ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕಾರ್ಮಿಕರ ಹಕ್ಕಿನ ಮೇಲೆ ದಾಳಿ; ಕಳವಳ

Rashmi Kasaragodu
Updated On : 2 May 2014, 11:40 am

ಶಹಾಬಾದ್: ಉದಾರೀಕರಣ ನೀತಿಯಿಂದ ಉದ್ಯೋಗ ಸಂಬಂಧಗಳು ತೀವ್ರಗತಿಯಲ್ಲಿ ಬದಲಾಗುತ್ತಿವೆ. ಕಾರ್ಮಿಕರ ಹಕ್ಕುಗಳ ಮೇಲೆ ನಿರಂತರ ದಾಳಿ ನಡೆಯುತ್ತಿದೆ. ಇದನ್ನು ತಡೆಗಟ್ಟಲು ಸಂವಿಧಾನಾತ್ಮಕವಾಗಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಕಾರ್ಮಿಕರು ಮುಂದಾಗಬೇಕಿದೆ ಎಂದು ಚಿತ್ತಾಪುರ ನ್ಯಾಯಾಧೀಶ ಕೆ.ಎಸ್.ರೊಟ್ಟೆರ್ ಅಭಿಪ್ರಾಯಪಟ್ಟರು.
ಚಿತ್ತಾಪುರ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಶಹಾಬಾದ್ ಹಾಗೂ ಅಲ್ಸಟಾಮ್ ಕಾರ್ಖಾನೆ ಜನರಲ್ ಕಾರ್ಮಿಕರ ಯೂನಿಯನ್ ವತಿಯಿಂದ ಗುರುವಾರ ಅಲ್ಸಟಾಮ್ ಕಾಲೋನಿಯ ರಂಗಮಂದಿರಲ್ಲಿ ಹಮ್ಮಿಕೊಂಡಿರುವ ಕಾರ್ಮಿಕ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಬಂಡವಾಳಶಾಹಿಗಳ ಕೈಗೊಂಬೆ: ಕಾರ್ಮಿಕ ಮುಖಂಡ ಅಬ್ದುಲ್ ಜಬ್ಬರ್ ಪಟೇಲ ಮಾತನಾಡಿ, ಕಾರ್ಮಿಕರ ಕಾಯ್ದೆಯ ಮೂಲಕ ಕಾರ್ಮಿಕರ ರಕ್ಷಣೆ ಮಾಡಬೇಕಾದ ಸರ್ಕಾರಗಳು ಬಂಡವಾಳಶಾಹಿಗಳ ಕೈಗೊಂಬೆಯಾಗಿವೆ. ದುಡಿಯುವ ವರ್ಗದ ಸವಲತ್ತುಗಳನ್ನು ಕಡಿತಗೊಳಿಸುತ್ತಿವೆ. ಇದರಿಂದ ಕಾರ್ಮಿಕರ ಕುಟುಂಬಗಳು ಸಂಕಷ್ಟದಲ್ಲಿವೆ. ಗುತ್ತಿಗೆ ಆಧಾರ ಪದ್ಧತಿ ಕಡಿತಗೊಳಿಸಿ, ಕಾಯಂ ಪದ್ಧತಿ ಜಾರಿಯಾದಾಗ ಮಾತ್ರ ಕಾರ್ಮಿಕರಿಗೆ ನ್ಯಾಯ ದೊರಕಿದಂತಾಗುತ್ತದೆ. ಅದಕ್ಕಾಗಿ ಕಾರ್ಮಿಕರಿಗಾಗುತ್ತಿರುವ ಅನ್ಯಾಯದ ವಿರುದ್ಧ ಒಗ್ಗಟ್ಟಿನಿಂದ ಧ್ವನಿ ಎತ್ತಬೇಕಾಗುಗುತ್ತದೆ. ದೇಶಕ್ಕೆ ಬಂದ ದೊಡ್ಡ ಸವಾಲನ್ನು ಎದುರಿಸಲು ಗಟ್ಟಿ ಹೋರಾಟ ರೂಪಿಸಬೇಕಾಗಿದೆ ಎಂದು ಹೇಳಿದರು.
ಕಾನೂನಾತ್ಮಕ ಹೋರಾಟ ಅಗತ್ಯ: ಸರ್ಕಾರಿ ಸಹಾಯಕ ಅಭಿಯೋಜಕ ಬಸವಂತರೆಡ್ಡಿ ಮಾತನಾಡಿ, ಜಾಗತೀಕರಣ ಮತ್ತು ಉದಾರೀಕರಣ ನೀತಿಯಿಂದಾಗಿ ಕಾರ್ಮಿಕರ ಬದುಕು ಸಂಕಷ್ಟದಲ್ಲಿದೆ. ಇದರಿಂದ ಪಾರಾಗಿ ನಿಮ್ಮ ಭವಿಷ್ಯವನ್ನು ನಿರ್ಧಾರ ಮಾಡಬೇಕಾದರೆ ಕಾರ್ಮಿಕರ ಒಗ್ಗಟ್ಟಿನ ಪ್ರದರ್ಶನ ನೀಡುವುದಲ್ಲದೆ ಕಾನೂನಾತ್ಮಕ ರೀತಿಯಲ್ಲಿ ಹೋರಾಟ ಮಾಡುವುದು ಅಗತ್ಯ ಎಂದು ಹೇಳಿದರು.
ಅಲ್ಸಟಾಮ್ ಕಾರ್ಖಾನೆಯ ಜನರಲ್ ಕಾರ್ಮಿಕರ ಸಂಘಟನೆ ಅಧ್ಯಕ್ಷ ಸತ್ಯನಾರಾಯಣ ಜೋಶಿ, ಹಿರಿಯ ಕಾರ್ಮಿಕ ಮುಖಂಡ ಸಾಲೋಮನ್ ಮಾತನಾಡಿದರು. ವಕೀಲರ ಸಂಘದ ಶಶಿಕಾಂತ ಶಿಂಧೆ, ರಮೇಶ ರಾಠೋಡ, ರಮೇಶ ಮಲಕೂಡ, ಸಿ.ಎಸ್. ಪೂಜಾರಿ ವೇದಿಕೆಯ ಮೇಲಿದ್ದರು. ರುಕ್ಮೋದ್ದಿನ್ ಪಟೇಲ್ ನಿರೂಪಿಸಿ, ವಂದಿಸಿದರು. ಅಶ್ವಥನಾರಾಯಣ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement