ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

'ಕೃಷಿ ತ್ಯಾಜ್ಯ ಬಳಕೆಯಿಂದ ಮಣ್ಣಿನಲ್ಲಿ ಸತ್ವ ಹೆಚ್ಚಳ'

Mainashree
Updated On : 7 May 2014, 10:21 am

ಗುಲ್ಬರ್ಗ: ಮಾಗಿ ಉಳಿಮೆ ಮಾಡಿ ಹೊಲಗಳಲ್ಲಿ ಕಳೆದ ಸಾಲಿನ ಬೆಳೆಗಳ ಕೃಷಿ ತ್ಯಾಜ್ಯ ವಸ್ತುಗಳನ್ನು ಮಣ್ಣಿನಲ್ಲಿ ಕಲಿಸುವುದರಿಂದ ಮಣ್ಣಿನ ಸತ್ವ ಹೆಚ್ಚಾಗುವುದಲ್ಲದೆ ಮಳೆಯಿಂದ ಬಿದ್ದ ನೀರು ಇಂಗಿ, ಮತ್ತು ಮಣ್ಣಿನ ಸವಕಳಿ ತಡೆಯುತ್ತದೆ. ಮುಂದೆ ಬೆಳೆಗಳಿಗೆ ಬರುವ ರೋಗ ಮತ್ತು ಕೀಟಗಳ ಪ್ರಮಾಣ ಕಡಿಮೆಯಾಗುತ್ತದೆ ಎಂದು ಜಂಟಿ ಕೃಷಿ ನಿರ್ದೇಶಕ ಮೋಕಾಶಿ ತಿಳಿಸಿದ್ದಾರೆ.
ಹೊಲದ ಬದುಗಳಲ್ಲಿ ಬೆಳೆದಿರುವ ಕಸ ಕಂಟಿಗಳನ್ನು ಸುಟ್ಟು ನಾಶಪಡಿಸುವುದರಿಂದ ಕಾಯಿಕೊರಕದ ಬಾಧೆ ಮತ್ತು ಗೊಡ್ಡುರೋಗದ ಹಾಗೂ ಇತರೆ ರೋಗಗಳ ಬಾಧೆಯನ್ನು ಕಡಿಮೆ ಮಾಡಬಹುದು. ಕಳೆದ ಸಾಲಿನಲ್ಲಿ ತೊಗರಿ ಹಾಕಿದ ಹೊಲದಲ್ಲಿ ಮಾಗಿ ಉಳಿಮೆ ಮಾಡದೆ ಇರುವ ಹೊಲಗಳಲ್ಲಿ ಅಕಾಲಿಕ ಮಳೆಗೆ ತೊಗರಿ ಕೋಲಿಗಳಿಗ(ಉಳಿಕೆಗಳಿಗೆ) ಹೊಸ ಚಿಗುರು ಬಂದಿರುವುದು ಜಿಲ್ಲೆಯಲ್ಲಿ ಅಲ್ಲಲ್ಲಿ ಕಂಡು ಬಂದಿರುತ್ತದೆ. ಅಂತಹ ಹೊಲಗಳಲ್ಲಿ ತಕ್ಷಣ ಮಾಗಿ ಉಳಿಮೆ ಮಾಡಿ ಕೋಲಿಗಳನ್ನು ಆರಿಸಿ ಸುಟ್ಟು ಹಾಕಿದರೆ ಮುಂದೆ ಬರುವ ಗೊಡ್ಡುರೋಗ ಬಾಧೆಯನ್ನು ಕಡಿಮೆ ಮಾಡಬಹುದು.
ಮಾಗಿ ಉಳಿಮೆ ನಂತರ ಬುಟ್ಟಿ ಆಕಾರದ ಚೌಕು ಮಡಿಗಳನ್ನು ಮಾಡುವುದರಿಂದ ಮೆಳೆಯಿಂದ ಬಿದ್ದ ನೀರು ಮುಂದೆ ಉರಳಿ ಹೋಗದೆ, ಜೊತೆಗೆ ಫಲವತ್ತತೆಯಾದ ಮಣ್ಣಿನ ಕೊಚ್ಚುವಿಕೆಯನ್ನು ತಡೆಗಟ್ಟಬಹುದು. ರೈತರು ಬಿತ್ತುವ ಮೂರು ವಾರಗಳ ಮುಂಚೆ ಹೊಲಗಳಲ್ಲಿ ತಿಪ್ಪೆಗೊಬ್ಬರವನ್ನು ಮಣ್ಣಿನಲ್ಲಿ ಸೇರಿಸಬೇಕು. ಅದಕ್ಕಿಂತ ಮೊದಲು ಗೊಬ್ಬರವನ್ನು ಭೂಮಿಗೆ ಸೇರಿಸಿದರೆ ಗೊಬ್ಬರದಲ್ಲಿರುವ ಪೋಷಕಾಂಶಗಳು ಬೇಸಿಗೆ ಬಿಸಿನಲ್ಲಿ ನಾಶಗೊಳ್ಳುತ್ತವೆ.
ರೈತರು ಭೂಮಿಯ ಗುಣಧರ್ಮಕ್ಕೆ ಅನುಗುಣವಾಗಿ, ಹೆಚ್ಚು ಇಳುವರಿಯನ್ನು ಕೊಡುವ ತಳಿಯ ಪ್ರಮಾಣಿತ ಬೀಜವನ್ನು ರೈತ ಸಂಪರ್ಕ ಕೇಂದ್ರಗಳಿಂದ ಪಡೆದುಕೊಳ್ಳಬೇಕು. ಹೊಸ ತಳಿಯ ಬೀಜ ಉಪಯೋಗಿಸಿ ತಳಿ ಬದಲಾವಣೆ ಮಾಡುವುದರಿಂದ ರೋಗ ಮತ್ತು ಕೀಟದ ಬಾಧೆ ತಡೆಗಟ್ಟಬಹುದು. ರೈತರು ಪ್ರತಿ ವರ್ಷ ಬೆಳೆದ ಬೆಳೆಯನ್ನು ಬೆಳೆಯುವುದರಿಂದ ರೋಗಕೀಟ ಬಾಧೆ ಹೆಚ್ಚು ಆಗುತ್ತದೆ. ಇದರಿಂದ ಇಳುವರಿ ಸಹ ಕುಂಠಿತವಾಗುತ್ತದೆ. ಆದ್ದರಿಂದ ಬೆಳೆದ ಬೆಳೆ ಬೆಳೆಯದೆ ಬದಲಾವಣೆ ಮಾಡಿ ಬೇರೆ ಬೆಳೆ ಹಾಕುವುದು ಅತೀ ಅವಶ್ಯ. ಇದರಿಂದ ಬೆಳೆಯ ಹೆಚ್ಚಿನ ಇಳುವರಿ ಪಡೆಯಬಹುದು. ವಿವರಕ್ಕೆ ರೈತ ಬಾಂಧವರು ಸಮೀಪದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳನ್ನು ಸಂಪರ್ತಿಸಲು ತಿಳಿಸಲಾಗಿದೆ.
ನಾಪತ್ತೆ ಪ್ರಕರಣ ಸುಖಾಂತ್ಯ
ಗುಲ್ಬರ್ಗ: ನಗರದ ಚೌಡೇಶ್ವರಿ ಕಾಲೋನಿಯಲ್ಲಿ ಮನೆಯಿಂದ ಹೊರಹೋದ ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳು ಪತ್ತೆಯಾಗಿದ್ದು, ಪ್ರಕರಣ ಸುಖಾಂತ್ಯವಾಗಿದೆ. ಸರಿಯಾಗಿ ಓದುತ್ತಿಲ್ಲ ಎಂದು ಪಾಲಕರು ಕೋಪ ಮಾಡಿದ್ದರಿಂದ ಮುನಿಸಿಕೊಂಡ ಬಾಲಕಿ ಮೇ 4ರಂದು ಬೆಂಗಳೂರಿಗೆ ಹೋಗಿದ್ದಳು. ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದಲ್ಲಿ ಇಳಿದ ಬಾಲಕಿ ಅಳುತ್ತಾ ನಿಂತಿದ್ದಾಗ ಪ್ರಯಾಣಿಕರು ವಿಚಾರಿಸಿ ಆಕೆಯಿಂದ ಮೊಬೈಲ್ ನಂಬರ್ ಪಡೆದು ಪಾಲಕರಿಗೆ ಸುದ್ದಿ ಮುಟ್ಟಿಸಿದ್ದರಿಂದ ಪ್ರಕರಣ ಸುಖಾಂತ್ಯವಾಗಿದೆ.
