ನಮೋ ಅಲೆಗೆ ಕಾಂಗ್ರೆಸ್ ದಿಗ್ಗಜರ ಪಲಾಯನ: ಈಶ್ವರಪ್ಪ
ಕ.ಪ್ರ. ವಾರ್ತೆ ಶಹಾಬಾದ್ಣ್ ಮಾ.30
ವಿಶ್ವದಲ್ಲೇ ಅಭಿವೃದ್ಧಿಯಲ್ಲಿ ಗುಜರಾತ್ ಅನ್ನು 6ನೇ ಸ್ಥಾನಕ್ಕೆ ತಂದಿರುವ ಮೋದಿಯ ಅಭಿವೃದ್ಧಿ ಅಲೆಗೆ ಹೆದರಿದ ರಾಷ್ಟ್ರ ಮಟ್ಟದ ಕಾಂಗ್ರೆಸ್ ದಿಗ್ಗಜರು ಚುನಾವಣೆಗೆ ನಿಲ್ಲದೆ ಪಲಾಯನ ಮಾಡಿದ್ದಾರೆಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.
ಶಹಾಬಾದ್ ಬಳಿಯ ಹೊನಗುಂಟಾ ಗ್ರಾಮದಲ್ಲಿ ಶನಿವಾರ ಸಂಜೆ ಲೋಕಸಭಾ ಅಭ್ಯರ್ಥಿ ರೇವುನಾಯಕ ಬೆಳಮಗಿ ಪರ ಚುನಾವಣಾ ಪ್ರಚಾರ ನಡೆಸಿ ಮಾತನಾಡಿ, ಇದು ಕಾಂಗ್ರೆಸ್, ಬಿಜೆಪಿ ಚುನಾವಣೆಯಲ್ಲ. ದೇಶ ಭವಿಷ್ಯದ ಚುನಾವಣೆಯಾಗಿದೆ. ಕಾಂಗ್ರೆಸ್ ಆಡಳಿತದಲ್ಲಿ ಚೀನಾ, ಪಾಕಿಸ್ತಾನ ಅತಿಕ್ರಮಿಸಿಕೊಂಡಿದ್ದಲ್ಲದೆ, ಸೈನಿಕರ ರುಂಡಗಳನ್ನು ಚಂಡಾಡಿದರೂ ಚಕಾರ ಎತ್ತದೆ ಇದ್ದು, ಕಾಂಗ್ರೆಸ್ ನಾಯಕರ ಮಕ್ಕಳು ಸೈನಿಕರಾಗಿದ್ದರೆ ಈ ರೀತಿ ಮೌನ ವಹಿಸುತ್ತಿದ್ದರೆ ಎಂದು ಪ್ರಶ್ನಿಸಿದರು.
ಮೋದಿಯವರಿಗೆ ವೀಸಾ ನೀಡಲು ನಿರಾಕರಿಸಿದ ಅಮೆರಿಕ ಇಂದು ಗುಜರಾತಿಗೆ ತನ್ನ ರಾಯಭಾರಿಯನ್ನು ಕಳುಹಿಸಿ, ಮೋದಿಯವರನ್ನು ಸನ್ಮಾನಿಸುತ್ತಿದ್ದಾರೆ. ಗುಜರಾತಿನಲ್ಲಿ 24 ಗಂಟೆ ವಿದ್ಯುತ್, ಒಂದಿಂಚು ಒಣಭೂಮಿ ಸಿಗದಂತೆ ನೀರಾವರಿ ಯೋಜನೆ ಕೈಗೊಂಡಿದ್ದು, ದೇಶದ ಸುರಕ್ಷತೆ, ಅಭಿವೃದ್ಧಿಗಾಗಿ ಯುವಕರು, ಎಲ್ಲಾ ವರ್ಗದ ಜನರು ನಿರ್ಧರಿಸಿದ್ದಾರೆ ಎಂದರು.
ಸಾಕಿದ ಗಿಳಿಯಲ್ಲ ನಾನು: ಲೋಕಸಭಾ ಅಭ್ಯರ್ಥಿ ರೇವುನಾಯಕ ಬೆಳಮಗಿ ಮಾತನಾಡಿ, ಖರ್ಗೆಯವರು ಹೇಳಿದಂತೆ ನಾನು ಬಿಜೆಪಿ ಸಾಕಿದ ಗಿಳಿಯಲ್ಲ. ಬಿಜೆಪಿಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಿಂದೆ. ಆದರೆ ಖರ್ಗೆಯವರೇ, ನೀವು ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರು ಹೇಳಿದಷ್ಟೇ ಹೇಳುತ್ತಿದ್ದು ಸಾಕಿದ ಗಿಳಿಯಾಗಿದ್ದೀರಿ ಎಂದು ತಿರುಗೇಟು ನೀಡಿದರು. ರೇಲ್ವೆ ಇಲಾಖೆಯ ಹಳೆ ಕೆಲಸಗಳಿಗೆ ಬಣ್ಣ ಹಚ್ಚಿ ನಾನು ಮಾಡಿದ್ದೇನೆ ಎಂದು ಸುಳ್ಳು ಹೇಳಿ ಜನರಿಗೆ ದಿಕ್ಕು ತಪ್ಪಿಸುತ್ತಿದ್ದೀರಿ. ಅಭಿವೃದ್ಧಿ ಬಗ್ಗೆ ನಾನು ಕೇಳಿದ ಮೂರು ಪ್ರಶ್ನೆಗೆ ಖರ್ಗೆ ಉತ್ತರಿಸಿಲ್ಲ ಎಂದರು. ಮಾಜಿ ಸಚಿವ ಸುನೀಲ್ ವಲ್ಯಾಪುರೆ ಮಾತನಾಡಿ, ಹೈ-ಕ ಪ್ರದೇಶಕ್ಕೆ ಕಲಂ 371(ಜೆ) ಜಾರಿಗೆ ತರಲು ನಾನೇ ಕಾರಣ ಎನ್ನುವ ಖರ್ಗೆಯವರು, ರಾಜ್ಯ ಬಿಜೆಪಿ ಸರ್ಕಾರ, ಕೇಂದ್ರದಲ್ಲಿ ಬಿಜೆಪಿಯ ಸಹಯೋಗವಿಲ್ಲದೆ ಕಲಂ. 371 ಜಾರಿಗೆ ತರಲು ಸಾಧ್ಯವಿತ್ತೆ ಎಂದು ಪ್ರಶ್ನಿಸಿದರು.
'108'ರಲ್ಲಿ ಹಣ ಹಂಚಿಕೆ!
ಗುಲ್ಬರ್ಗ ಲೋಕಸಭಾ ಚುನಾವಣೆಯಲ್ಲಿ ಸೋಲುವ ಭೀತಿಯಲ್ಲಿರುವ ಕೇಂದ್ರ ಸಚಿವ ಡಾ. ಮಲ್ಲಿಕಾರ್ಜುನ ಖರ್ಗೆ, 108 ಆ್ಯಂಬುಲೆನ್ಸ್‌ನಲ್ಲಿ ಹಾಗೂ ಸರ್ಕಾರಿ ಅಧಿಕಾರಿಗಳ ಮೂಲಕ ಕ್ಷೇತ್ರದಲ್ಲಿ ಹಣ ಹಂಚುತ್ತಿದ್ದಾರೆಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಆರೋಪಿಸಿ, ಇನ್ನು ಎರಡು ತಿಂಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದ್ದು, ಖರ್ಗೆಯವರ ಹಣವನ್ನು ಹಂಚುತ್ತಿರುವ ಅಧಿಕಾರಿಗಳು ಎಚ್ಚರದಿಂದ ಇರಬೇಕೆಂದು ಎಚ್ಚರಿಕೆ ನೀಡಿದರು.