ಬೆಳಮಗಿ 'ಗಿಳಿ' ಎಂದ ಖರ್ಗೆ ವಿರುದ್ಧ ಬಿಜೆಪಿ ಸಿಡಿಮಿಡಿ
ಕ.ಪ್ರ. ವಾರ್ತೆ , ಗುಲ್ಬರ್ಗ , ಮಾ.29
ತಮ್ಮ ಪಕ್ಷದ ಅಭ್ಯರ್ಥಿ ರೇವು ನಾಯಕ ಬೆಳಮಗಿ ಅವರಿಗೆ ಗಿಳಿ ಎಂದು ಲೇವಡಿ ಮಾಡಿರುವ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ತಿರುಗಿ ಬಿದ್ದಿರುವ ಬಿಜೆಪಿ, ಎಐಸಿಸಿ ಹೈಕಮಾಂಡ್ ಹೇಳಿದಂತೆ ಕೇಳುವ ಖರ್ಗೆಯವರು ಸಹ ಕಾಂಗ್ರೆಸ್ನ ಗಿಳಿ ಎಂದು ವ್ಯಂಗ್ಯ ಮಾಡಿ ಹೇಳಿಕೆ ನೀಡಿದೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ವಕ್ತಾರರಾದ ಶಶಿಲ್ ನಮೋಶಿ, ಬಾಬೂರಾವ ಚವ್ಹಾಣ್, ಧರ್ಮಣ್ಣ ಇಟಗಾ, ಜಿಲ್ಲಾ ಮಾಧ್ಯಮ ಪ್ರಮುಖ ನಾಮದೇವ ರಾಠೋಡ ಅವರು, ಖರ್ಗೆಯವರು ಹೀಗೆ ಬಾಲಿಶವಾಗಿ ಹೇಳಿಕೆ ನೀಡುವುದು ಸರಿಯಲ್ಲ ಎಂದರು.
ಹೈಕಮಾಂಡ್ ಹೇಳಿದಂತೆ, ಅವರ ಸೂಚನೆ ಅನುಸರಿಸುವುದು ಪಕ್ಷದ ಶಿಸ್ತಿನ ಸಿಪಾಯಿ ಕಾರ್ಯಕರ್ತರ ಕೆಲಸ. ಅದರಂತೆಯೇ ಬೆಳಮಗಿ ನಡೆಯುತ್ತಿದ್ದಾರೆ. ಹಾಗಂತ ಅವರನ್ನು ಬಿಜೆಪಿ ಹೈಕಮಾಂಡ್ ಸಾಕಿದ ಗಿಳಿ ಎಂದು ಹೇಳುವುದು ಅದೆಷ್ಟು ಸಮಜಂಸ ಎಂದು ನಮೋಶಿ, ನಾಮದೇವ ಪ್ರಶ್ನಿಸಿದರು.
ಸಹರಾನ್ಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇಮ್ರಾನ್ ಭಾಷಣದಲ್ಲಿ ಮೋದಿಯವರನ್ನು ಕೊಲ್ಲುವ ಮಾತನ್ನಾಡಿದ್ದಾರೆ. ಇದು ಖಂಡನೀಯ. ಚುನಾವಣಾ ಆಯೋಗ ಈ ಬಗ್ಗೆ ತಕ್ಷಣ ಕಾನೂನು ಕ್ರಮ ಜರುಗಿಸಬೇಕೆಂದು ನಮೋಶಿ ಆಗ್ರಹಿಸಿದರು.
ಕೇಂದ್ರದ ಕೊಡುಗೆಗಳಲ್ಲಿ ರಾಜ್ಯದ ಪಾಲಿದೆ: ಕೇಂದ್ರದ ಅನೇಕ ಯೋಜನೆಗಳಿಗೆ ರಾಜ್ಯ ಸರ್ಕಾರ ವಿಳಂಬವಿಲ್ಲದೆ ಭೂಮಿ ನೀಡಿ ಸಹಕರಿಸಿದೆ. ಹೀಗಾಗಿ ಖರ್ಗೆಯವರ ಯೋಜನೆಗಳಲ್ಲಿ ರಾಜ್ಯದ ಪಾಲೂ ಇದೆ ಎಂದು ಯಡಿಯೂರಪ್ಪ ಸೇರಿದಂತೆ ಹಲವರು ಸಿಎಂ ಗಳನ್ನು ಕಂಡ ಬಿಜೆಪಿ ಸರ್ಕಾರವೂ ಜಿಲ್ಲೆಯ ಜನತೆಗೆ ಕೊಡುಗೆ ನೀಡಿದೆ ಎಂದರು. ಬೆಳಮಗಿ ಅವರ ಸಾಧನೆಗಳನ್ನು ಪಟ್ಟಿ ಮಾಡಿದ ನಮೋಶಿ, ಪಶು ಸಂಗೋಪನೆ ಸಚಿವರಾಗಿ ಅವರು ಜಿಲ್ಲೆಗೆ, ರಾಜ್ಯಕ್ಕೆ ನೀಡಿದ ಕೊಡುಗೆಗಳನ್ನು ವಿವರಿಸಿದರು.
ಬಾಬೂರಾವ ಚವ್ಹಾಣ್ ಮಾತನಾಡಿ, ಕಾಂಗ್ರೆಸ್ ಜನರೆಡೆಗೆ ನಡಿಗೆ ಎಂಬ ಕಾರ್ಯಕ್ರಮ ಆಯೋಜಿಸಿತ್ತು. ಆದರೆ ಅದರಲ್ಲಿ ಭಾಗವಹಿಸಿದ್ದ ಧರಂಸಿಂಗ್ ಹಾಗೂ ಖರ್ಗೆ ಒಂದೂ ಹೆಜ್ಜೆಯೂ ಇಡಲಿಲ್ಲ ಎಂದು ಲೇವಡಿ ಮಾಡಿದರು. ಈ ಬಗ್ಗೆ ಪತ್ರಕರ್ತರು ಮಾನವೀಯತೆ ಆಧಾರದಲ್ಲಿ ಪ್ರಶ್ನೆಗಳನ್ನು ಹಾಕಿದಾಗ ಇಕ್ಕಟ್ಟಿಗೆ ಸಿಲುಕಿದ ಚವ್ಹಾಣ್ ಆ ಬಗ್ಗೆ ವಿವರಣೆ ನೀಡುವ ಗೋಜಿಗೆ ಹೋಗಲೇ ಇಲ್ಲ.
ಮಾಹಿತಿಯಿಲ್ಲದೆ ಪರದಾಟ: ಫರತಾಬಾದ್ ಬಳಿ ಬಿಜೆಪಿ ಸರ್ಕಾರ ಶಾಖೋತ್ಪನ್ನ ಸ್ಥಾವರಕ್ಕಾಗಿ 1,500 ಎಕರೆ ಭೂಮಿ ವಶಪಡಿಸಿಕೊಂಡರೂ ಕೇಂದ್ರ ಕಲ್ಲಿದ್ದಲು ಸೌಕರ್ಯ ಒದಗಿಸಲಿಲ್ಲ ಎಂದು ನಮೋಶಿ ಕೇಂದ್ರದ ವಿರುದ್ಧ ಗಂಭೀರ ಆರೋಪ ಮಾಡಿದಾಗ ಪತ್ರಕರ್ತರು ಈ ಕುರಿತಂತೆ ಹೆಚ್ಚಿನ ವಿವರಣೆ ಕೇಳಿದರು. ಆಗ ನಮೋಶಿಯವರು ಮಾಹಿತಿ ಸದ್ಯಕ್ಕಿಲ್ಲ, ಕಲೆಹಾಕಿಕೊಂಡು ಮಾತನಾಡುವೆ ಎಂದು ಮೌನವಾದರು.
ಬಿಜೆಪಿ ರಾಜ್ಯ ಎಸ್ಸಿ ಮೋರ್ಚಾದ ಧರ್ಮಣ್ಣ ಇಟಗಾ ಮಾತನಾಡಿ, 40 ವರ್ಷ ರಾಜಕೀಯದಲ್ಲಿರುವ ಖರ್ಗೆ ಅಂಬೇಡ್ಕರ್ ಜಯಂತಿಯಲ್ಲಿ ಭಾಗವಹಿಸಿಲ್ಲ, ದಲಿತರ ಮನೆಗಳಲ್ಲಿ ಲೋಟ ನೀರು ಕುಡಿದಿಲ್ಲ ಎಂದರು. ಈಚೆಗೆ ಜೆಡಿಎಸ್ ಅಭ್ಯರ್ಥಿ ಸಾಗರ್ ನೀಡಿರುವ ಹೇಳಿಕೆ ಸತ್ಯವಾಗಿದೆ ಎಂದು ಹೇಳಿದರು. ನಂತರ ಪತ್ರಕರ್ತರು ಪ್ರಶ್ನೆಗಳ ಸುರಿಮಳೆಗರೆದು ಡಿ.ಜಿ. ಸಾಗರ್ ಹೇಳಿಕೆಗೆ ಬಿಜೆಪಿ ಸಹಮತಿಸುತ್ತದೆಯೇ ಎಂದು ಪ್ರಶ್ನಿಸಿದಾಗ ಯಾವುದೇ ಉತ್ತರ ನೀಡದೆ ನುಣುಚಿಕೊಂಡರು.
ನಮೋಶಿಗೆ ವಕ್ತಾರ ಜವಾಬ್ದಾರಿ: ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಜಕುಮಾರ್ ಪಾಟೀಲ್ ತೇಲ್ಕೂರ್, ಪ್ರಧಾನ ಕಾರ್ಯದರ್ಶಿ ಶರಣಪ್ಪ ತಳವಾರ್ ಆದೇಶ ಹೊರಡಿಸಿ ಶಶಿಲ್ ನಮೋಶಿ, ಬಾಬೂರಾವ ಚವ್ಹಾಣ ಹಾಗೂ ಧರ್ಮಣ್ಣ ಇವರನ್ನು ಒಳಗೊಂಡ ಲೋಕಸಬೆ ಚುನಾವಣೆ ವಕ್ತಾರರ ಸಮಿತಿ ರಚಿಸಿದೆ.
ಸಮಿತಿಯ ನಮೋಶಿ 3 ಬಾರಿ ಬಿಜೆಪಿಯಿಂದಲೇ ಶಾಸಕರಾಗಿದ್ದವರು. ಈಚೆಗಿನ ಅಸೆಂಬ್ಲಿ ಚುನಾವಣೆಯಲ್ಲಿ ತಮಗೆ ಪಕ್ಷ ಟಿಕೆಟ್ ನೀಡಲಿಲ್ಲವೆಂದು ಮುನಿಸಿಕೊಂಡು ಪಕ್ಷ ತ್ಯಜಿಸಿದ್ದರು. ಮತ್ತೆ ಪಕ್ಷ ಸೇರಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ನಮೋಶಿಯವರಿಗೆ ಅನ್ಯ ಜವಾಬ್ದಾರಿಗಳಿಗಿಂತ ವಕ್ತಾರರನ್ನಾಗಿ ನೇಮಕ ಮಾಡಿ ಜಿಲ್ಲಾ ಘಟಕ ಕೈತೊಳೆದುದ್ದು, ಇದು ಪಕ್ಷದಲ್ಲಿನ ಆಂತರಿಕ ತುಮುಲಗಳಿಗೆ ಕನ್ನಡಿಹಿಡಿದಂತಾಗಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ನಮೋಶಿಯವರ ಗಮನ ಸೆಳೆದಾಗ ಅವರು ಹೆಚ್ಚಿನದೇನನ್ನು ಮಾತನಾಡಲಿಲ್ಲವಾದರೂ 'ಪಕ್ಷ ಯಾವ ಜವಾಬ್ದಾರಿ ಕೊಡುವುದೋ ಅದನ್ನು ಸರಿಯಾಗಿ ನಿಭಾಯಿಸಬೇಕಲ್ಲ, ಆ ಕೆಲಸ ಮಾಡುವೆ' ಎಂದಷ್ಟೇ ಹೇಳಿದರು.
ಇನ್ನು ಜಿಲ್ಲಾ ಮಾಧ್ಯಮ ಪ್ರಮುಖ ನಾಮದೇವ ರಾಠೋಡ ಅವರ ಗಮನ ಸೆಳೆದಾಗ 'ಮೂವರು ಸದಸ್ಯರ ವಕ್ತಾರರ ಸಮಿತಿ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಚನೆಯಾಗಿದೆ. ಜಿಲ್ಲಾ ಮಾಧ್ಯಮ ಘಟಕವಂತೂ ಸದಾ ಕಾಲ ಇರುತ್ತದೆ. ಅದಕ್ಕೇ ತಾವೇ ಮುಖ್ಯಸ್ಥರು' ಎಂದರು.