ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಗುಣಮಟ್ಟದಲ್ಲಿ ಲೋಪವಾದ್ರೆ ಸಹಿಸಲ್ಲ

Rashmi Kasaragodu
Updated On : 6 May 2014, 12:12 pm

ಕನ್ನಡಪ್ರಭ ವಾರ್ತೆ, ಶಹಾಪುರ, ಮೇ 5
ನಿಗದಿತ ಕಾಲಮಿತಿಯಲ್ಲಿ ಕಾಲುವೆಗಳ ನವೀಕರಣದ ಕಾಮಗಾರಿ ಮುಗಿಸುವ ಅವಸರದಲ್ಲಿ ಗುಣಮಟ್ಟದಲ್ಲಿ ನಿಷ್ಕಾಳಜಿ ತೋರಿದರೆ ಸಹಿಸಲಾಗದೆಂದು ಗುತ್ತೆದಾರರು ಮತ್ತು ಕಾಮಗಾರಿ ಪರಿಶೀಲಸುವ ಅಧಿಕಾರಿಗಳಿಗೆ ಶಾಸಕ ಗುರುಪಾಟೀಲ್ ಶಿರವಾಳ ಎಚ್ಚರಿಸಿದರು.
ಶಹಾಪುರ ವಿಭಾಗ ಕಾಲುವೆ(ಎಸ್‌ಬಿಸಿ) 0.30 ಪ್ಯಾಕೇಜ್ ಎಸ್-1 ಕಾಮಗಾರಿ ಮತ್ತು 30ರಿಂದ 76 ಕಿಮೀ ವರೆಗಿನ ಕಾಲುವೆ ನವೀಕರಣದ ಕಾಮಗಾರಿಯನ್ನು ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಎಸ್‌ಬಿಸಿ ಕಾಲುವೆ ನವೀಕರಣಕ್ಕಾಗಿ 0.30ವರೆಗೆ 269.54 ಕೋಟಿ ಮತ್ತು 30ರಿಂದ 76ರವರೆಗೆ 180 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆದಿದ್ದು ಕೇಂದ್ರ ಸರ್ಕಾರ ನೀಡಿದ ಅನುದಾನ ಸಂಪೂರ್ಣ ಸದ್ವಿನಿಯೋಗವಾಬೇಕು ಎಂದರು.
ಮುತುವರ್ಜಿ ವಹಿಸಿ: ಕೃಷ್ಣಾ ಭಾಗ್ಯ ಜಲ ನಿಗಮದ ನೀರಾವರಿ ಯೋಜನೆ ಸಮರ್ಪಕ ನಿರ್ವಹಣೆ ಮಾಡುವಲ್ಲಿ ಸರ್ಕಾರದ ಕರ್ತವ್ಯ ಬಹುಮುಖ್ಯವಾಗಿದ್ದು ಈ ನಿಟ್ಟಿನಲ್ಲಿ ದಿಟ್ಟ ನಿಲುವು ತಾಳಬೇಕು. ಕಾಮಗಾರಿ ಪರಿಶೀಲನೆಯಲ್ಲಿ ನಿಷ್ಕಾಳಜಿ ವಹಿಸಿದರೆ ಯೋಜನೆ ವಿಫಲವಾಗಿ ರೈತರ ಭವಿಷ್ಯವೇ ಅಂಧಕಾರವಾಗುತ್ತದೆ. ಕಾಲುವೆಯಲ್ಲಿ ಸಮರ್ಪಕ ನೀರು ಹರಿಯುವ ದೃಷ್ಟಿಯಿಂದ ಗುತ್ತೇದಾರರು, ಅಧಿಕಾರಿಗಳು ಮುತುವರ್ಜಿ ವಹಿಸಬೇಕೆಂದು ಸೂಚಿಸಿದರು.
ಕೊನೆ ಭಾಗದ ರೈತರಿಗೂ ನೀರು: ಈ ಮೊದಲು ಅಧಿಕಾರಿಗಳು ಹೇಳುವಂತೆ- ಕಾಲುವೆ ಹೂಳು ತುಂಬಿ ಇನ್ನಿತರ ಅವ್ಯವಸ್ಥೆಯಲ್ಲೂ 3,650 ಕ್ಯುಸೆಕ್ ನೀರು ಹರಿಯುತ್ತಿತ್ತು. ಇದೇ ಅಂಕಿ-ಅಂಶಗಳನ್ನೂ ತೋರಿಸುತ್ತಿದ್ದರು. ವಾಸ್ತವದಲ್ಲಿ ಕೇವಲ 3000 ಕ್ಯುಸೆಕ್ ನೀರನ್ನು ಮಾತ್ರ ಕೊಡಲಾಗುತ್ತಿತ್ತು. ಆದರೀಗ ಕಾಲುವೆ ನವೀಕರಣದಿಂದ 4,150 ಕ್ಯುಸೆಕ್ ನೀರು ಹರಿಯಲಿದ್ದು ಕಾಲುವೆ ಕೊನೆಭಾಗದ ಕೆಲವು ಹಳ್ಳಿಗಳಿಗೂ ನೀರು ತಲುಪುವ ವಿಶ್ವಾಸವಿದೆ. ಕಾಲುವೆ ನವೀಕರಣ ರೈತರಿಗೆ ವರದಾನವಾಗಲಿದೆ ಎಂದರು.
ಕಾಲುವೆ ನವೀಕರಣಕ್ಕಾಗಿ ಸಾವಿರಾರು ಕೋಟಿ ಹಣ ನಿಗದಿಪಡಿಸಿದ್ದರೂ ಗುತ್ತೇದಾರರಿಗೆ ಕಾಲಮಿತಿಯೊಳಗೆ ಉತ್ತಮ ಕಾಮಗಾರಿ ಮುಗಿಸಿದರೆ ಶೇ.25 ಪ್ರೋತ್ಸಾಹ ಅನುದಾನವೇಕೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಶಾಸಕರು, ಕಾಲಮಿತಿಯಲ್ಲಿ ಗುಣಮಟ್ಟದ ಕಾಮಗಾರಿಗೆ ಸರ್ಕಾರವೇ ಹೆಚ್ಚಿನ ಸೌಲಭ್ಯ ಕಲ್ಪಿಸಿದ್ದು ಅದು ಸರ್ಕಾರದ ವಿವೇಚನೆಗೆ ಬಿಟ್ಟ ವಿಷಯ ಎಂದು ಹೇಳಿದರು.
ಉಪಕಾಲುವೆ ನವೀಕರಣವೂ ಅಗತ್ಯ: ನಮ್ಮ ಭಾಗದ ರೈತರ ಸದಾಶಯ, ಎರಡು ಬೆಳೆ ಬೆಳೆಯಲು ನೀರಿನ ಅವಕಾಶ, ಕೊನೆಭಾಗದ ರೈತರಿಗೆ ನೀರಿನ ಸೌಲಭ್ಯವನ್ನು ಸಮಗ್ರವಾಗಿ ಕುಡಿವ ನೀರಿನ ಸೌಲಭ್ಯದ ದೃಷ್ಟಿಯಿಂದ ಕಾಲುವೆ ನವೀಕರಣದ ಜೊತೆಗೆ ಉಪಕಾಲುವೆಗಳ ನವೀಕರಣವೂ ನಡೆಯಬೇಕು. ಕಾಲುವೆಗಳ ನಿರ್ವಹಣೆಯು ಉತ್ತಮ ರೀತಿಯಲ್ಲಿ ನಡೆಯಲು ಅಧಿಕಾರಿಗಳ ಕಾಳಜಿ ಅವಶ್ಯಕವೆಂದರು.  ಮುಖ್ಯ ಅಭಿಯಂತರಾದ ಪ್ರಮೋದರಡ್ಡಿ, ಅಧೀಕ್ಷಕ ಅಭಿಯಂತರಾದ ಈಶ್ವರನಾಯಕ, ಮತ್ತು ಸಂಬಂಧಿಸಿದ ತಾಂತ್ರಿಕ ವಿಭಾಗದವರು, ಸಂಬಂಧಿಸಿದ ಗುತ್ತೇದಾರರು ಮತ್ತು ಮಾಜಿ ಎಂಎಲ್ಸಿ ಅಮಾತೆಪ್ಪ ಕಂದಕೂರ, ವಸಂತ ಸುರಪುರ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement