ಬಳಿಚಕ್ರ ಗ್ರಾಪಂ ಅಧ್ಯಕ್ಷರ ಆಯ್ಕೆ
ಯಾದಗಿರಿ: ತಾಲೂಕಿನ ಬಳಿಚಕ್ರ ಗ್ರಾಪಂನ 2ನೇ ಅವಧಿಯ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯೆ ನಿಂಗಮ್ಮ, ಶಂಕ್ರಪ್ಪ ಬೋಳಿ ಅವಿರೋಧವಾಗಿ ಆಯ್ಕೆಯಾದರು. ಒಟ್ಟು 15 ಸದಸ್ಯ ಬಲದ ಬಳಿಚಕ್ರ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ನೂತನ ಅಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಬಿಜೆಪಿ ಯುವ ಮುಖಂಡ ಮಹೇಶ ರಡ್ಡಿ ಮುದ್ನಾಳ, ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಮೂಲ ಸೌಕರ್ಯ ಒದಗಿಸಲು ಅಧ್ಯಕ್ಷ ಮತ್ತು ಸದಸ್ಯರು ಮುಂದಾಗಬೇಕು. ಗ್ರಾಮೀಣ ಭಾಗಕ್ಕೆ ಸರ್ಕಾರದ ಯೋಜನೆಗಳನ್ನು ತಲುಪಿಸಲು ಗ್ರಾಪಂ ಅಧ್ಯಕ್ಷರ ಮತ್ತು ಸದಸ್ಯರ ಪಾತ್ರ ಅತ್ಯಂತ ಪ್ರಮುಖ ಎಂದರು. ಈ ಸಂದರ್ಭದಲ್ಲಿ ಮುಖಂಡರಾದ ಶರಣಗೌಡ ಬಾಡಿಯಾಳ, ದೊಡ್ಡಯ್ಯಾ, ಸಕ್ರೆಪ್ಪಗೌಡ, ಭೀಮರಾಯ, ಬಸಲಿಂಗಮ್ಮ ಸೇರಿದಂತೆ ಇತರರು ಇದ್ದರು.
ವಚನ ಸಾಹಿತ್ಯ ನಿತ್ಯ ನೂತನ: ಗುಳಬಾಳ ಶ್ರೀ
ಹುಣಸಗಿ: 12ನೇ ಶತಮಾನದಲ್ಲಿ ಬಸವಣ್ಣ ಮತ್ತು ಇತರ ಶರಣರು ನಾಡಿಗೆ ನೀಡಿದ ವಚನ ಸಾಹಿತ್ಯ ಸರ್ವಜನಾಂಗಕ್ಕೂ ಸ್ಫೂರ್ತಿಯ ಸೆಲೆಯಾಗಿದೆ. ವಚನಸಾಹಿತ್ಯ ವಿಶಿಷ್ಟ ಮತ್ತು ಸರಳ ಸಾಹಿತ್ಯವಾಗಿದ್ದು ಜನ ಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುವಂತಹದ್ದಾಗಿದೆ. ಈ ಸಾಹಿತ್ಯ ಬದುಕುವ ಕಲೆಯನ್ನು ಕಲಿಸುವುದೆಂದು ಗುಳಬಾಳ ರಾಮಲಿಂಗೇಶ್ವರ ಆನಂದಾಶ್ರಮದ ಮರಿಹುಚ್ಚೇಶ್ವರ ಸ್ವಾಮೀಜಿ ಹೇಳಿದ್ದಾರೆ. ಹುಣಸಗಿ ಸಮೀಪದ ಮಾಳನೂರ ಗ್ರಾಮದಲ್ಲಿ ಬಸವ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಬಸವೇಶ್ವರ ವೃತ್ತ ಉದ್ಘಾಟನೆ ಹಾಗೂ ಬಸವ ಜಯಂತಿ ಉತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ವಿಶ್ವದ ಶ್ರೇಷ್ಠ ಶರಣ: ತಾಲೂಕು ವೀರಶೈವ ಯುವ ವೇದಿಕೆಯ ಅಧ್ಯಕ್ಷ ಪ್ರಕಾಶ ಅಂಗಡಿ ಮಾತನಾಡಿ, ಜನವಾಣಿಯಲ್ಲಿಯೇ ವಚನಸಾಹಿತ್ಯ ರಚಿಸಿ ಜಾತಿಭೇದ, ಲಿಂಗಬೇಧಗಳನ್ನು ದೂರ ಸರಿಸಿ ವಿಶ್ವವನ್ನೇ ಕಲ್ಯಾಣ ರಾಜ್ಯವನ್ನಾಗಿ ನಿರ್ಮಿಸಿದ ಮಹಾನ್ ಮಾನವತಾವಾದಿ ಬಸವಣ್ಣ ವಿಶ್ವದಲ್ಲಿಯೇ ಶ್ರೇಷ್ಠ ಶರಣ ಎಂದರು. ವೀರಶೈವ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಸಂಗನಗೌಡ ಪಾಟೀಲ್ ವಜ್ಜಲ ಮಾತನಾಡಿ ಯುವಜನಾಂಗ ಬಸವಾದಿ ಶರಣರ ಚರಿತ್ರೆಗಳನ್ನು ಅಧ್ಯಯನ ಮಾಡಬೇಕು ಹಾಗೂ ದುಶ್ಚಟಗಳಿಂದ ದೂರವಿರಲು ಸಲಹೆ ನೀಡಿದರು.