಕಂಡಿದ್ದಾರೆ. ಸರ್ಕಾರ ತೊಗರಿ ಖರೀದಿ ಮಾಡುವ ಮುನ್ನವೇ ಖರೀದಿ ಕೇಂದ್ರ, ತೊಗರಿ ಖರೀದಿ ಸ್ಥಗಿತಗೊಳಿಸುವತ್ತ ಹೊರಟಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಯಲು ಶೌಚಾಲಯದಿಂದ ಮುಕ್ತಿಗೆ ಕರೆ
ಯಾದಗಿರಿ: ಗ್ರಾಮಗಳನ್ನು ಬಯಲು ಶೌಚಾಲಯದಿಂದ ಮುಕ್ತಿಗೊಳಿಸಬೇಕು ಎಂದು ನವದೆಹಲಿಯ ಫೀಡ್ಬ್ಯಾಕ್ ಫೌಂಡೇಶನ್ನ ಸಹಾಯಕ ವ್ಯವಸ್ಥಾಪಕ ಬೀರೇಂದ್ರಸಿಂಗ್ ಕರೆ ನೀಡಿದ್ದಾರೆ. ಯಾದಗಿರಿ ಸಮೀಪದ ನಾಯ್ಕಲ್ ಗ್ರಾಮದಲ್ಲಿ ಜಲನಿರ್ಮಲ ಯೋಜನೆಯ ಗ್ರಾಮಗಳಲ್ಲಿ ನೈರ್ಮಲ್ಯ ಸೇವೆಯ ಸಂಪೂರ್ಣ ಸ್ವಚ್ಛತಾ ಆಂದೋಲನಾ ಜನಜಾಗೃತಿ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರತಿ ಮನೆಯಲ್ಲಿ ಶೌಚಾಲಯಗಳು ನಿರ್ಮಿಸಿಕೊಳ್ಳುವುದರಿಂದ ರೋಗರುಜಿನಗಳಿಂದ ಪಾರಾಗಬಹುದು. ಸ್ವಚ್ಛತೆಯಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಗ್ರಾಮದಲ್ಲಿ ನೈರ್ಮಲ್ಯ ರಕ್ಷಣೆಯಾಗುವುದು ಎಂದು ಗ್ರಾಮಸ್ಥರಲ್ಲಿ ಅರಿವು ಮೂಡಿಸಿದರು. ಆ ಮೂಲಕ ಶೌಚಾಲಯದ ಬಗ್ಗೆ ಮನವರಿಕೆ ಮಾಡಿಕೊಟ್ಟರು. ತರಬೇತಿಯಲ್ಲಿ ಆಸಕ್ತಿಯಿರುವ ಗ್ರಾಮಸ್ಥರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಸ್ವಚ್ಛತಾ ದೂತರು ಮುಂತಾದವರನ್ನು ತರಬೇತಿಗೆ ನಿಯೋಜಿಸಲಾಗಿದೆ. ಯಾದಗಿರಿ ಜಿಲ್ಲೆಯಾದ್ಯಂತ ನಾಯ್ಕಲ್ ಗ್ರಾಮ ಸೇರಿದಂತೆ 15 ಗ್ರಾಮಗಳನ್ನು ಈ ಯೋಜನೆಗೆ ಆಯ್ಕೆ ಮಾಡಿಕೊಳ್ಳಲಾಗಿದೆ, 3 ತಿಂಗಳ ಗಡುವಿನೊಳಗೆ ಈ ಗ್ರಾಮಗಳನ್ನು ಬಯಲು ಶೌಚಾಲಯ ಮುಕ್ತ ಗ್ರಾಮವನ್ನಾಗಿಸುವ ಗುರಿ ಹೊಂದಲಾಗಿದೆ ಎಂದು ವಿವರಿಸಿದರು.
ಮಕ್ಕಳ ಸರ್ವೋತೋಮುಖ ಅಭಿವೃದ್ಧಿಗೆ ಶಿಕ್ಷಣ ಅವಶ್ಯ
ಯಾದಗಿರಿ: ಮಕ್ಕಳ ಪ್ರಾಥಮಿಕ ಶಿಕ್ಷಣ ಅವರ ಸರ್ವತೋಮುಖ ಅಭಿವೃದ್ಧಿಗೆ ಸಹಾಯಕವಾಗಲಿದೆ ಎಂದು ರತನ್ ಟಾಟಾ ಟ್ರಸ್ಟ್ ಸಂಯೋಜಕ ಮಲ್ಲಿಕಾರ್ಜುನ ಪಾಟೀಲ್ ಹೇಳಿದರು. ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುದ್ನಾಳ ಇಲ್ಲಿ ಏಳನೇ ತರಗತಿ ಮಕ್ಕಳಿಗೆ ವರ್ಷದ ಬೀಳ್ಕೊಡುಗೆ ಸಮಾರಂಭ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗುಣಾತ್ಮಕ ಶಿಕ್ಷಣ ಕಲಿಸುವುದರ ಜೊತೆಗೆ ಮಕ್ಕಳ ಸರ್ವತೋಮುಖ ಅಭಿವೃದ್ಧಿಯತ್ತ ಪಾಲಕರು ಗಮನ ಹರಿಸಬೇಕು ಎಂದರು. ಶಿಕ್ಷಕ ಸುರೇಶ ಮಾತನಾಡಿ, ವಿದ್ಯಾರ್ಥಿಗಳು ಓದಿ ದೇಶದ ಉತ್ತಮ ನಾಗರಿಕರಾಗಬೇಕು. ಪ್ರೌಢಶಿಕ್ಷಣದಲ್ಲಿ ಉತ್ತಮ ಅಂಶಗಳನ್ನು ಕಲಿಯಬೇಕು. ಇಲ್ಲಿನ ಹುಡುಗಿಯರು ಶಾಲೆ ಬಿಡದೆ, ಓದು ಮುಂದುವರೆಸಬೇಕು. ಕಡ್ಡಾಯ ಶಿಕ್ಷಣ ಪಡೆಯುವುದು ಎಲ್ಲರ ಹಕ್ಕಾಗಿದೆ ಎಂದರು. ಶಿಕ್ಷಕ ಅಬ್ದುಲ್ ಸತ್ತಾರ ಇದ್ದರು. ಜ್ಯೋತಿ, ಗಂಗಾಶ್ರೀ, ಶಕೀಲ್ ತಮ್ಮ ಅನಿಸಿಕೆ ಹೇಳಿದರು. ಕಾರ್ಯಕ್ರಮದಲ್ಲಿ ಕಲಿಕೆ ಸಂಯೋಜಕ ಬಸವರಾಜ, ಜಗದೀಶ, ಶ್ರೀನಿವಾಸ , ಕೈಲಾಸಪತಿ, ಸುಜಾತ, ಗೌರಮ್ಮ, ರಶ್ಮಿ ಇದ್ದರು. ಕಾರ್ಯಕ್ರಮ ನಿರೂಪಣೆ ನೇತ್ರಾವತಿ ನೆರವೇರಿಸಿದರೆ, ಸ್ವಾಗತವನ್ನು ವಿಶ್ವರಾಜ ಮಾಡಿದರು. ನಾಗರಾಜ ವಂದಿಸಿದರು.
ಇಂದು ಪುಟ್ಟರಾಜ ಗವಾಯಿಗಳ ಜನ್ಮ ಶತಮಾನೋತ್ಸವ
ಕೆಂಭಾವಿ:ಪುಟ್ಟರಾಜ ಸೇವಾ ಸಮಿತಿ ಜಿಲ್ಲಾ ಘಟಕ ಯಾದಗಿರಿ ಹಾಗೂ ಸಗರನಾಡು ಸೇವಾ ಪ್ರತಿಷ್ಠಾನದ ಸಹಯೋಗದಲ್ಲಿ ಪುಟ್ಟರಾಜ ಗವಾಯಿಗಳ ಜನ್ಮಶತಮಾನೋತ್ಸವ ಸಮಾರಂಭವನ್ನು ಮಾ.30 ರಂದು ಮುದನೂರಿನ ಕೋರಿಸಿದ್ದೇಶ್ವರ ಪುಣ್ಯಾಶ್ರಮದಲ್ಲಿ ಏರ್ಪಡಿಸಲಾಗಿದೆ. ಶ್ರೀಮಠದ ಮಲ್ಲಿಕಾರ್ಜುನ ದೇವರು ಸಾನ್ನಿಧ್ಯವನ್ನು ವಹಿಸಲಿದ್ದು, ಹಿರಿಯ ಮುಖಂಡ ಭೀಮರಾಯ ಸಾಹು ಹೊಟ್ಟಿ ಉದ್ಘಾಟಿಸುವರು. ಅತಿಥಿಗಳಾಗಿ ಕೆಂಭಾವಿ ವಲಯ ಕಸಾಪ ಅಧ್ಯಕ್ಷ ನಿಂಗಣ್ಣಗೌಡ ದೇಸಾಯಿ ಪರಸನಹಳ್ಳಿ, ದೇವರ ದಾಸಿಮಯ್ಯ ವಿಚಾರ ವೇದಿಕೆ ಅಧ್ಯಕ್ಷ ಶಾಂತರೆಡ್ಡಿ ಚೌಧರಿ ಮುದನೂರು ಆಗಮಿಸುವರು. ಪುಟ್ಟರಾಜ ಗವಾಯಿಗಳ ಜನ್ಮಶತಮಾನೋತ್ಸವ ನಿಮಿತ್ತ ಸಂಗೀತಗಾರರಾದ ಬಸವರಾಜ ಬಂಟನೂರು, ಕಾಳಪ್ಪ ವಿಶ್ವಕರ್ಮ, ಹಳ್ಳೆರಾವ್ ಕುಲಕರ್ಣಿ, ಮಲ್ಲಯ್ಯ ಹಿರೇಮಠ ವಡಿಗೇರಾ, ಯಮುನೇಶ ಯಾಳಗಿ, ಗುರುಮೂರ್ತಿ ಪತ್ತಾರ, ರಮೇಶ ಯಾಳಗಿ, ಶಾಂತಪ್ಪ ಏವೂರು, ಶಾಂತಗೌಡ ಮಾಲಿಪಾಟೀಲ್ ಕರಡಕಲ್, ಸೋಮಶೇಖರ ವಿಶ್ವಕರ್ಮ ಮುದನೂರು, ಮುಲ್ಲಾ ಸಾಬ್ ಗವಾಯಿ ಮಲ್ಲಾ.ಬಿ ಅವರನ್ನು ಸನ್ಮಾನಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಚರಂಡಿ, ಕೊಳವೆ ಬಾವಿ ದುರಸ್ತಿಗೆ ಆಗ್ರಹ
ಯಾದಗಿರಿ: ನಗರದ ವಾರ್ಡ್ ನಂ. 14ರಲ್ಲಿರುವ ಚರಂಡಿಗಳನ್ನು ಸ್ವಚ್ಛಗೊಳಿಸುವಂತೆ ಆಗ್ರಹಿಸಿ ನಿವಾಸಿಗಳು ಪೌರಾಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.ಯಾದಗಿರಿ ಪಟ್ಟಣದ ವಾರ್ಡ್ ನಂ. 14ರಲ್ಲಿರುವ ಓಣಿಯ ಚರಂಡಿಯಲ್ಲಿ ಸದಾ ಕಸ ನಿಂತಿರುತ್ತದೆ. ಇದರಿಂದಾಗಿ ಸೊಳ್ಳೆ ಕಾಟ ಮತ್ತು ನಿವಾಸಿಗಳಿಗೆ ರೋಗದ ಭೀತಿ ಉಂಟಾಗಿದೆ. ಶಾಲೆಗೆ ಹೋಗುವ ಮಕ್ಕಳಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ನಗರಸಭೆಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ನಿವಾಸಿಗಳು ದೂರಿದ್ದಾರೆ. ಇಲ್ಲಿನ ಬೊರ್ವೇಲ್ ಕೂಡ ಬಂದಾಗಿವೆ. ಬೇಸಿಗೆ ಸಮಯ ಬಂದಿರುವ ಕಾರಣ ನೀರಿನ ಅಭಾವ ತಲೆದೋರಿದೆ. ಆದ್ದರಿಂದ ಕೂಡಲೇ ಕೊಳವೆಬಾವಿ ರಿಪೇರಿ ಮಾಡಿಸಬೇಕು ಒತ್ತಾಯಿಸಿದ್ದಾರೆ. ನಿವಾಸಿಗಳ ಸಮಸ್ಯೆಯನ್ನು ಸಂಬಂಧಪಟ್ಟವರು ಬಗೆಹರಿಸಬೇಕು. ಸಮಸ್ಯೆ ಬಗೆಹರಿಸುವಲ್ಲಿ ನಗರಸಭೆ ನಿರ್ಲಕ್ಷ್ಯ ವಹಿಸಿದಲ್ಲಿ ಮುಂದಿನ ದಿನಗಳಲ್ಲಿ ನಗರಸಭೆ ಎದುರು ಹೋರಾಟವನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಮಹ್ಮದ್ ಅಫ್ಸರ್, ಮುಸ್ತಫಾ ಪಟೇಲ್, ಮಹ್ನದ ಫಯಾಜ್, ಅಬ್ದುಲ್ ಸಲೀಂ ಇನ್ನಿತರರಿದ್ದರು.