ಉತ್ತಮ ಆರೋಗ್ಯಕ್ಕೆ ನಗುವೇ ಟಾನಿಕ್
ಶಹಾಪುರ: ಮನುಷ್ಯ ಸದಾ ಉತ್ಸಾಹದಿಂದ ಕೂಡಿರಬೇಕಾದರೆ ನಗು ಅಗತ್ಯ. ಉತ್ತಮ ಆರೋಗ್ಯಕ್ಕೆ ನಗುವೇ ಟಾನಿಕ್ ಎಂದು ಶಾಸಕ ಗುರು ಪಾಟೀಲ್ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆಟದ ಮೈದಾನದಲ್ಲಿ ಭಾನುವಾರ ಇಲ್ಲಿನ ಸ್ವಾಮಿ ವಿವೇಕಾನಂದ ಗೆಳೆಯರ ಬಳಗ ಏರ್ಪಡಿಸಿದ್ದ ಹಾಸ್ಯ ಸಂಜೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸದಾ ಸಂಸಾರದ ಜಂಜಾಟದಲ್ಲಿ ಮುಳುಗಿರುವ ಎಲ್ಲರಿಗೂ ಮನೋರಂಜನೆ ಅಗತ್ಯ. ಅದರಲ್ಲಿ ಇಂತಹ ಹಾಸ್ಯ ಕಾರ್ಯಕ್ರಮಗಳು ಆರೋಗ್ಯ ದೃಷ್ಟಿಯಿಂದಲೂ ಒಳ್ಳೆಯದು. ಇಂತಹ ಮಹತ್ವದ ಕಾರ್ಯಕ್ರಮ ಏರ್ಪಡಿಸಿ ಸಗರಾದ್ರಿ ಪರಿಸರದಲ್ಲಿ ನಗುವಿನ ಚಿಲುಮೆ ಸಿಂಪಡಿಸುವ ಮೂಲಕ ಎಲ್ಲರ ಮನ ಗೆದ್ದಿರುವ ಗೆಳೆಯರ ಬಳಗದ ಶ್ರಮ ಸಾರ್ಥಕವೆಂದರು.
ಕ್ಷಣ ಮರೆಯಾಯ್ತು ಕಷ್ಟಗಳು: ಸುಂದರ ಪರಿಸರದಲ್ಲಿ ಹಾಸ್ಯ ಸಂಜೆ ಕಾರ್ಯಕ್ರಮದಲ್ಲಿ ಬೆರೆತ ಎಲ್ಲರೂ ಹಾಸ್ಯ ದಿಗ್ಗಜರ ಮಾತಿಗೆ, ಜೋಕಿಗೆ ಕ್ಷಣಹೊತ್ತು ಬದುಕಿನ ಕಷ್ಟ ಕಾರ್ಪಣ್ಯಗಳನ್ನು ಬದಿಗೊತ್ತಿ ಮೈ ಮರೆತು ಉತ್ಸಾಹದ ನಗು ಚೆಲ್ಲುವ ಮೂಲಕ ಹೊಸ ಶಕ್ತಿಯನ್ನು ಪಡೆದುಕೊಂಡು ಮತ್ತೇ ಜೀವನದ ಪಯಣ ಆರಂಭಿಸಿ ಎಂದು ಶುಭಕೋರಿದರು.
ಈ ಸಂದರ್ಭದಲ್ಲಿ ಮಾಜಿ ಎಂಎಲ್ಸಿ ಅಮಾತೆಪ್ಪ ಕಂದಕೂರ, ಮುಖಂಡರಾದ ಲಾಲನ್ ಸಾಬ ಖುರೇಶಿ, ಸಂಗಣ್ಣ ಮೋಟಗಿ, ಟಿಎಂಸಿ ಸದಸ್ಯರಾದ ಮಾನಯ್ಯ ಹಾದಿಮನಿ, ವಂಸತ ಸುರಪುರಕರ್, ಬಸವರಾಜ ಆನೇಗುಂದಿ ಇತರರು ಉಪಸ್ಥಿತರಿದ್ದರು. ಗೆಳೆಯರ ಬಳಗದ ರಾಜು ಬಾಣತಿಹಾಳ ಸೇರದಿಂತೆ ಇತರರು ಕಾರ್ಯಕ್ರಮದ ನಿಯೋಜಿಸಿದ್ದರು. ಹಾಸ್ಯ ಕಲಾವಿದ ಪ್ರಾಣೇಶ ಜೋಶಿ, ಬಸವರಾಜ ಮಹಾಮನಿ, ನರಸಿಂಹ ಜೋಶಿ, ಮಲ್ಲಪ್ಪ ಹೊಂಗಲ್ ಇತರರು ನಗೆಯ ಹೊನಲು ಹರಿಸುವ ಮೂಲಕ ಸಮಸ್ತ ಜನತೆಯ ಮನಸೂರೆಗೊಂಡರು.