ವೀರಶೈವರ ಧಿಕ್ಕಾರ!
ಕನ್ನಡಪ್ರಭ ವಾರ್ತೆ, ಯಾದಗಿರಿ, ಮೇ 3
ಬಸವ ಜಯಂತ್ಯುತ್ಸವ ಆಚರಿಸದ ಹಿನ್ನೆಲೆ ವೀರಶೈವ ಸಮಾಜದ ಯುವ ಮುಖಂಡರು ಜಿಲ್ಲಾಡಳಿತ ವಿರುದ್ಧ ಧಿಕ್ಕಾರ ಹಾಕಿದ ಘಟನೆ ಶುಕ್ರವಾರ ಸಂಜೆ ನಗರದಲ್ಲಿ ನಡೆದಿದೆ.
ಬಸವ ಜಯಂತಿ ನಿಮಿತ್ತ ವೀರಶೈವ ಸಮಾಜದ ವತಿಯಿಂದ ನಗರದಲ್ಲಿ ಶುಕ್ರವಾರ ನಡೆದ ಬಸವೇಶ್ವರ ಭಾವಚಿತ್ರ ಮೆರವಣಿಗೆ ವೇಳೆ ಮಾತನಾಡಿದ ಸಮಾಜದ ಮುಖಂಡರು, ಜಿಲ್ಲಾಡಳಿತ ಉದ್ದೇಶ ಪೂರ್ವಕವಾಗಿಯೇ ಬಸವೇಶ್ವರ ಜಯಂತ್ಯುತ್ಸವವನ್ನು ಸಾರ್ವಜನಿಕವಾಗಿ ಆಚರಿಸುವುದನ್ನು ಕೈಬಿಟ್ಟಿದೆ. ಹೀಗಾಗಿ ನಮಗೆ ಅಪಮಾನ ಮಾಡಿದೆ. ರಾಜ್ಯ ಸರ್ಕಾರ ಜಿಲ್ಲಾಡಳಿತದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಸರಿಯಲ್ಲ: ಜಗತ್ತಿಗೆ ಸಮಾನತೆ ತತ್ವಸಾರಿದ ಬಸವೇಶ್ವರರ ಜಯಂತ್ಯುತ್ಸವ ಆಚರಣೆ ಮಾಡುವುದು ಜಿಲ್ಲಾಡಳಿತದ ಕಾರ್ಯ. ಆದರೆ ಈ ವರ್ಷ ಉದ್ದೇಶಪೂರ್ವಕವಾಗಿ ಕೈಬಿಟ್ಟಂತೆ ಕಾಣಿಸುತ್ತದೆ. ಇದು ಸೂಕ್ತವಾದ ಬೆಳವಣಿಗೆ ಅಲ್ಲ ಎಂದು ಗಂಭೀರ ಆರೋಪ ಮಾಡಿದರು.
ನೂರಾರು ಕಾರ್ಯಕರ್ತರು ಏಕಾಏಕಿ ಘೋಷಣೆಗಳನ್ನು ಕೂಗುತ್ತಿದ್ದರಿಂದ ಕೆಲಕಾಲ ಗೊಂದಲದ ವಾತಾವರಣ ಉಂಟಾಯಿತು. ಮೆರವಣಿಗೆ ನಂತರ ಸಮಾಜದ ಸಭೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲು ತೀರ್ಮಾನಿಸಿದ ಹಿನ್ನೆಲೆ ಘೋಷಣೆ ಕೈಬಿಟ್ಟರು.
ಈ ಬಾರಿ ಕೈಬಿಟ್ಟದ್ದೇಕೆ?: ಜಿಲ್ಲಾಡಳಿತ ಬಸವ ಜಯಂತಿ ಆಚರಿಸದ ಕಾರಣ ವೀರಶೈವ ಸಮಾಜದ ಯುವ ಮುಖಂಡರು ಆಕ್ರೋಶಗೊಂಡು ಘೋಷಣೆ ಕೂಗಿದ್ದಾರೆ. ಪ್ರತಿ ಬಾರಿ ಆಚರಣೆ ಮಾಡಿ, ಈ ಬಾರಿ ಕೈಬಿಟ್ಟದ್ದೇಕೆ ಎಂದು ಸಮಾಜದ ಮುಖಂಡ ವೆಂಕಟರೆಡ್ಡಿ ಮುದ್ನಾಳ ಪ್ರಶ್ನಿಸಿದ್ದಾರೆ. ಜಿಲ್ಲಾಡಳಿತ ಜಯಂತ್ಯುತ್ಸವ ಆಚರಣೆ ಮಾಡಬೇಕಿತ್ತು. ಆದರೆ ನಿಷ್ಕಾಳಜಿ ವಹಿಸಿರುವುದು ವೀರಶೈವ ಸಮಾಜಕ್ಕೆ ತೀವ್ರ ನೋವುಂಟು ಮಾಡಿದೆ ಎಂದು ಸಮಾಜದ ಮುಖಂಡ ಸಿದ್ದಪ್ಪ ಹೊಟ್ಟಿ ತಿಳಿಸಿದ್ದಾರೆ.
ತತ್ವಾದರ್ಶ ಪಾಲಿಸಿ: ಜಾಲಹಳ್ಳಿ
ಸುರಪುರ: ಸಮಾಜದಲ್ಲಿನ ಅನಿಷ್ಟತೆಗಳನ್ನು ತಮ್ಮ ವಚನಗಳ ಮೂಲಕ ಖಂಡಿಸಿ, ಸ್ವಸ್ಥ ಸಮಾಜಕ್ಕಾಗಿ ಸಂದೇಶ ನೀಡಿದ ವಿಶ್ವಗುರು ಬಸವಣ್ಣನವರ ತತ್ತ್ವಾದರ್ಶಗಳನ್ನು ಪಾಲಿಸಬೇಕೆಂದು ವೀರಶೈವ ಲಿಂಗಾಯತ ಯುವ ವೇದಿಕೆ ಜಿಲ್ಲಾಧ್ಯಕ್ಷ ಮಂಜುನಾಥ ಜಾಲಹಳ್ಳಿ ಕರೆ ನೀಡಿದರು. ಪಟ್ಟಣದಲ್ಲಿ ಶುಕ್ರವಾರ ಸಂಜೆ ಬಸವ ಜಯಂತಿ ನಿಮಿತ್ತ ವೀರಶೈವ ಯುವ ವೇದಿಕೆ ಏರ್ಪಡಿಸಿದ್ದ ಬಸವೇಶ್ವರ ಭಾವಚಿತ್ರದ ಮೆರವಣಿಗೆಯಲ್ಲಿ ಮಾತನಾಡಿದರು.
ಇಲ್ಲಿಯ ಪಂಚಾಂಗಮಠದಿಂದ ಅಶ್ವರಥದಲ್ಲಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಜಗಜ್ಯೋತಿ ಬಸವೇಶ್ವರರ ಅದ್ಧೂರಿ ಮೆರವಣಿಗೆ ಜರುಗಿತು. ವೀರಶೈವ ಲಿಂಗಾಯತ ಯುವ ವೇದಿಕೆಯ ನೂರಾರು ಕಾರ್ಯಕರ್ತರು ಒಂದೇ ರೀತಿಯ ಪೋಷಾಕು ಧರಿಸಿ ನಾಸಿಕ್ ಡೋಲಿಗೆ ಕುಣಿದು ಕುಪ್ಪಳಿಸಿದರು. ಮೆರವಣಿಗೆಯುದ್ದಕ್ಕೂ ಶಂಖನಾದ ನಡೆಯಿತು. ವಿಶ್ವಗುರು ಬಸವೇಶ್ವರಿಗೆ ಜಯವಾಗಲಿ ಎಂಬ ಘೋಷಣೆ ಮುಗಿಲು ಮಟ್ಟಿತ್ತು.