ಜೋಡಿ ಎತ್ತುಗಳ ಮೆರವಣಿಗೆ
ಹುಣಸಗಿ: ಕಾಲಜ್ಞಾನಿ ಬಸವೇಶ್ವರರ ಕ್ಷೇತ್ರವಾದ ಕೊಡೆಕಲ್‌ನಲ್ಲಿ ಅದ್ಧೂರಿಯಾಗಿ ಬಸವ ಜಯಂತಿ ಆಚರಿಸಲಾಯಿತು. ಬಸವೇಶ್ವರರ ಭಾವಚಿತ್ರ ಸಹಿತ 101 ಜೋಡು ಎತ್ತುಗಳ ಮೆರವಣಿಗೆ ಮಾಡುವುದರ ಮೂಲಕ ಜಯಂತಿಯನ್ನು ಆಚರಿಸಲಾಯಿತು. ಬಸವಣ್ಣನವರ ಐಕ್ಯಸ್ಥಳ ಊರೊಳಗಿನ ಗುಡಿಯಿಂದ ಪ್ರಾರಂಭವಾದ 101 ಜೋಡೆತ್ತುಗಳ ಮೆರವಣಿಗೆಗೆ ಮಹಲಿನಮಠದ ಬಸವ ಪೀಠಾಧಿಪತಿ ವೀರಯ್ಯ ಅಪ್ಪ ಚಾಲನೆ ನೀಡಿದರು. ಅಲಂಕೃತಗೊಂಡ ಎತ್ತಿನ ಬಂಡಿಯಲ್ಲಿ ಬಸವೇಶ್ವರರ ಭಾವಚಿತ್ರವಿಟ್ಟು ಬಾಜಾ ಭಜಂತ್ರಿಯೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಗ್ರಾಮದ ರೈತಾಪಿ ಕುಟುಂಬಗಳ ಎತ್ತುಗಳ ಜತೆಗೆ ರೈತರು ಪಾಲ್ಗೊಂಡು ಮೆರವಣಿಗೆಯ ಮೆರುಗನ್ನು ಹೆಚ್ಚಿಸಿದರು. ಬಿರು ಬಿಸಿಲನ್ನು ಲೆಕ್ಕಿಸದೆ, ಜೋಡೆತ್ತುಗಳ ಮೆರವಣಿಗೆ ಸುಮಾರು ಐದು ಗಂಟೆಗಳವರೆಗೂ ಸಾಗಿ ಪ್ಯಾಟಿ ಬಸವೇಶ್ವರ ಮಂದಿರದ ಬಸವಣ್ಣನವರು ಕಾಲಜ್ಞಾನ ಬರೆದ ಸ್ಥಳಕ್ಕೆ ಆಗಮಿಸಿ ಸಮಾಪ್ತಿಗೊಂಡಿತು. ಗ್ರಾಮದ ರಾಜಾ ಜಿತೇಂದ್ರನಾಯಕ ಜಹಗೀರದಾರ, ರಾಜಾ ವೆಂಕಟಪ್ಪನಾಯಕ ಜಹಾಗೀರದಾರ, ಸಂಗನಬಸಯ್ಯ ಬದ್ರಗೋಳ, ವೀರಸಂಗಯ್ಯ ಮಹಲಿನಮಠ ಸೇರಿದಂತೆ ಅಲೇಕ ರೈತರು ಪಾಲ್ಗೊಂಡಿದ್ದರು.
ಮುಗ್ಟಾದಲ್ಲಿ ಮಣ್ಣು ಮಾದರಿ ಸಂಗ್ರಹ ಆಂದೋಲನ
ಚಿತ್ತಾಪುರ: ತಾಲೂಕಿನ ಮುಗ್ಟಾ ಗ್ರಾಮದಲ್ಲಿ ಮಾಡಬೂಳ ರೈತ ಸಂಪರ್ಕ ಕೇಂದ್ರದ ವತಿಯಿಂದ ಮಣ್ಣು ಮಾದರಿ ಸಂಗ್ರಹಣಾ ಆಂದೋಲನ ಕಾರ್ಯಕ್ರಮ ಜರುಗಿತು. ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿಕಾರಿ ಅಬ್ದುಲ್ ಕರೀಂ ಹಾಗೂ ಹೈದ್ರಾಬಾದ ಇಕ್ರಿಸೇಟ್ ಸಂಸ್ಥೆಯ ಅಧಿಕಾರಿಗಳಾದ ಗೌಸೋದ್ದಿನ ಪಟೇಲ್ ಅವರು ಜಿಪಿಎಸ್ ಯಂತ್ರ ಬಳಸಿ ಮಣ್ಣು ಮಾದರಿ ಸಂಗ್ರಹದ ವಿಧಾನವನ್ನು ಪ್ರಾಯೋಗಿಕವಾಗಿ ರೈತರಿಗೆ ತೋರಿಸಿಕೊಟ್ಟರು. ಮಣ್ಣು ಮಾದರಿಗಳನ್ನು ತೆಗೆಯುವುದರಿಂದ ಮಣ್ಣಿನಲ್ಲಿರುವ ಪೋಷಾಕಾಂಶಗಳ ಕೊರತೆ ನಿಖರವಾಗಿ ತಿಳಿದುಕೊಳ್ಳಲು ಸಾಧ್ಯ. ಇದರಿಂದ ಮಣ್ಣಿಗೆ ಬೇಕಾಗುವ ಪೋಷಾಕಾಂಶಗಳನ್ನು ಉಪಯೋಗಿಸಲು ರೈತರಿಗೆ ಸಾಧ್ಯವಾಗುತ್ತದೆ. ಅದಕ್ಕಾಗಿ ಎಲ್ಲ ರೈತರು ಕಡ್ಡಾಯವಾಗಿ ಮಣ್ಣಿನ ಮಾದರಿ ತೆಗೆದು ಪರೀಕ್ಷಿಸಿಕೊಳ್ಳಬೇಕು ಎಂದು ಪಟೇಲ್ ಸಲಹೆ ನೀಡಿದರು.