ಅಗೌರವ: ಜೈಕರವೇ ಆಕ್ರೋಶ
ಅಫಜಲ್ಪುರ: ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಬಸವೇಶ್ವರರ ಜಯಂತಿ ಆಚರಿಸದೆ ಅಗೌರವ ತೋರಿದ್ದಾರೆ ಎಂದು ಜೈ ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕ ಅಧ್ಯಕ್ಷ ಸುರೇಶ ಅವಟೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಟ್ಟಣದಲ್ಲಿನ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಕಚೇರಿಗೆ ಭೇಟಿ ನೀಡಿದಾಗ ಬೀಗ ಹಾಕಲಾಗಿತ್ತು. ಅಲ್ಲದೆ ತಾಲೂಕು ಆಡಳಿತ ಕೂಡ ಪೂರ್ವಭಾವಿ ಸಭೆ ಮಾಡದೇ ಮನಸ್ಸಿಗೆ ಬಂದಂತೆ ಕಾಟಾಚಾರಕ್ಕೆ ಬಸವ ಜಯಂತಿ ಆಚರಣೆ ಮಾಡುತ್ತಿದೆ ಎಂದು ಅವರು ದೂರಿದ್ದಾರೆ. ಡಾ. ಬಾಬು ಜಗಜೀವನರಾಮ್, ಡಾ. ಅಂಬೇಡ್ಕರ್ ಸೇರಿದಂತೆ ಇತರೆ ಮಹಾಪುರುಷರ ಜಯಂತಿ ಹಾಗೂ ಶುಕ್ರವಾರ ನಡೆದ ಬಸವೇಶ್ವರರ ಜಯಂತಿ ಸಂದರ್ಭದಲ್ಲಿ ಕೆಲವೇ ಅಧಿಕಾರಿಗಳು ಭಾಗವಹಿಸಿದ್ದರೆಂದು ಆವಟೆ ಆರೋಪಿಸಿದ್ದಾರೆ. ಜಯಂತಿ ಆಚರಣೆ ಮಾಡದ ಹಾಗೂ ಗೈರುಹಾಜರಾದ ಅಧಿಕಾರಿಗಳ ವಿರುದ್ಧ ತಾಲೂಕು ಆಡಳಿತ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು.