ಕೊಳವೆಬಾವಿಗೆ ವಿದ್ಯುತ್ತಿಲ್ಲ
ಕ.ಪ್ರ. ವಾರ್ತೆ ಚಿಂಚೋಳಿ ಮೇ 5
ತಾಲೂಕಿನ ಕುಂಚಾವರಂ ಗಡಿಭಾಗದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ರೈತರಿಗೆ ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಕೊಳವೆ ಬಾವಿ ಮಂಜೂರಿಗೊಂಡಿದೆ. ಆದರೆ ವಿದ್ಯುತ್ ಸಂಪರ್ಕ ನೀಡಿಲ್ಲ ಎಂದು ಕುಂಚಾವರಂ ವಲಯದ ಸಾರ್ವಜನಿಕರು ಶಾಸಕ ಡಾ. ಉಮೇಶ ಜಾಧವ್ ಅವರ ಮುಂದೆ ಸಮಸ್ಯೆಗಳ ಸುರಿಮಳೆಗೈದರು.
ತಾಲೂಕಿನ ಕುಂಚಾವರಂ ಗ್ರಾಪಂ ಕಚೇರಿ ಅವರಣದಲ್ಲಿ ಭಾನುವಾರ ಏರ್ಪಡಿಸಿದ್ದ ಕುಡಿವ ನೀರು ಮತ್ತು ವಿದ್ಯುತ್ ಸಂಪರ್ಕ ಸಮಸ್ಯೆ ಕುರಿತು ಚರ್ಚೆ ನಡೆಸಿದ ಸಂದರ್ಭದಲ್ಲಿ ಮಗದಂಪುರ ಗ್ರಾಮದ ವೆಂಕಟರೆಡ್ಡಿ ಮಾತನಾಡಿ, ನಮ್ಮ ಗ್ರಾಮದಲ್ಲಿ ವಿದ್ಯುತ್ ಸಮಸ್ಯೆ ಅತಿಯಾಗಿದೆ. ಇದರಿಂದ ಕುಡಿವ ನೀರಿಗಾಗಿ ತೋಟದಲ್ಲಿರುವ ಬಾವಿಗಳಿಂದ ನೀರು ತರಬೇಕಾಗಿದೆ. ಗ್ರಾಮಕ್ಕೆ ಕುಡಿವ ನೀರಿಗಾಗಿ ರು. 7 ಲಕ್ಷ ವೆಚ್ಚದಲ್ಲಿ ನೀರಿನ ಟ್ಯಾಂಕ್ ನಿರ್ಮಿಸಿ 5 ವರ್ಷ ಕಳೆದರೂ ಕುಡಿಯಕ್ ನೀರಿಲ್ಲ ಎಂದು ಅವಲತ್ತುಕೊಂಡರು.
ಲಂಚಕ್ಕೆ ಬೇಡಿಕೆ: ಶ್ಯಾಮಸನ್ ಮಾತನಾಡಿ, ಗಂಗಾ ಕಲ್ಯಾಣ ಯೋಜನೆ ಮಂಜೂರಿಗೊಂಡು 7ವರ್ಷಗಳಾದರೂ ವಿದ್ಯುತ್ ಸಂಪರ್ಕ ನೀಡಿಲ್ಲ. ವಿದ್ಯುತ್ ಕಂಬ, ತಂತಿ ಹಾಕುವಂತೆ ಕೇಳಿದರೆ ಗುತ್ತಿಗೆದಾರ ರು. 25 ಸಾವಿರ ಲಂಚ ಕೇಳುತ್ತಾನೆಂದು ಸಭೆಯಲ್ಲಿ ದೂರಿದರು.
ಶಿವರಾಮಪುರ ಗ್ರಾಮದ ತಿರುಪತಿ ಮಾತನಾಡಿ, ಕಾಡಿನಲ್ಲಿರುವ ನಮ್ಮ ಮನೆಗಳು ಕತ್ತಲಿನಲ್ಲಿ ಜೀವನ ಸಾಗಿಸುವುದು ತುಂಬಾ ಕಷ್ಟಕರವಾಗಿದೆ. ಕ್ಷಣ ಕ್ಷಣಕ್ಕೆ ವಿದ್ಯುತ್ ಸಂಪರ್ಕ ಕಡಿದು ಹೋಗುತ್ತದೆ. ಹೊರಗೆ ಮಲಗಿದರೆ ಕಾಡುಪ್ರಾಣಿಗಳ ಭಯ. ಮನೆಯೊಳಗೆ ಮಲಗಿದರೆ ಸೊಳ್ಳೆಗಳ ಕಾಟ ಹೇಗೆ ಜೀವನ ಸಾಗಿಸಬೇಕೆಂದು ಶಾಸಕರಿಗೆ ವಿವರಿಸಿದರು.
ಸಮಸ್ಯೆ ನಿವಾರಿಸಿ: ಕುಂಚಾವರಂ ವಲಯದಲ್ಲಿ ವಿದ್ಯುತ್ ಸಂಪರ್ಕ ಸಮರ್ಪಕವಾಗಿ ಸಿಗುತ್ತಿಲ್ಲ. ರೈತರು ಕಬ್ಬು ಬೆಳೆಗೆ ನೀರು ಬಿಡಲು ಬಾವಿ ಹತ್ತಿರ ಮಲಗಬೇಕಾಗಿದೆ. ನೀರಿದ್ದರೆ ಕರೆಂಟಿಲ್ಲ, ಕರೆಂಟ್ ಇದ್ದರೆ ನೀರಿಲ್ಲ. ಹೀಗಾಗಿ ಕಾಡು ಪ್ರದೇಶದಲ್ಲಿ ಬರುವ ಗ್ರಾಮ, ತಾಂಡಾಗಳ ನಿವಾಸಿಗಳಿಗೆ ವಿದ್ಯುತ್ ಮತ್ತು ಕುಡಿವ ನೀರಿನ ಸಮಸ್ಯೆ ನಿವಾರಿಸಬೇಕೆಂದು ಡಾ. ಅಂಜನಯ್ಯ ಮನವಿ ಮಾಡಿದರು.
ಶಾಸಕ ಡಾ. ಉಮೇಶ ಜಾಧವ್ ಮಾತನಾಡಿ, ಕುಂಚಾವರಂ ವಲಯದಲ್ಲಿ ಬರುವ ಮೇ 11 ಮತ್ತು 12ರಂದು ಗ್ರಾಮ ವಾಸ್ತವ್ಯ ಹೂಡಿ ಇಲ್ಲಿನ ಸಮಸ್ಯೆಗೆ ಪರಿಹಾರ ನೀಡಲಾಗುವುದು. ಈಗಾಗಲೇ ನಮ್ಮ ತಾಲೂಕಿನಲ್ಲಿ ವಿದ್ಯುತ್ ಮತ್ತು ಕುಡಿಯುವ ನೀರಿನ ಸಮಸ್ಯೆ ಕುರಿತು ಮುಖ್ಯಮಂತ್ರಿ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ್ರವರಿಗೆ ಮನವರಿಕೆ ಮಾಡಿ ಶೀಘ್ರವಾಗಿ ಸಮಸ್ಯೆ ಬಗೆಹರಿಸುತ್ತೇನೆಂದು ಭರವಸೆ ನೀಡಿದರು.
ಗ್ರಾಪಂ ಅಧ್ಯಕ್ಷೆ ಅನುಸೂಜಾ ರವಿ, ವೆಂಕಟಾಪೂರ ಗ್ರಾಪಂ ಅಧ್ಯಕ್ಷ ಗೋಪಾಲ ಜಾಧವ್, ಶಾದಿಪುರ ಗ್ರಾಪಂ ಅಧ್ಯಕ್ಷ ತುಳಸೀರಾಮ ಜಾಧವ್, ತಾಪಂ ಸದಸ್ಯ ನರಸಿಂಹಲು ಕುಂಬಾರ, ಕಾಂಗ್ರೆಸ್ ಮುಖಂಡ ನರಸಿಂಹಲು ಸವಾರಿ, ತಾಪಂ ಅಧಿಕಾರಿ ಹಂಪಣ್ಣ ಎಲ್.ವೈ, ಜಿಪಂ ಎಇಇ ರೇವಣಸಿದ್ದಪ್ಪ ಹಾಗರಗಿ, ಜೆಸ್ಕಾಂ ಎಇಇ ಪರಮೇಶ್ವರ ಬಿರಾದಾರ, ಮೊಗಲಪ್ಪ, ಇತರರು ಭಾಗವಹಿಸಿದ್ದರು.