ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ವಿಶ್ವ ಕಾರ್ಮಿಕರ ದಿನಾಚರಣೆ

Rashmi Kasaragodu
Updated On : 2 May 2014, 11:40 am

ಗುಲ್ಬರ್ಗ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಜಿಲ್ಲಾ ವಕೀಲರ ಸಂಘ ಹಾಗೂ ಶ್ರಮಜೀವಿಗಳ ಕಾರ್ಮಿಕರ ಸಂಘದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ಕಾರ್ಮಿಕರ ದಿನಾಚರಣೆಯನ್ನು ಜಿಲ್ಲಾ ನ್ಯಾಯಧೀಶ ಡಿ.ಆರ್. ವೆಂಕಟ ಸುದರ್ಶನ ಉದ್ಘಾಟಿಸಿದರು. ಬಸವರಾಜ ಅಪ್ಪ ಸಾನ್ನಿಧ್ಯ ವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷ ಡಿ.ಕೆ. ಯುಸೂಫ್, ಸಿದ್ದಲಿಂಗಪ್ಪ, ಕೆ.ವಿಶ್ವನಾಥ, ಪ್ರಭಾಕರ ಕರಡಿ, ರಾಮಕೃಷ್ಣ ಹಾಗೂ ಶ್ರಮಜೀವಿಗಳ ಸಂಘದ ಅಧ್ಯಕ್ಷ ಚಂದ್ರಶೇಖರ ಎಸ್.ಹಿರೇಮಠ, ಎ.ವಿಜಯನ್ ಇದ್ದರು.



ಡಿಸಿ, ಎಸ್ಪಿ ವರ್ಗಾವಣೆಗೆ ಒತ್ತಾಯಿಸಿ ಪ್ರತಿಭಟನೆ
ಗುಲ್ಬರ್ಗ: ಅಕ್ರಮ ಮರಳು ದಂಧೆ ಹಾಗೂ ಅಪರಾಧಗಳನ್ನು ನಿಯಂತ್ರಿಸುವಲ್ಲಿ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ವಿಫಲರಾಗಿದ್ದಾರೆ ಎಂದು ಆರೋಪಿಸಿ ವೀರ ಕನ್ನಡಿಗರ ಸೇನೆ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು. ಅಪರಾಧಿ ಚಟುವಟಿಕೆ ಹತ್ತಿಕ್ಕುವಲ್ಲಿ ವಿಫಲರಾಗಿರುವ ಅಧಿಕಾರಿಗಳ ಕೂಡಲೇ ವರ್ಗಾವಣೆ ಮಾಡುವಂತೆ ಆಗ್ರಹಿಸಿದರು.
ಜಿಲ್ಲೆಯಲ್ಲಿ ಕಳೆದ 2 ವರ್ಷಗಳಿಂದ ಅಕ್ರಮ ಮರಳು ದಂಧೆ ವ್ಯವಸ್ಥಿತವಾಗಿ ನಡೆದಿದೆ. ಅಪರಾಧಗಳು ನಿತ್ಯವೂ ನಡೆಯುತ್ತಿವೆ. ಆದರೂ ಇವೆರಡು ನಿಯಂತ್ರಿಸುವಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. ನದಿ, ಕಾಲುವೆ, ಹಳ್ಳಗಳಲ್ಲಿ ಹಗಲು ರಾತ್ರಿಯೆನ್ನದೆ ಮರಳು ದಂಧೆ ನಡೆಯುತ್ತದೆ. ಇದರಿಂದ ಜಿಲ್ಲೆಯಲ್ಲಿ ಪ್ರತಿನಿತ್ಯವೂ 1 ಕೋಟಿ ಮೌಲ್ಯದ ಮರಳು ಮಾರಾಟ ಅಕ್ರಮವಾಗಿಯೇ ನಡೆಯುತ್ತಿದೆ. ರೌಡಿಗಳ ಉಪಟಳ ಹೆಚ್ಚಾಗಿ ನೆಮ್ಮದಿ ಹಾಳಾಗುತ್ತಿದೆ ಎಂದು ದೂರಿದರು.
ಸಿದ್ದು ಕಂದಗಲ್, ಅರುಣಕುಮಾರ ಪಾಟೀಲ್, ರವಿ ಒಂಟಿ, ದತ್ತು ಭಾಸಗಿ, ರಾಮ ಪುಜಾರಿ, ಸಂತೋಷ ತಳವಾರ, ಅಮಿತ ಪಾಟೀಲ್, ಶಿವಾಜಿ, ಪ್ರಶಾಂತ, ಗೌರಿ ಶಂಕರ, ಹಣಮಂತ ಜಾಧವ್, ಸುಂದರ ಬಿ, ತಿಪ್ಪಣ್ಣಾ ಪವಾರ, ವಿಜಯಕುಮಾರ ಬೆಳಗುಂಪಿ, ಭೀಮಾಶಂಕರ ರೆಡ್ಡಿ, ಅವಿನಾಶ, ಶಿವು, ಮಂಜು, ಮಲ್ಲಯ್ಯ, ವಿಶ್ವನಾಥ, ರಜನಿಕಾಂತ ಇದ್ದರು.
ತುರ್ತು ನಿರ್ಗಮನ ದ್ವಾರ ಅಳವಡಿಕೆಗೆ ಸೂಚನೆ
ಗುಲ್ಬರ್ಗ: ಪ್ರಯಾಣಿಕರ ಒಪ್ಪಂದ ಹಾಗೂ ಪ್ರವಾಸಿ ವಾಹನಗಳಿಗೆ ತುರ್ತು ನಿರ್ಗಮನ ದ್ವಾರ ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಸಂಬಂಧಿಸಿದ ವಾಹನಗಳ ಮಾಲೀಕರು ಹಾಗೂ ಎನ್‌ಇ.ಕೆಆರ್‌ಟಿಸಿ ಸಂಸ್ಥೆಯವರು ತಮ್ಮ ಒಪ್ಪಂದ ಮತ್ತು ಪ್ರವಾಸಿ ವಾಹನಗಳಿಗೆ ತುರ್ತು ನಿರ್ಗಮನ ದ್ವಾರ ಅಳವಡಿಸಿಕೊಂಡ ನಂತರವೇ ವಾಹನ ಸಂಚಾರ ಪ್ರಾರಂಭಿಸುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಈಶ್ವರ. ಬಿ. ಆವಟೆ ಅವರು ಸೂಚಿಸಿದ್ದಾರೆ. ಸಾರಿಗೆ ಸಚಿವರ ಅಧ್ಯಕ್ಷತೆಯಲ್ಲಿ 2013ರ ನವೆಂಬರ್ 17ರಂದು ನಡೆದ ಸಭೆಯಲ್ಲಿ ವಾಹನಗಳಿಗೆ ತುರ್ತು ನಿರ್ಗಮನ ದ್ವಾರ ಅಳವಡಿಸಿಕೊಳ್ಳಲು 2014ರ ಏಪ್ರಿಲ್ 30ರವರೆಗೆ ಕಾಲಾವಕಾಶ ನೀಡಲಾಗಿತ್ತು. 2014ರ ಮೇ 1ರಿಂದ ತುರ್ತು ನಿರ್ಗಮನ ದ್ವಾರ ಅಳವಡಿಸಿಕೊಳ್ಳದ ವಾಹನಗಳ ಸಂಚಾರ ನಿರ್ಬಂಧಿಸಲು ತೀರ್ಮಾನಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಈಶ್ವರ ಬಿ. ಆವಟೆ ಮತ್ತು ಮೋಟಾರು ವಾಹನ ನಿರೀಕ್ಷಕ ಪರಮಾನಂದ ಸಜ್ಜನ ಅವರು ಜಂಟಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ತುರ್ತು ನಿರ್ಗಮನ ದ್ವಾರ ಅಳವಡಿಸಿಕೊಳ್ಳದ ಒಂದು ಒಪ್ಪಂದ ಹಾಗೂ ಒಂದು ಪ್ರವಾಸಿ ವಾಹನದ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಈ ರೀತಿಯ ಕಾರ್ಯಾಚರಣೆಗಳು ಮುಂಬರುವ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಡೆಸಲಾಗುವುದು. ತುರ್ತು ನಿರ್ಗಮನ ದ್ವಾರವಿರದ ವಾಹನಗಳ ಯೋಗ್ಯತಾ ಪತ್ರವನ್ನು ಅಮಾನತ್ತುಗೊಳಿಸುವುದರ ಜತೆಗೆ ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
371(ಜೆ) ನಿಯಮ ಸಡಿಲಗೊಳಿಸಲು ಒತ್ತಾಯ
ಗುಲ್ಬರ್ಗ: ಸಂವಿಧಾನದ 371(ಜೆ) ಕಲಂ ಅಡಿಯಲ್ಲಿ ನೀಡಲಾಗುತ್ತಿರುವ ಮೀಸಲಾತಿ ಪ್ರಮಾಣ ಪತ್ರಕ್ಕಾಗಿ ಅನುಬಂಧ 'ಎ' ಪಡೆಯಬೇಕಾದರೆ ರೂಪಿಸಬೇಕಾಗಿರುವ ನಿಯಮಗಳನ್ನು ಸಡಿಲಿಸಬೇಕೆಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜು ಲೆಂಗಟಿ ಮನವಿ ಮಾಡಿದ್ದಾರೆ. 371(ಜೆ)  ಸಂಬಂಧಿಸಿದ ಅಧಿಸೂಚನೆಯಲ್ಲಿ ವಿವರಿಸಿದ ಅಗತ್ಯ ದಾಖಲೆಗಳಿಗಿಂತ ಹೆಚ್ಚು ದಾಖಲೆಗಳನ್ನು ನೀಡುವಂತೆ ಹೇಳಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ. ಹೀಗಾಗಿ ತಹಸೀಲ್ದಾರ್ ಕಚೇರಿಗೆ ಸೂಕ್ತ ನಿರ್ದೇಶನ ನೀಡಿ ಅಗತ್ಯ ದಾಖಲೆ ಮಾತ್ರ ಪಡೆಯುವಂತೆ ಮೇಲಧಿಕಾರಿಗಳು ಸೂಚಿಸಬೇಕು. ಮೀಸಲಾತಿ ಪ್ರಮಾಣಪತ್ರ ಸಂಬಂಧ ಒದಗಿಸಬೇಕಾದ ದಾಖಲೆಗಳ ಚೆಕ್ ಲಿಸ್ಟನ್ನು ಎಲ್ಲ ಕಚೇರಿಗಳ ಸೂಚನಾ ಫಲಕದಲ್ಲಿ ಅಂಟಿಸಬೇಕು ಎಂದು ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement