'ಸೌಲಭ್ಯ ಪಡೆದು ಅಭಿವೃದ್ಧಿ ಸಾಧಿಸಿ'
ಆಳಂದ: ದುಡಿಯುವ ವರ್ಗ ಸರ್ಕಾರದ ಸೌಲಭ್ಯ ಮತ್ತು ಹಕ್ಕುಗಳನ್ನು ಪಡೆದು ಅಭಿವೃದ್ಧಿ ಸಾಧಿಸಬೇಕು ಎಂದು ಕಾರ್ಮಿಕ ಮುಖಂಡ ಕಲ್ಯಾಣಿ ತುಕಾಣಿ ಹೇಳಿದರು.
ತಾಲೂಕಿನ ತಡಕಲ್ ಗ್ರಾಮದ ಎಐಟಿಯುಸಿ ಕಚೇರಿಯಲ್ಲಿ ಗುರುವಾರ ಏರ್ಪಡಿಸಿದ್ದ ವಿಶ್ವ ಕಾರ್ಮಿಕ ದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಹಕ್ಕನ್ನು ಪಡೆಯಿರಿ: 18ನೇ ಶತಮಾನದಲ್ಲಿ ಕಾರ್ಮಿಕರಿಗೆ ಹೊಟ್ಟೆ ತುಂಬ ಅನ್ನ, ಮೈ ತುಂಬ ಬಟ್ಟೆ ಕೊಡದೆ ದುಡಿಸಿಕೊಳ್ಳುತ್ತಿದ್ದರು. ಇಂಥ ಸ್ಥಿತಿಯಲ್ಲಿ ಕಾರ್ಮಿಕರೆಲ್ಲರೂ ಒಂದಾಗಿ ಹೋರಾಟ ಮಾಡಿದ ಫಲವಾಗಿ ಕಾರ್ಮಿಕ ಕಾಯ್ದೆ ಹಾಗೂ ಜಯ ದೊರೆತಿದೆ. ಕಾರ್ಮಿಕರು ತಮ್ಮ ಹಕ್ಕನ್ನು ಒಂದಾಗಿ ಪಡೆಯಬೇಕು. ಸರ್ಕಾರಗಳು ಕಾರ್ಮಿಕರಿಗಾಗಿ ಜಾರಿಗೊಳಿಸಿದ ವಿಮೆ, ಆಸ್ಪತ್ರೆ ಕಾರ್ಡ್ ಮತ್ತಿತರ ಸೌಲಭ್ಯಗಳನ್ನು ಪಡೆದುಕೊಂಡು ಸದೃಢಗೊಳ್ಳಬೇಕು ಎಂದು ಕರೆ ನೀಡಿದರು.
ಸಂಘಟನೆಯ ತಾಲೂಕು ಶ್ರೀಶೈಲ ಪಾಟೀಲ ಧ್ವಜಾರೋಹಣ ನೆರವೇರಿಸಿ, ದುಡಿಯುವ ಕಾರ್ಮಿಕರನ್ನು ಕೀಳೆಂದು ಭಾವಿಸದೆ ಅವರನ್ನು ಸರ್ಕಾರ ಮತ್ತು ಸಮಾಜ ಗೌರವದಿಂದ ಕಾಣುವಂತಾಗಬೇಕು. ದೇಶದಲ್ಲಿ ಏನೇ ಅಭಿವೃದ್ಧಿ ಆದರೂ, ಅದರಲ್ಲಿ ಕಾರ್ಮಿಕರ ಶ್ರಮ ಅಡಗಿದೆ ಎನ್ನುವುದು ಮುಖ್ಯವಾಗಿದೆ. ಇದನ್ನು ಮರೆಯಬಾರದು ಎಂದರು.
ನಿವೃತ್ತ ಮುಖ್ಯ ಶಿಕ್ಷಕ ಎಸ್.ಬಿ. ಪಾಟೀಲ ಮಾತನಾಡಿದರು. ಗುಂಡಯ್ಯ ಸ್ವಾಮಿ ಮುನ್ನಹಳ್ಳಿ, ದಯಾನಂದ ಸ್ವಾಮಿ ದಣ್ಣೂರ, ಶಿವಶರಣಯ್ಯಾ ಸ್ವಾಮಿ, ಮಲ್ಲಿನಾಥ ಚಿಚಕೋಟಿ, ಡಾ. ಪಿಂಟು, ಶಿಕ್ಷಕ ನೀಲಕಂಠ ಶಿರೂಳೆ, ರಾಚಯ್ಯಾ ಸ್ವಾಮಿ, ಸಾಯಬಣ್ಣಾ ಜಮಾದಾರ ಮತ್ತಿತರರ ಕಾರ್ಮಿಕರು ಭಾಗವಹಿಸಿದ್ದರು. ಗ್ರಾಮದ ಹಣಮಂತ ಗುಗರೆ ಕಾರ್ಯಕ್ರಮ ನಿರೂಪಿಸಿ, ದತ್ತಾತ್ರೆಯ ಕಬಾಡೆ ವಂದಿಸಿದರು.