ಬಸವ ಜಯಂತಿ: ಜಿಲ್ಲಾಡಳಿತದ ವಿರುದ್ಧ ಕಿಡಿ
ಕನ್ನಡಪ್ರಭ ವಾರ್ತೆ ಯಾದಗಿರಿ ಮೇ 3 ಸಮಾನತೆಯನ್ನು ಸಾರಿದ ಬಸವಣ್ಣನವರ ಜಯಂತಿಯನ್ನು ಜಿಲ್ಲಾಡಳಿತ ಆಚರಿಸದಿರುವ ಬಗ್ಗೆ ಜಿಲ್ಲೆಯಲ್ಲಿ ಬಹಳಷ್ಟು ವಿರೋಧ ವ್ಯಕ್ತವಾಗಿದೆ.
ಸಮಾಜಕ್ಕೆ ತಮ್ಮ ಚಿಂತನೆಗಳಿಂದ ಉತ್ತಮವಾದ ಸಂದೇಶ ನೀಡಿದ ಮಹಾನ್ ಸಾಧಕರ ಜಯಂತಿ ಆಚರಣೆಯನ್ನು ಮಾಡುವುದು ಸರ್ಕಾರದ ಮತ್ತು ಸ್ಥಳೀಯ ಜಿಲ್ಲಾಡಳಿತದ ಕರ್ತವ್ಯವಾಗಿದೆ. ಅಂತೆಯೇ ಹಲವು ಶರಣರ ಮತ್ತು ದಾರ್ಶನಿಕರ ಜಯಂತಿ ಆಚರಣೆ ಸರ್ಕಾರದ ಮಟ್ಟದಲ್ಲಿಯೇ ಆಚರಿಸಿ ವರ್ಷದ ಒಂದು ದಿನ ಅವರ ಸಾಧನೆಗಳನ್ನು ಮೆಲಕು ಹಾಕುವಂತಹ ಕರ್ತವ್ಯ ಸರ್ಕಾರದ್ದಾಗಿದೆ. ಆದರೆ ಈ ಬಾರಿ ಅದನ್ನು ಮಾಡದ ಜಿಲ್ಲಾಡಳಿತದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಪಮಾನ ಮಾಡಿದೆ: ಯಾದಗಿರಿ ಜಿಲ್ಲಾಡಳಿತ ಈ ಬಾರಿ ಯಾವೊಬ್ಬ ನಾಯಕನ ಜಯಂತಿಯನ್ನು ಆಚರಿಸದೆ ಅಪಮಾನ ಮಾಡಿದ್ದು, ಸಾರ್ವಜನಿಕರ ಟೀಕೆಗಳಿಗೆ ಗುರಿಯಾಗುತ್ತಿರುವುದು ಸುಳ್ಳಲ್ಲ. ಕೇವಲ ಕಾಟಾಚಾರಕ್ಕೆಂಬಂತೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಹಾತ್ಮರ ಫೋಟೊಗೆ ಮಾಲಾರ್ಪಣೆ ಮಾಡಿ ಕೈತೊಳೆದುಕೊಳ್ಳುತ್ತಿರುವ ಜಿಲ್ಲಾಧಿಕಾರಿಗಳ ನಡೆ ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ ಎಂದು ಜನರು ಹೇಳಿದ್ದಾರೆ.
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸ್ಥಳೀಯ ಜಿಲ್ಲಾಡಳಿತದ ವತಿಯಿಂದ ಶನಿವಾರ ವಿಶ್ವಗುರು ಬಸವಣ್ಣನವರ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಗಿದೆ.
ಬೇಸರ ಉಂಟುಮಾಡಿದೆ: ನೆರೆಯ ಜಿಲ್ಲೆಗಳಾದ ಗುಲ್ಬರ್ಗ, ಬೀದರ್, ರಾಯಚೂರಿನಲ್ಲಿ ಜಿಲ್ಲಾಡಳಿತದ ವತಿಯಿಂದಲೇ ಬಸವ ಜಯಂತಿ ಆಚರಣೆ ಮಾಡಲಾಗಿದೆ. ಆದರೆ ಈ ಬಾರಿ ಜಿಲ್ಲೆಯಲ್ಲಿ ಸರಳವಾಗಿ ಆಚರಣೆ ಮಾಡುವ ಮೂಲಕ ಬಸವ ಅಭಿಮಾನಿಗಳಿಗೆ ಬೇಸರ ಉಂಟುಮಾಡಿದೆ ಎಂದು ಡಾ. ವಾರದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ
ಯಾದಗಿರಿಯ ಜಿಲ್ಲಾಡಳಿತ ಮಾತ್ರ ಈ ಮಹಾನ್ ಸಾಧಕನ ಜಯಂತಿಯನ್ನು ಮರೆತು ಮೌನಕ್ಕೆ ಶರಣಾಗಿದೆ. ಅಲ್ಲದೆ ಇತ್ತೀಚೆಗೆ ಏ. 5ಕ್ಕೆ ಡಾ.ಬಾಬು ಜಗಜೀವನ್‌ರಾಮ್, ಏ. 14 ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಜಯಂತಿಗಳನ್ನು, ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ ಸರಳವಾಗಿ ಆಚರಿಸಲಾಗಿತ್ತು. ಆದರೆ ಈಗ ಯಾವ ಚುನಾವಣೆ ಹಾಗೂ ನೀತಿ ಸಂಹಿತೆಯೂ ಇಲ್ಲ. ಆದ್ದರಿಂದ ಜಿಲ್ಲಾಡಳಿತದ ಈ ಕ್ರಮ ಸಾರ್ವಜನಿಕರ ವಲಯದಲ್ಲಿ ಟೀಕೆಗೆ ಗುರಿಯಾಗಿದೆ.
ಕಾರಣ ಕೇಳಿ ನೋಟಿಸ್: ಬಸವ ಜಯಂತಿ ಆಚರಣೆ ಮಾಡದಿರುವ ಬಗ್ಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಕಾರಣ ಕೇಳಿ ನೋಟಿಸ್ ಜಾರಿಮಾಡಲಾಗಿದೆ.
ಮೆರವಣಿಗೆ ಮಧ್ಯದಲ್ಲಿ ಜಿಲ್ಲಾಡಳಿತ ವಿರುದ್ಧ ಘೋಷಣೆ: ಶುಕ್ರವಾರ ಸಂಜೆ ನಗರದ ಗಾಂಧಿಚೌಕ್‌ನಿಂದ ಬಸವೇಶ್ವರರ ಭಾವಚಿತ್ರದ ಮೆರವಣಿಗೆಯಲ್ಲಿ ವೀರಶೈವ ಸಮಾಜದ ಯುವ ಮುಖಂಡರುಗಳು ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿದ ಘಟನೆ ನಡೆದಿದೆ.
ಒಟ್ಟಾರೆಯಾಗಿ ದಿನದಿಂದ ದಿನಕ್ಕೆ ಪುಟ್ಟ ಜಿಲ್ಲೆಯ ಆಡಳಿತದ ಉಸ್ತುವಾರಿ ಹೊತ್ತ ಜಿಲ್ಲಾಡಳಿತದ ನಡೆ ಹಲವು ಅನುಮಾನಗಳಿಗೆ ಕಾರಣವಾಗುತ್ತಿದ್ದು, ಇದಕ್ಕೆ ಜಿಲ್ಲಾಡಳಿತ ಜನತೆಗೆ ಸ್ಪಷ್ಟನೆ ನೀಡಬೇಕಾಗಿದೆ.
ಬಸವಣ್ಣನವರ ಬಗ್ಗೆ ಗೌರವವಿದೆ
ಬಸವಣ್ಣನವರ ಬಗ್ಗೆ ನನಗೆ ಅಪಾರವಾದ ಗೌರವವಿದೆ. ಆದರೆ ಜಿಲ್ಲೆಯ 2 ಮತಗಟ್ಟೆಗಳಲ್ಲಿ ಮರು ಮತದಾನವಿದ್ದ ಕಾರಣ ನೀತಿ ಸಂಹಿತೆ ಜಾರಿಯಲ್ಲಿತ್ತು. ಇದರಿಂದ ನಮಗೆ ಪೂರ್ವಭಾವಿ ಸಭೆ ನಡೆಸಲು ಸಾಧ್ಯವಾಗಲಿಲ್ಲ. ಹೀಗಾಗಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಅಲ್ಲದೆ ಸಮಾಜದ ಒಬ್ಬ ಮುಖಂಡರೂ ಜಯಂತಿ ಆಚರಣೆಯ ಬಗ್ಗೆ ನಮಗೆ ಮಾತನಾಡಿಸಿಲ್ಲ. ಎಲ್ಲವನ್ನು ಜಿಲ್ಲಾಡಳಿತವೇ ಮಾಡಬೇಕು ಎಂಬ ಭ್ರಮೆಯಿಂದ ಜನತೆ ಹೊರಬರಬೇಕಿದೆ. ಆಯಾ ಕೆಲಸಗಳಿಗಾಗಿಯೇ ಆಯಾ ಇಲಾಖೆಗಳು ನಮ್ಮಲ್ಲಿವೆ. ಈ ಬಗ್ಗೆ ಬೇರೆ ಬಣ್ಣ ಬಳಿಯುತ್ತಿರುವದರಿಂದ ಮನಸ್ಸಿಗೆ ನೋವಾಗಿದೆ.
ಚ ಎಫ್.ಆರ್. ಜಮಾದಾರ್
ಜಿಲ್ಲಾಧಿಕಾರಿ ಯಾದಗಿರಿ