ಮಡಿ, ಮೈಲಿಗೆ ಬಿಡಿ: ಬಿಆರ್ಪಿ
ಆಳಂದ: ಆಧುನಿಕ ಯುಗದಲ್ಲೂ ಕೂಡ ಜಾತಿ ವ್ಯವಸ್ಥೆ ಸಂಪೂರ್ಣವಾಗಿ ತೊಲಗಿಲ್ಲ. ಮಡಿ, ಮೈಲಿಗೆ, ಮೇಲು-ಕೀಳು ಎಂಬ ಭಾವನೆ ಅಲ್ಲಲ್ಲಿ ಜೀವಂತವಿದೆ. ಇದನ್ನು ಬೇರು ಸಹಿತ ಕಿತ್ತೆಸೆದು ಸುಂದರ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರಲೂ ಬಸವ ತತ್ವ ಅಗತ್ಯ ಎಂದು ಶಾಸಕ ಬಿ.ಆರ್. ಪಾಟೀಲ್ ಹೇಳಿದರು.
ತಾಲೂಕಿನ ಮಾಡಿಯಾಳ ಗ್ರಾಮ ಒಪ್ಪತ್ತೇಶ್ವರ ಮಠದಲ್ಲಿ ಬಸವ ಜಯಂತಿ ಮತ್ತು ಒಪ್ಪತ್ತೇಶ್ವರರ 36ನೇ ಸ್ಮಾರಕೋತ್ಸವದ ನಿಮಿತ್ತ ಏರ್ಪಡಿಸಿದ್ದ ಬಸವ ಪುರಾಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಾಕಷ್ಟು ಜನ ತಮಗೆ ವಾಸಿಸಲು ಮನೆ ಇಲ್ಲದಿದ್ದರೂ ಬಸವ ತತ್ವಕ್ಕೆ ವಿರುದ್ಧವಾಗಿ ಗುಡಿ ಗುಂಡಾರಗಳು ನಿರ್ಮಿಸುವುದು ಸಾಮಾನ್ಯವಾಗಿ ನಡೆಯುತ್ತಿದೆ. ಬಸವಣ್ಣನವರು 'ಕಾಯಕವೇ ಕೈಲಾಸ' ಎಂದು ಹೇಳಿದರು. ಆದರೆ, ಜನರು ದುಂದುವೆಚ್ಚ ಮಾಡಿ ಆ ದೇವರು ಈ ದೇವರು ಎಂದು ಅಲೆದಾಡಿ ಹಾಳಾಗುತ್ತಿರುವುದು ಕಳವಳಕಾರಿ ಸಂಗತಿ. ಯಾವುದೇ ದೇವರನ್ನು ನಂಬಿ. ಪ್ರಮಾಣಿಕ ಜೀವನ ನಡೆಸಲು ಮುಂದಾಗಬೇಕು ಎಂದರು.
ಒಪ್ಪತ್ತೇಶ್ವರ ಮಠದ ಪೀಠಾಧಿಪತಿ ಮರಳಸಿದ್ದ ಸ್ವಾಮಿಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಜಿಪಂ ಸದಸ್ಯ ಸಿದ್ದರಾಮ ಪ್ಯಾಟಿ ಮಾತನಾಡಿದರು. ವಿಠ್ಠಲರಾವ ಪಾಟೀಲ್, ಮಲ್ಲೇಶಪ್ಪ ಬಿರಾದಾರ, ಮೋಹನಗೌಡ ಪಾಟೀಲ್, ಮಾಜಿ ಗ್ರಾಪಂ ಅಧ್ಯಕ್ಷ ಸಂಗಣ್ಣ ಮುದ್ದಡಗಿ, ರೇವಣಸಿದ್ದಪ್ಪ ಶ್ರೀಗಣಿ, ಗ್ರಾಪಂ ಉಪಾಧ್ಯಕ್ಷ ಬಸವರಾಜ ದೇನೆಕಿ, ಸದಸ್ಯರಾದ ಶ್ರೀಶೈಲ ಕಲಶೆಟ್ಟಿ, ಹಣಮಂತ ನಡಗೇರಿ, ರಮೇಶ ಕಲಶೆಟ್ಟಿ ಮುಖಂಡ ಭೀಮಾಶಂಕರ ಖೊಂಬಿನ, ಸಂಗಮನಾಥ ಉಪ್ಪಿನ, ಸಿದ್ದರಾಮ ಬೆಣಿಶಿರೂರ, ಹಣಮಂತ ಶ್ರೀಗಣಿ, ಶರಣು ಬೆಳಮಗಿ ಸೇರಿದಂತೆ ಮುಖಂಡರು ಪಾಲ್ಗೊಂಡಿದ್ದರು.