ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಅಕ್ರಮ ಮರಳು ಸಾಗಣೆಯಾದ್ರೆ ಜೋಕೆ!

Rashmi Kasaragodu
Updated On : 4 May 2014, 2:52 am

ಕನ್ನಡಪ್ರಭ ವಾರ್ತೆ  ಯಾದಗಿರಿ  ಮೇ 3
ಜಿಲ್ಲೆಯ ಶಹಾಪುರ ಹಾಗೂ ಸುರಪುರ ತಾಲೂಕುಗಳಲ್ಲಿ ಅಕ್ರಮ ಮರಳು ಸಾಗಣೆ ನಿಯಂತ್ರಣಕ್ಕೆ ಚೆಕ್‌ಪೋಸ್ಟ್‌ಗಳನ್ನು ರಚಿಸಿದ್ದು, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ್  ಅಧಿಕಾರಿಗಳಿಗೆ ಎಚ್ಚರಿಸಿದರು.
  ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಸಭೆಯಲ್ಲಿ ಮಾತನಾಡಿ, ಕೆಬಿಜೆಎನ್ನೆಲ್ ಇಲಾಖೆಗೆ ಜಿಲ್ಲಾಡಳಿತದಿಂದ ನಿಗದಿಪಡಿಸಿದ ಮರಳಿನ ಬ್ಲಾಕ್‌ಗಳಿಂದ ಮಾತ್ರ ಸಾಗಣೆ ಮಾಡಲು ಮತ್ತು ಇನ್ನಿತರೆ ಯಾವುದೇ ತರಹ ಗುತ್ತಿಗೆದಾರರನ್ನು ನೇಮಕ ಮಾಡದಂತೆ ಇಲಾಖೆಯ ಮುಖ್ಯ ಎಂಜಿನಿಯರುಗಳಿಗೆ ಸೂಚನೆ ನೀಡಿದರು.
ಅಕ್ರಮ ಮರಳು ಖರೀದಿಸಬೇಡಿ: ಪದೇ ಪದೆ ಮರಳು ಅಕ್ರಮ ಸಾಗಣೆಯಲ್ಲಿ ತೊಡಗಿದ್ದ ವಾಹನಗಳನ್ನು ಕಪ್ಪು ಪಟ್ಟಿಗೆ ಸೇರಿಸಿ ಅವುಗಳ ಪರವಾನಗಿ ರದ್ದುಪಡಿಸಬೇಕು. ಬೆ.6ರಿಂದ ಸಂಜೆ 6ರವರೆಗೆ ಮಾತ್ರ ಸಾದಾ ಮರಳು ಸಾಗಣೆಗೆ ಅನುಮತಿ ನೀಡಲಾಗಿದೆ. ಯಾವುದೇ ತರಹದ ಲಾರಿ, ಟ್ರ್ಯಾಕ್ಟರ್ ಅಥವಾ ಇನ್ನಿತರ  ವಾಹನಗಳಲ್ಲಿ ಅಕ್ರಮವಾಗಿ ತಂದಿರುವ ಮರಳನ್ನು ಕೆಬಿಜೆಎನ್ನೆಲ್ ಇಲಾಖೆಯವರು ಖರೀದಿ ಮಾಡದಿರಲು ತಿಳಿಸಿದರು.
  ಪ್ರಾಜೆಕ್ಟ್‌ಗಾಗಿ ಬೇಕಾಗುವಷ್ಟು ಮರಳು ಜಿಲ್ಲೆಯಲ್ಲಿದ್ದು, ಇನ್ನೂ ಅಗತ್ಯ ಬಿದ್ದರೆ ಒದಗಿಸಲಾಗುವುದು. ಸಂಜೆ 6ರ ನಂತರ ಯಾವುದೇ ವಾಹನಗಳು ಮರಳು ತುಂಬಿ ಸಂಚರಿಸಿದಲ್ಲಿ ಸಂಬಂಧಪಟ್ಟ ಪೊಲೀಸ್, ಕಂದಾಯ, ಲೋಕೋಪಯೋಗಿ ಇಲಾಖೆಯವರು ಕಾನೂನು ಕ್ರಮ ಜರುಗಿಸಬೇಕು. ಕೆಬಿಜೆಎನ್ನೆಲ್ ಇಲಾಖೆಯವರು ಮರಳು ಸರಬರಾಜು ಮಾಡುವ ವಾಹನಗಳಿಗೆ ಜಿಪಿಎಸ್ ಯಂತ್ರ ಅಳವಡಿಸಿರುವ ವಾಹನಗಳ ವಿವರ, ವಾಹನ ಚಾಲಕರ ಹೆಸರನ್ನು ಕಡ್ಡಾಯವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮತ್ತು ಲೋಕೋಪಯೋಗಿ ಇಲಾಖೆಗೆ ವಿವರಗಳನ್ನು ಸಲ್ಲಿಸತಕ್ಕದ್ದು, ದಿನಪತ್ರಿಕೆಗಳಲ್ಲಿಯೂ ಪ್ರಕಟಿಸಲು ಸೂಚಿಸಿದರು.
ವಾಹನಗಳ ವಿವರ ಕಡ್ಡಾಯ: ಶಹಾಪುರ ತಾಲೂಕಿನಲ್ಲಿ ಕೊಳ್ಳೂರು, ಗೌಡೂರು, ಯಕ್ಷಂತಿ ಮತ್ತು ಸುರಪುರ ತಾಲೂಕಿನ ಸುಗೂರು, ಚೌಡೇಶ್ವರಹಾಳ ನದಿ ಪಾತ್ರದ ಹತ್ತಿರ ನಿರ್ಮಿಸಲಾಗಿರುವ ಚೆಕ್‌ಪೋಸ್ಟ್ ಸಿಬ್ಬಂದಿಗೂ ಸದರಿ ವಾಹನಗಳ ವಿವರಗಳನ್ನು ಒದಗಿಸುವಂತೆ ಕೆಬಿಜೆಎನ್ನೆಲ್ ಇಲಾಖೆಯವರೆಗೆ ಸೂಚಿಸಿದರು.
ಚೆಕ್‌ಪೋಸ್ಟ್ ಸ್ಥಾಪಿಸಲು ಸೂಚನೆ: ಶಹಾಪುರ ತಾಲೂಕಿನ ವಿಭೂತಿಹಳ್ಳಿ ಕ್ರಾಸ್, ಖಾನಾಪುರ ಕ್ರಾಸ್ ಮತ್ತು ದೇವದುರ್ಗ ಕ್ರಾಸ್, ಅದೇ ರೀತಿ ಸುರಪುರ ತಾಲೂಕಿನ ಬಂಡೋಳಿ(ತಿಂಥಣಿ ಬ್ರಿಡ್ಜ್ ದೇವಾಪುರ ಕ್ರಾಸ್) ಕುಂಭಾರಪೇಟೆ, ಹಾಸನಪುರಗಳಲ್ಲಿ ಚೆಕ್‌ಪೋಸ್ಟ್ ನಿರ್ಮಿಸಲು ಸೂಚಿಸಿದರು. ಈ ಎಲ್ಲ ಚೆಕ್‌ಪೋಸ್ಟ್‌ಗಳಲ್ಲಿ 3 ಶಿಫ್ಟ್‌ಗಳಲ್ಲಿ ಕಂದಾಯ, ಪೋಲಿಸ್, ಲೋಕೋಪಯೋಗಿ, ಅರಣ್ಯ ಇಲಾಖೆಗಳ ಸಿಬ್ಬಂದಿ ಕಟ್ಟುನಿಟ್ಟಾಗಿ ಕ್ರಮ ವಹಿಸಲು ಎಚ್ಚರಿಸಿದರು.
  ಮರಳಿನ ಬ್ಲಾಕ್‌ಗಳನ್ನು ಕೆಬಿಜೆಎನ್ನೆಲ್ ಮುಖ್ಯ ಅಭಿಯಂತರರ ವಶಕ್ಕೆ ಕೊಟ್ಟಿರುವುದರಿಂದ ಇವುಗಳ ರಕ್ಷಣೆ ಹಾಗೂ ಅಕ್ರಮ ಸಾಗಣಿಕೆ ತಡೆಗಟ್ಟುವ ಜವಾಬ್ದಾರಿಯಾಗಿರುತ್ತದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು. ಎಸ್ಪಿ ವಂಶಿಕೃಷ್ಣ, ಕೆಬಿಜೆಎನ್ನೆಲ್ ಮುಖ್ಯ ಎಂಜಿನಿಯರ್ ಪ್ರಮೋದ್‌ರೆಡ್ಡಿ, ಕ್ಷೇತ್ರಪಾಲ್, ಕಾರ್ಯನಿರ್ವಾಹಕ ಎಂಜಿನಿಯರ್ ನಾಟೇಕರ, ಸಾರಿಗೆ ಅಧಿಕಾರಿ ಆರ್.ಮಲ್ಲಿಕಾರ್ಜುನ, ಪರಿಸರ ಅಧಿಕಾರಿಗಳು, ಅರಣ್ಯ, ಗಣಿ ಇಲಾಖೆ ಅಧಿಕಾರಿಗಳು, ತಹಸೀಲ್ದಾರರು ಉಪಸ್ಥಿತರಿದ್ದರು.



ಜಲಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಆದೇಶದಂತೆ ಕೆಬಿಜೆಎನ್ನೆಲ್ ಕಾಲುವೆ ಆದುನೀಕರಣ ಹಾಗೂ ಸಾಮರ್ಥ್ಯ ಹೆಚ್ಚಿಸುವ ಯೋಜನೆಯ ಭಾಗಶಃ ಮೊತ್ತ 3,670 ಕೋಟಿಯಾಗಿದ್ದು, ಮುಂಗಾರಿಗೆ ಮುನ್ನ ಕಾಮಗಾರಿ ಮುಗಿಸಲು ಅಗತ್ಯವಿರುವ ಮರಳು ಒದಗಿಸಲು ಜಿಲ್ಲಾಡಳಿತಕ್ಕೆ ಕೋರಲಾಗಿತ್ತು. ಅದರನ್ವಯ ಏ.10ರಂದು ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಸಭೆ ನಡೆಸಿ ಸಾರ್ವಜನಿಕ ಹಿತದೃಷ್ಟಿಯಿಂದ ಉದ್ದೇಶಿತ ಕಾಮಗಾರಿಗಳಿಗೆ ಮಾತ್ರ ಶಹಾಪುರ ಮತ್ತು ಸುರಪುರ ತಾಲೂಕಿನಲ್ಲಿ 6 ಮರಳು ನಿಕ್ಷೇಪ ಬ್ಲಾಕ್‌ಗಳಿಂದ ಮರಳು ಎತ್ತುವಳಿ ಮಾಡಿ ಸಾಗಾಣಿಕೆ ಮಾಡಲು ಮುಖ್ಯ ಎಂಜಿನಿಯರರು ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ ನಾರಾಯಣಪುರ ಮತ್ತು ಭೀ.ಗುಡಿಗೆ ಪರವಾನಗಿ ನೀಡಿತ್ತು. ಆದರೆ ಸದರಿ ಮರಳು ಸಾಗಣೆಯಲ್ಲಿ ಅಕ್ರಮ ಜರುಗುತ್ತಿರುವ ಬಗ್ಗೆ 'ಕನ್ನಡಪ್ರಭ' ಮೇ 2ರಂದು 'ಅಕ್ರಮ ಮರಳು ಸಾಗಣೆ ತಡೆ ಎಂದು?' ಎಂಬ ಶೀರ್ಷಿಕೆಯಲ್ಲಿ ವರದಿ ಪ್ರಕಟಿಸಿದ ಹಿನ್ನೆಲೆಯಲ್ಲಿ ಮೇ 3ರಂದು ಜಿಲ್ಲಾಡಳಿತ ಸಭೆ ನಡೆಸಿದೆ ಎಂದು ಡಿಸಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement