ಮಾನವೀಯ ಮೌಲ್ಯ ಬಿತ್ತಿದ ಶರಣರು: ಬಾಲರಾಜು
ಗುಲ್ಬರ್ಗ: ಕನ್ನಡನಾಡು ಕಂಡ ಸತ್ವಭರಿತ ಸಾಹಿತ್ಯ ವಚನ. ಮಾನವಸಂಕುಲದ ಅಜ್ಞಾನದ ಸಂಕೋಲೆಯನ್ನು ಬಿಡಿಸಿ ಮಾನವೀಯ ಮೌಲ್ಯಗಳನ್ನು ಬಿತ್ತರಿಸಿ ಮಾನವ ಪ್ರೇಮವನ್ನು ಹಂಚಿದ ವಚನಕಾರರು ಸರ್ವ ಕಾಲಕ್ಕೂ ಪ್ರಸ್ತುತ ಎಂದು ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಚ್. ಬಾಲರಾಜು ಹೇಳಿದರು.
ನಗರದ ತಾಜ್ ಶಿಕ್ಷಣ ಕಾಲೇಜು ಸಭಾಂಗಣದಲ್ಲಿ ಬಸವ ಜಯಂತಿ ನಿಮಿತ್ತ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿಯು ಹಮ್ಮಿಕೊಂಡ ವಚನಗಳಲ್ಲಿ ವಾಸ್ತವಪ್ರಜ್ಞೆ ಎಂಬ ವಿಶೇಷ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕಾಲೇಜು ಶಿಕ್ಷಣ ಇಲಾಖೆಯ ವಿಶೇಷಾಧಿಕಾರಿ ಡಾ. ಇಂದುಮತಿ ಪಾಟೀಲ್ ಉಪನ್ಯಾಸ ನೀಡಿದರು.
ಶಿಕ್ಷಕರೇ ಸಮಾಜದ ನಿರ್ಮಾರ್ತೃಗಳು: ಪ್ರಾಸ್ತಾವಿಕವಾಗಿ ಮಾತನಾಡಿದ ಅಕಾಡೆಮಿ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಸಮಾಜವನ್ನು ನಿರ್ಮಿಸುವ ನಿಜಶಿಲ್ಪಿಗಳೆಂದರೆ ಶಿಕ್ಷಕರು. ಸ್ವಾತಂತ್ರ್ಯ, ಸಮಾನತೆ, ಮಾನವೀಯ ಮೌಲ್ಯಗಳನ್ನು ಪ್ರಪಂಚಕ್ಕೆ ಸಾರಿದ ಬಸವಾದಿ ಶರಣರ ವೈಚಾರಿಕ ಚಿಂತನೆಯನ್ನು ಇಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು. ಅತಿಥಿಯಾಗಿ ಆಗಮಿಸಿದ ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ, ತಮ್ಮ ಸಹಜ ಮಾತುಗಳಲ್ಲಿಯೇ ಹರ್ಷದ ಹೊನಲನ್ನು ಹರಿಸುತ್ತಾ, ಇಂದಿನ ಸಮಾಜಕ್ಕೆ ಅವಶ್ಯವಿರುವ ಶರಣ ಚಿಂತನೆ ಕುರಿತು ಮಾರ್ಮಿಕವಾಗಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲೆ ಜಯಶ್ರೀ ಎಸ್. ಅಧ್ಯಕ್ಷತೆ ವಹಿಸಿದ್ದರು. ಬಸವರಾಜ ಅಂಗನವಾಡಿ, ಚಿತ್ರಶೇಖರ ಶೀಲವಂತ, ಪರಮೇಶ್ವರ ತಳವಾರ, ಎಂ.ಬಿ. ನಿಂಗಪ್ಪ, ಶಂಕರ ಬಿರಾದಾರ, ಶರಣಪ್ಪ ದೇಸಾಯಿ, ಕೆ.ಗಿರಿಮಲ್ಲ, ಮಹಾದೇವ ಬಡಾ, ವಕೀಲ ಚಂದ್ರಶೇಖರ, ಶ್ರೀಕಾಂತ ಪಾಟೀಲ ಇದ್ದರು.
ನಗರದಲ್ಲಿಂದು ಮೆರವಣಿಗೆ
ಗುಲ್ಬರ್ಗ: ಬಸವಣ್ಣನವರ 881ನೇ ಜಯಂತಿ ನಿಮಿತ್ತ ಮೇ 2ರಂದು ನಗರದಲ್ಲಿ ಬೃಹತ್ ಮೆರವಣಿಗೆ ಆಯೋಜಿಸಲಾಗಿದೆ ಎಂದು ಲಿಂಗಾಯಿತ ಯುವ ವೇದಿಕೆ ಅಧ್ಯಕ್ಷ ಮಲ್ಲಿಕಾರ್ಜುನ ಗರೂರ ತಿಳಿಸಿದ್ದಾರೆ. ರಿಂಗ್ ರಸ್ತೆಯ ರಾಮ ಮಂದಿರದಿಂದ ಬೆಳಗ್ಗೆ ಹೊರಡುವ ಮೆರವಣಿಗೆಯಲ್ಲಿ ಸಾವಿರಕ್ಕೂ ಹೆಚ್ಚು ಬಸವ ಭಕ್ತರು ಪಾಲ್ಗೊಳ್ಳಲಿದ್ದಾರೆ. ಮೆರವಣಿಗೆಯಲ್ಲಿ 200ಕ್ಕೂ ಹೆಚ್ಚು ದ್ವಿಚಕ್ರ ವಾಹನ, ನೂರಕ್ಕೂ ಮೇಲ್ಪಟ್ಟು ಇತರ ವಾಹನಗಳು ಭಾಗವಹಿಸಲಿವೆ. ದಕ್ಷಿಣ ಮತಕ್ಷೇತ್ರದ ಶಾಸಕ ದತ್ತಾತ್ರೇಯ ಸಿ. ರೇವೂರ ಬೈಕ್‌ರ್ಯಾಲಿಗೆ ಚಾಲನೆ ನೀಡುವರು. ರಾಮ ಮಂದಿರ ವೃತ್ತದಿಂದ ಹೊರಡುವ ಮೆರವಣಿಗೆ ಸರ್ದಾರ ವಲ್ಲ್ಲಭಬಾಯಿ ಪಟೇಲ ವೃತ್ತಕ್ಕೆ ತೆರಳಿ ಬಸವಣ್ಣನ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಗುವುದು.