ಗುಲ್ಬರ್ಗ ಡಿಡಿಪಿಐ ಬಂಧನ
ಕನ್ನಡಪ್ರಭ ವಾರ್ತೆ ಯಾದಗಿರಿ ಮೇ 8
ನಕಲಿ ದಾಖಲೆ ಸೃಷ್ಟಿಸಿ ಮಾಜಿ ಸೈನಿಕರ ಕೋಟಾದಡಿ ಶಿಕ್ಷಕರ ನೇಮಕ ಪ್ರಕರಣಕ್ಕೆ ಸಂಬಂಧಿಸಿ ಗುಲ್ವರ್ಗ ಡಿಡಿಪಿಐ ಬಿ.ಎಸ್. ಪರಮೇಶ್ವರ ಅವರನ್ನು ಯಾದಗಿರಿ ಲೋಕಾಯುಕ್ತ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಯಾದಗಿರಿ ಜಿಲ್ಲೆ ರಚನೆಯಾಗುವ ಮುನ್ನ ಯಾದಗಿರಿ ಶೈಕ್ಷಣಿಕ ಜಿಲ್ಲೆಯಾಗಿತ್ತು. 2006 ರಿಂದ 2010 ರವರೆಗೆ ನಕಲಿ ದಾಖಲೆ ತಯಾರಿಸಿ ಮಾಜಿ ಸೈನಿಕರ ಕೋಟಾದಲ್ಲಿ ನಕಲಿ ಶಿಕ್ಷಕರ ನೇಮಕ ಮಾಡಲಾಗಿತ್ತು.
ಖಾಸಗಿ ವ್ಯಕ್ತಿಯೊಬ್ಬರು ಲೋಕಾಯುಕ್ತಕ್ಕೆ ನೀಡಿದ ದೂರಿನ ಹಿನ್ನಲೆ ಪ್ರಕರಣ ದಾಖಲಿಸಿಕೊಂಡ ಯಾದಗಿರಿ ಲೋಕಾಯುಕ್ತ ಪೊಲೀಸರು ತನೀಖೆ ನಡೆಸುತ್ತಿದ್ದರು. ತನಿಖೆ ವೇಳೆ ನಕಲಿ ಶಿಕ್ಷಕರ ನೇಮಕ ಹಗರಣದಲ್ಲಿ ಅಧಿಕಾರಿಗಳು ಶಾಮಿಲಾಗಿದ್ದು ಬೆಳಕಿಗೆ ಬಂದಿದೆ.
23.7.2007ರಿಂದ 18.9.2009 ರವರೆಗೆ ಬಿ.ಎಸ್. ಪರಮೇಶ್ವರ ಯಾದಗಿರಿ ಡಿಡಿಪಿಐ ಆಗಿದ್ದರು. ಹೀಗಾಗಿ ನಕಲಿ ಶಿಕ್ಷಕರ ನೇಮಕಾತಿ ಹಗರದಲ್ಲಿ ಪರಮೇಶ್ವರ ಭಾಗಿಯಾಗಿದ್ದು ಸ್ಪಷ್ಟವಾಗುತ್ತಿದೆ. ಈ ಹಿನ್ನಲೆಯಲ್ಲಿ ಯಾದಗಿರಿ ಲೋಕಾಯುಕ್ತ ಪೊಲೀಸರು ಗುಲ್ಬರ್ಗದ ಡಿಡಿಪಿಐ ಕಚೇರಿ ಆವರಣದ ಸ ಮೀಪ ಬಿ.ಎಸ್. ಪರಮೇಶ್ವರ ಅವರನ್ನು ಬಂಧಿಸಿದ್ದಾರೆ.
ನಂತರ ಯಾದಗಿರಿ ಲೋಕಾಯುಕ್ತ ಕಚೇರಿಗೆ ಕರೆ ತಂದು, ವಿಚಾರಣೆ ನಡೆಸಿದ್ದಾರೆ. ಕಳೆದ ತಿಂಗಳು 21 ರಂದು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. ಪ್ರಕಣದಲ್ಲಿ ಅಕ್ರಮ ನೇಮಕಾತಿ ಹೊಂದಿದ್ದ 20 ನಕಲಿ ಶಿಕ್ಷಕರನ್ನು ಶಿಕ್ಷಣ ಇಲಾಖೆ ವಜಾ ಮಾಡಿದೆ. ಹಾಗೂ ಒಬ್ಬ ಪ್ರಥಮ ದರ್ಜೆ ಸಹಾಯಕ ಶ್ರೀಕಾಂತ ಅವರನ್ನು ಅಮಾನತು ಮಾಡಿದೆ.