ಆರೋಗ್ಯಕ್ಕೆ ಕುಸ್ತಿ ಅವಶ್ಯ: ಖಜೂರಿಶ್ರೀ
ಆಳಂದ: ಇಂದಿನ ಕಲುಷಿತ ವಾತಾವರಣದಲ್ಲಿ ಅನಾರೋಗ್ಯದಿಂದ ಬಳಲುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕಾದರೆ ಸತ್ವ ಹಾಗೂ ಪೌಷ್ಠಿಕಾಂಶಯುಕ್ತ ಆಹಾರ ಸೇವನೆ ಮಾಡಬೇಕು. ದೇಹವನ್ನು ಬಲಿಷ್ಠವಾಗಿಸಲು ವ್ಯಾಯಾಮ, ಕುಸ್ತಿ ಸ್ಪರ್ಧೆಗಳು ಅವಶ್ಯಕ ಎಂದು ಖಜೂರಿ ಮಠದ ಮುರುಘೇಂದ್ರ ಸ್ವಾಮೀಜಿ ಹೇಳಿದರು.
ಖಜೂರಿ ಕೋರಣೇಶ್ವರ ಜಾತ್ರೆ ನಿಮಿತ್ತ ನಡೆದ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡುತ್ತಿದ್ದ ಅವರು ಆಟದಲ್ಲಿ ಸೋಲು, ಗೆಲುವು ಮುಖ್ಯವಲ್ಲ. ಭಾಗವಹಿಸುವಿಕೆ ಅವಶ್ಯಕವಾಗಿದೆ. ಹಿರಿಯ ಕುಸ್ತಿಪಟುಗಳು, ಕಿರಿಯರಿಗೆ ಕುಸ್ತಿ ಆಟದ ಬಗ್ಗೆ ಕೌಶಲ್ಯಗಳನ್ನು ಹೇಳಿಕೊಡುವ ಮೂಲಕ ಅವರಿಗೆ ಮಾರ್ಗದರ್ಶನ ನೀಡಬೇಕು. ಕುಸ್ತಿಪಟುಗಳು ದುಶ್ಚಟಗಳಿಂದ ದೂರವಿದ್ದಾಗ ಮಾತ್ರ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಗ್ರಾಮದ ಡಾ. ಶ್ರೀನಿವಾಸರಾವ ದೇಶಮುಖ ಕುಸ್ತಿಯ ಬಗ್ಗೆ ವಿವರಿಸಿದರು. ಪಿಎಸ್ಐ ಮಹಾದೇವ ಪಂಚಮುಖಿ, ಪ್ರಮುಖರಾದ ಶಿವಪ್ಪ ಹಳ್ಳೆ, ಕಲ್ಯಾಣಿ ಕುಂಬಾರ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
5 ರಿಂದ 5001ವರೆಗೆ ಕುಸ್ತಿಗಳನ್ನು ನಡೆಸಲಾಯಿತು. ಒಟ್ಟು ಜಾತ್ರೆಯಲ್ಲಿ ರು.95 ಸಾವಿರ ಕುಸ್ತಿಗಾಗಿ ವೆಚ್ಚಮಾಡಿದ್ದು ವಿಶೇಷವಾಗಿತ್ತು. ಕರ್ನಾಟಕ, ಮಹಾರಾಷ್ಟ್ರದ ಪ್ರಖ್ಯಾತ ಕುಸ್ತಿಪಟುಗಳು ಪಾಲ್ಗೊಂಡಿದ್ದರು.