ಅಂಬಾಭವಾನಿ ಜಾತ್ರೆ
ಗುಲ್ಬರ್ಗ: ನಡುವಿನಹಳ್ಳಿ ಗ್ರಾಮದ ಅಂಬಾಭವಾನಿ ಜಾತ್ರಾ ಮಹೋತ್ಸವ ಮೇ 7ರಿಂದ 11ರವರೆಗೆ ಗಂಗಾಧರ ಶಿವಾಚಾರ್ಯರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿವೆ. ಬುಧವಾರ ಬೆಳಗ್ಗೆ ಗಂಗಾಸ್ಥಳ ಮತ್ತು ಪಲ್ಲಕ್ಕಿ ಉತ್ಸವ, ಸಂಜೆ ನಡುವಿನಹಳ್ಳಿ, ಕಡಿಹಳ್ಳಿ ಮತ್ತು ಸೋಮನಾಥಹಳ್ಳಿ ಗ್ರಾಮಗಳ ನಂದಿಕೋಲು ಮೆರವಣಿಗೆ ಜರುಗುವುದು. ನಂತರ ವಿಜೃಂಭಣೆಯಿಂದ ರಥೋತ್ಸವ ನಡೆಯಲಿದೆ. ರಾತ್ರಿ  ಗೀಗಿ ಪದಗಳ ಕಾರ್ಯಕ್ರಮ ಏರ್ಪಡಿಸಲಾಗಿದೆ. ಮೇ 8ರಂದು ಜಂಗಿ ಕುಸ್ತಿ ನಡೆಯಲಿದೆ ಎಂದು ಅಮೃತ ಎಂ. ವಿಶ್ವಕರ್ಮ ತಿಳಿಸಿದ್ದಾರೆ.
'ಏಕಾಗ್ರತೆ ಧ್ಯಾನ ಅವಶ್ಯ'
ಶಹಾಬಾದ್: ಹಿಂದೂ ಧರ್ಮದಲ್ಲಿ ಧ್ಯಾನಕ್ಕೆ ಪ್ರಮುಖ ಸ್ಥಾನವಿದ್ದು, ಮನುಷ್ಯನ ಮನಸ್ಸನ್ನು ಏಕಾಗ್ರತೆಗೊಳಿಸಲು ಧ್ಯಾನದಿಂದ ಮಾತ್ರ ಸಾದ್ಯ. ಪ್ರಾರ್ಥನೆ, ತಪಸ್ಸುಗಳು ಧ್ಯಾನದ ಭಾಗಗಳಾಗಿವೆ ಎಂದು ದಿಗ್ಗಾಂವ ಹಿರೇಮಠದ ಸಿದ್ದವೀರ ಶಿವಾಚಾರ್ಯರು ಹೇಳಿದರು. ಬಳವಡಗಿ ಗ್ರಾಮದ ರಸ್ತೆಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಸಿದ್ದೇಶ್ವರ ಧ್ಯಾನ ಧಾಮದ ಭೂಮಿ ಪೂಜೆ ನೆರವೇರಿಸಿ, ಧರ್ಮ ಸಭೆಯಲ್ಲಿ ಮಾತನಾಡಿದರು. ಆಧ್ಯಾತ್ಮದತ್ತ ಪ್ರಗತಿ ಸಾಧಿಸಲು ಧ್ಯಾನ ಸಹಕಾರ ನೀಡುತ್ತದೆ. ಈ ಭಾಗದಲ್ಲಿ ಧ್ಯಾನ ಧಾಮ ನಿರ್ಮಿಸುತ್ತಿರುವುದು ತಮ್ಮೆಲ್ಲರ ಭಾಗ್ಯ ಎಂದು ಹೇಳಿದರು. ಹಲಕರ್ಟಿಯ ರಾಜಶೇಖರ ಸ್ವಾಮಿ ನೇತೃತ್ವ ವಹಿಸಿದ್ದರು. ಅಳ್ಳಳ್ಳಿಯ ಸಂಗಮನಾಥ ಸ್ವಾಮಿ, ಜಂಗಮ ಸಮಾಜದ ಕ್ಷೇಮಾಭೃದ್ಧಿ ಸಂಘದ ತಾಲೂಕ ಅಧ್ಯಕ್ಷ ನೀಲಯ್ಯ ಸ್ವಾಮಿ, ತಾಲೂಕ ವೀರಶೈವ ಸಮಾಜದ ಗೌರವ ಅಧ್ಯಕ್ಷ ಲಿಂಗಾರೆಡ್ಡಿ ಬಾಸರೆಡ್ಡಿ, ಶಶಿಧರ ದೇಶಮುಖ ಕರದಾಳ, ಬಸವರಾಜ ಪಂಚಾಳ, ಮಲ್ಲಣ್ಣಗೌಡ ಬಳವಡಗಿ, ಚಾಂದಪಾಶಾ ಪಟೇಲ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement