ಯಾರ ಕೊರಳಿಗೆ ವಿಜಯಮಾಲೆ...?
ಕ.ಪ್ರ. ವಾರ್ತೆ , ಗುಲ್ಬರ್ಗ , ಮಾ.29
ದಲಿತ, ಹಿಂದುಳಿದ ವರ್ಗದ ಮತಗಳು, ಜೊತೆಗೆ ಪ್ರಬಲ ಲಿಂಗಾಯಿತ ಕೋಮಿನ ಮತಗಳದ್ದೇ ಪ್ರಭಾವವಿರುವ ಗುಲ್ಬರ್ಗ ಲೋಕ ಸಮರದಲ್ಲಿ ಅಲ್ಪಸಂಖ್ಯಾತರು, ಇತರೆ ಸಮುದಾಯಗಳ ಮತಗಳದ್ದೇ ನಿರ್ಣಾಯಕ ಪಾತ್ರ ಎಂಬುದು ಸೋಜಿಗದ ವಿಚಾರ. ಈ ಸಮುದಾಯದ ಮತಗಳು ಅದ್ಯಾರತ್ತ ವಾಲುವವೋ ಅವರ ಕೊರಳಿಗೇ ವಿಜಯಮಾಲೆ ನಿಶ್ಚಿತ ಎಂಬುದು ಕ್ಷೇತ್ರ ಕಂಡ ಅನೇಕ ಲೋಕ ಸಮರಗಳೇ ಸಾಕ್ಷಿ.
ಸೋಲಿಲ್ಲದ ಸರದಾನ ಪ್ರಗತಿ ಪರ್ವ ಪಣಕ್ಕೆ: 1970ರ ದಶಕದಿಂದ ಇಲ್ಲಿಯವರೆಗೂ 9 ಅಸೆಂಬ್ಲಿ 1 ಲೋಕ ಸಮರ ಎದುರಿಸಿ ಸತತ ವಿಜಯಿಯಾಗಿರುವ ಮಲ್ಲಿಕಾರ್ಜುನ ಖರ್ಗೆ ಇಲ್ಲಿನ ಲೋಕಸಭೆಯಲ್ಲಿ ಪುನರಾಯ್ಕೆ ಬಯಸಿ ನಿಂತವರು. ಕಲಂ 371(ಜೆ)ಯಿಂದ ಹಿಡಿದು ಆಸ್ಪತ್ರೆ, ಮೂಲ ಸೌಕರ್ಯ, ಬಂಡವಾಳ ಹೂಡಿಕೆ, ನೀರಾವರಿ, ಕೃಷಿಯಂತಹ ಹತ್ತು ಹಲವು ರಂಗಗಳಲ್ಲಿ ಕಳೆದೈದು ವರ್ಷದಿಂದ ಕಂಡಿರುವ ಪ್ರಗತಿ ಪರ್ವವನ್ನೇ ಈ ಬಾರಿ ಪಣಕ್ಕಿಟ್ಟಿದ್ದಾರೆ. ಜನ ಕೆಲಸ ನೋಡಿದ್ದಾರೆ, ಕಳೆದ ಬಾರಿ 13 ಸಾವಿರ ಗೆಲುವಿನ ಅಂತರವಿತ್ತು.
ಇಲ್ಲಿನ 8 ಅಸೆಂಬ್ಲಿ ಕ್ಷೇತ್ರಗಳ ಪೈಕಿ 7ರಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಇದು ಗುಲ್ಬರ್ಗ 'ಕೈ' ವಶಕ್ಕೆ ಪ್ರಬಲ ಅಸ್ತ್ರ. ಜನಾನುರಾಗಿ ಕೆಲಸಗಳೊಂದಿಗೆ ಮುಂಚೂಣಿಯಲ್ಲಿದ್ದೇನೆ ಎನ್ನುತ್ತಿರುವ ಖರ್ಗೆಯವರಿಗೆ 'ಕೈ' ದರ್ಬಾರ್ ಸಾಥ್ ನೀಡಿದರೆ ಗೆಲವು ಸುಲಭದ ತುತ್ತಾಗಬಹುದು.
ಕುಸ್ತಿಪಟು ಬಿಗಿಪಟ್ಟು: 2009ರ ಲೋಕ ಸಮರದಲ್ಲಿಯೂ ಖರ್ಗೆ ವಿರುದ್ಧ ಸೆಡ್ಡು ಹೊಡೆದಿದ್ದ ರೇವುನಾಯಕ ಬೆಳಮಗಿ ಪರಾಜಿತರಾದವರು. ಆಗವರು ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದರು. ಸಚಿವಗಿರಿ ಮೇಲಿನ ಪ್ರೀತಿ ಅವರನ್ನು ಪರಾಭವಗೊಳಿಸಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಮತ್ತೆ ಬಿಜೆಪಿ ಅಭ್ಯರ್ಥಿಯಾಗಿರುವ ಬೆಳಮಗಿ ಈಗ ಮಾಜಿ ಮಂತ್ರಿ. ಹಿಂದೆ ಬಿಜೆಪಿ ಸರ್ಕಾರವಿತ್ತು, ಸ್ಥಳೀಯವಾಗಿಯೂ 4 ಬಿಜೆಪಿ ಶಾಸಕರಿದ್ದರು. ಈಗ ಗುಲ್ಬರ್ಗ(ದ)ದಲ್ಲಿ ಮಾತ್ರ ಕಮಲ ಅರಳಿದೆ. ಪಶುಸಂಗೋಪನೆ ಸಚಿವರಾಗಿದ್ದಾಗ ಮಾಡಿದ ಸಾಧನೆಯೇ ರಕ್ಷೆ, ಖರ್ಗೆ ಮಾಡಿದ್ದೇನು, ಹಳೆ ಯೋಜನೆಗಳಿಗೇ ಚಾಲನೆ ನೀಡುತ್ತಿದ್ದಾರೆ ಎಂದು ಖರ್ಗೆ ವಿರುದ್ಧ ಟೀಕೆಗಳ ಸುರಿಮಳೆಗರೆಯುತ್ತ, ಬೀಸುತ್ತಿರುವ 'ನಮೋ' ಗಾಳಿಯಿಂದಾಗಿ ಗೆಲ್ಲುವೆ ಎಂಬ ವಿಶ್ವಾಸದಲ್ಲಿದ್ದಾರೆ.
ಹೋರಾಟದ 'ಸಾಗರ': ಹೋರಾಟಗಾರ ಡಿ.ಜಿ. ಸಾಗರ್ ಜೆಡಿಎಸ್ ಹುರಿಯಾಳು. ಶೋಷಿತರ ಪರ ಇವರ ಹೋರಾಟಗಳ ಬಗ್ಗೆ ದೂಸ್ರಾ ಮಾತಿಲ್ಲವಾದರೂ ಇಲ್ಲಿ ಜೆಡಿಎಸ್ ಮುರಿದ ಮನೆಯಾಗಿರುವ ಸಂದರ್ಭದಲ್ಲಿ ಅವರು ಕಣದಲ್ಲಿ ಕಂಡಿದ್ದಾರೆ. ಪಕ್ಷ ಸ್ಥಳೀಯವಾಗಿ ನೆಲೆಯೇ ಕಳೆದುಕೊಂಡಿದೆ ಎಂಬ ಚರ್ಚೆಯಲ್ಲೇ ಸಾಗರ್ ದೇವೇಗೌಡ, ಕುಮಾರಸ್ವಾಮಿ ಸಾಧನೆಗಳು, ಜೊತೆಗೆ ತಮ್ಮ ಹೋರಾಟಗಳನ್ನೇ ನಂಬಿ ಗೆಲ್ಲುವ ವಿಶ್ವಾಸದೊಂದಿಗೆ ಹೆಜ್ಜೆ ಹಾಕುತ್ತಿದ್ದಾರೆ. ಸಾಗರ್ ಉಡಿ ತುಂಬುವ ಮತಗಳೆಷ್ಟು ಎಂಬುದರ ಮೇಲೆಯೇ ಅನ್ಯರ ಗೆಲವು ನಿಂತಿರುವುದು ಗಮನಾರ್ಹ.
ಮತ ವಿಭಜನೆ ಲೆಕ್ಕಾಚಾರ: 18 ಲಕ್ಷ ಮತದಾರರಲ್ಲಿ ಶೋಷಿತ, ಲಿಂಗಾಯಿತ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಮತಗಳದ್ದೇ ಪ್ರಾಬಲ್ಯ. ಶೇ.60ರಷ್ಟು ಈ ಮತಗಳು ಇರುವುದರಿಂದ ಸಹಜವಾಗಿಯೇ ಕಾಂಗ್ರೆಸ್ ಹಾಗೂ ಬಿಜೆಪಿ ಈ ಮತಗಳನ್ನೇ ನೆಚ್ಚಿಕೊಂಡಿವೆ.
ಕಣದಲ್ಲಿ ಶೋಷಿತ ವರ್ಗದಿಂದ ಬಂದವರಲ್ಲಿ ಮಲ್ಲಿಕಾರ್ಜುನ ಖರ್ಗೆ, ಡಿ.ಜಿ. ಸಾಗರ್, ಮಹಾದೇವ ಧನ್ನಿ ಪ್ರಮುಖರು. ರೇವುನಾಯಕ ಹಾಗೂ ಲಲಿತಾನಾಯರ್ ಅವರದ್ದು ಲಂಬಾಣಿ ಬುಡಕಟ್ಟು ಮೂಲ. ಆ ವರ್ಗದ ಮತಗಳು ಸಹಜವಾಗಿಯೇ ಆಯಾ ವರ್ಗ ಪ್ರತಿನಿಧಿಸುವ ನಾಯಕರಲ್ಲಿ ಹಂಚಿಕೆಯಾಗುವುದು ಸಹಜ. ಹೀಗಾಗಿಯೇ ಈ ಬಾರಿಯ ಕಣದಲ್ಲಿ ಕದನ ಕತೂಹಲ ಮೂಡಿದೆ. ಜಾತಿ ಲೆಕ್ಕಾಚಾರ ಜೋರಾಗಿಯೇ ಸಾಗಿದೆ.
ಸಾಗರ್, ಧನ್ನಿ ಮತಗಳು ಖರ್ಗೆ ಗೆಲುವಿನ ಮೇಲೆ ಪರಿಣಾಮ ಬೀರಿದರೆ, ಇತ್ತ ಲಲಿತಾನಾಯಕ್ ಮತಗಳು ರೇವುನಾಯಕ ಗೆಲುವಿನೊಂದಿಗೆ ತಳಕುಹಾಕಿಕೊಂಡಿವೆ. ಮತ ವಿಭಜನೆ ಜಾತಿ ಆಧಾರದಲ್ಲಿ ನಡೆಯದೆ ಹೋದಲ್ಲಿ ಅಭಿವೃದ್ಧಿ ವಿಚಾರವೇ ಪ್ರಮುಖವಾಗಿ ನೇರ ಹಣಾಹಣಿಗೆ ಕಣ ಸಜ್ಜಾಗುತ್ತದೆ. ಬೇರು ಮಟ್ಟದಲ್ಲಿ ಜಾತಿ ಗಣಿತವೇ ಸಾಗಿದ್ದರಿಂದ ಮತ ವಿಭಜನೆ ನಿಶ್ಚಿತ ಎಂಬ ಮಾತುಗಳಿವೆ.
ಎಎಪಿಯ ಲಲಿತಾನಾಯಕ್, ಜೆಡಿಎಸ್ನ ಸಾಗರ್, ಬಿಎಸ್ಪಿಯ ಧನ್ನಿ ಇವರೆಲ್ಲರೂ ಖರ್ಗೆ ಅಥವಾ ಬೆಳಮಗಿ ಇವರಿಬ್ಬರಲ್ಲಿ ಯಾರ ಬುಟ್ಟಿಯಿಂದ ಎಷ್ಟು ಮತಗಳನ್ನು ಬಾಚಿಕೊಳ್ಳುವರೋ ಎಂಬುದು ಕ್ಷೇತ್ರಾದ್ಯಂತ ಕುತೂಹಲ ಕೆರಳಿಸಿದೆ. ಏಕೆಂದರೆ ಈ ಮತ ಬಾಚಿಕೊಳ್ಳುವಿಕೆಯ ಮೇಲೆಯೇ ಬಿಸಿಲೂರು ಗೆಲ್ಲುವ ಕುದುರೆ ಓಡಲಿದೆ.
1. ರೇವುನಾಯಕ ಬೆಳಮಗಿ (ಬಿಜೆಪಿ)
2. ಮಲ್ಲಿಕಾರ್ಜುನ ಖರ್ಗೆ (ಕಾಂಗ್ರೆಸ್)
3. ಡಿ.ಜಿ. ಸಾಗರ- ಜನತಾದಳ (ಜೆಡಿಎಸ್)
4. ಬಿ.ಟಿ. ಲಲಿತಾನಾಯಕ್ (ಆಮ್ ಆದ್ಮಿ)
5. ಧನ್ನಿ ಮಹಾದೇವ ಬಿ. (ಬಿಎಸ್ಪಿ)
6. ಎಸ್.ಎಂ. ಶರ್ಮಾ (ಎಸ್ಯುಸಿಐ-ಸಿ)
7. ಶಂಕರ ಜಾಧವ- (ಪಿಪಿಐ)
8. ರಾಮು- ಪಕ್ಷೇತರ
ನಾಮಪತ್ರ ಹಿಂಪಡೆದವರು...
ಆರು ಅಭ್ಯರ್ಥಿಗಳು ಶನಿವಾರ ತಮ್ಮ ನಾಮಪತ್ರಗಳನ್ನು ಹಿಂದಕ್ಕೆ ಪಡೆದಿದ್ದು ಅವರ ಹೆಸರುಗಳು ಹೀಗಿವೆ.
1. ನರೇಶಕುಮಾರ ಕೋಲಿ
2. ತಿಪ್ಪಣ್ಣ ಒಡೆಯರಾಜ್
3. ಗುರುಶಾಂತ ಪಟ್ಟೇದಾರ್
4. ರಮೇಶ
5. ಬಾಬುರಾವ
6. ಸೀತಾರಾಮ.
ಮತ ಮಾಹಿತಿ
ಒಟ್ಟು ಮತದಾರರು- 16,62,359
ಪುರುಷ ಮತದಾರರು- 8,48,172
ಮಹಿಳಾ ಮತದಾರರು- 8,14,187
ಒಟ್ಟು ಮತಗಟ್ಟೆಗಳು- 1,946
- ಅಫಜಲ್ಪುರ- ಪುರುಷ- 1,02,418, ಮಹಿಳೆ- 94,410, ಒಟ್ಟು- 1, 96, 828
- ಜೇವರ್ಗಿ- ಪುರುಷ- 1,02,682, ಮಹಿಳೆ- 99,713, ಒಟ್ಟು- 2,02,395
- ಗುರುಮಠಕಲ್- ಪುರುಷ- 1,04,791, ಮಹಿಳೆ- 1,04,658, ಒಟ್ಟು 2,09,449
- ಚಿತ್ತಾಪುರ- ಪುರುಷ- 1,00,491, ಮಹಿಳೆ- 97,484, ಒಟ್ಟು- 1,97,975
- ಸೇಡಂ- ಪುರುಷ- 95,197, ಮಹಿಳೆ- 94,967, ಒಟ್ಟು- 1,90,164
- ಗುಲ್ಬರ್ಗ(ಗ್ರಾಮೀಣ)- ಪುರುಷ- 1,13,581, ಮಹಿಳೆ- 1,04, 822, ಒಟ್ಟು- 2,18,403
- ಗುಲ್ಬರ್ಗ(ದಕ್ಷಿಣ)- ಪುರುಷ- 1,13,096, ಮಹಿಳೆ- 1,09,934, ಒಟ್ಟು- 2,23,030
- ಗುಲ್ಬರ್ಗ(ಉತ್ತರ)- ಪುರುಷ- 1,15,916, ಮಹಿಳೆ- 1,08,199, ಒಟ್ಟು- 2,24,115
-ಶೇಷಮೂರ್ತಿ ಅವಧಾನಿ