ದಲಿತರು ಪದ ಬಳಕೆ ಬೇಡ: ಮಹೇಂದ್ರಕುಮಾರ
ಯಾದಗಿರಿ: ಸಮಾಜದಲ್ಲಿ ಅಸ್ಪೃಶ್ಯತೆಗೊಳಗಾದ ಜನಾಂಗಕ್ಕೆ ದಲಿತರು ಎಂದು ಪದ ಬಳಕೆ ಮಾಡುತ್ತಿರುವ ಸರ್ಕಾರ ಮತ್ತು ವಿವಿಧ ರಾಜಕೀಯ ಪಕ್ಷಗಳ ಧೋರಣೆ ಖಂಡನಾರ್ಹ ಎಂದು ಡಾ. ಅಂಬೇಡ್ಕರ್ ಪೀಪಲ್ಸ್ ಪಾರ್ಟಿ ರಾಜ್ಯಾಧ್ಯಕ್ಷ ಮಹೇಂದ್ರಕುಮಾರ ಮಿತ್ರ ಹೇಳಿದರು.
ಭಾರತ ಸಂವಿಧಾನದಲ್ಲಿ ಪರಿಶಿಷ್ಟ ಜಾತಿ ವರ್ಗದ ಜನತೆಯನ್ನು ದಲಿತರೆಂದು ನಮೂದಿಸಿಲ್ಲ. ಪರಿಸ್ಥಿತಿ ಹೀಗಿರುವಾಗ ಸರ್ಕಾರಗಳು ಮಾತ್ರ ದಲಿತ ಪದವನ್ನು ಉಪಯೋಗಿಸುತ್ತಾ ಬರುತ್ತಿವೆ. ದಲಿತರೆಂದರೆ ಸಮಾಜದಲ್ಲಿನ ಎಲ್ಲಾ ಜಾತಿಗಳಲ್ಲಿನ ಬಡವರು ಎಂದರ್ಥ ಎಂದು ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 2007ರಲ್ಲಿ ಪತ್ರ: ಪರಿಶಿಷ್ಟ ಜಾತಿಯವರನ್ನು ದಲಿತರು ಎಂದು ಕರೆಯಕೂಡದು. ಇದು ಸಂವಿಧಾನ ವಿರೋಧಿಯಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಸರ್ಕಾರಗಳು ಪರಿಶಿಷ್ಟ ಜಾತಿಯವರು ಎಂದು ಕರೆಯಬೇಕು ಎಂದು 2007ರಲ್ಲಿ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗದ ಜಂಟಿ ಕಾರ್ಯದರ್ಶಿ ಎಸ್.ಎಸ್ ಶರ್ಮಾ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಪತ್ರ ಬರೆದಿದ್ದಾರೆ ಎಂದರು.
ದೇಶದ ಗ್ರಾಮೀಣ ಭಾಗದಲ್ಲಿ ಸಂವಿಧಾನದ ಬಗ್ಗೆ ತಿಳಿವಳಿಕೆ ಇಲ್ಲದ ಕಾರಣ ಇನ್ನೂ ದಲಿತ ಎಂಬ ಪದವನ್ನು ಬಳಸಲಾಗುತ್ತಿದೆ ಎಂದು ಹೇಳಿದರು.
ಪಕ್ಷದ ಪ್ರ.ಕಾರ್ಯದರ್ಶಿ ಮಾರುತಿ ಜಂಬಗಾ ಮಾತನಾಡಿ, ಶೋಷಿತ ಜನರಲ್ಲಿ ರಾಜಕೀಯ ಪ್ರಜ್ಞೆ ಮೂಡಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಮುಂಬರುವ ದಿನಗಳಲ್ಲಿ ರಾಜಕೀಯ ಅಧ್ಯಯನ ಸಂಸ್ಥೆಗಳನ್ನು ನಮ್ಮ ಪಕ್ಷದ ವತಿಯಿಂದ ಪ್ರಾರಂಭಿಸಲಾಗುತ್ತಿದೆ. ದಲಿತ ಪದ ಬಳಕೆಯನ್ನು ಕೈಬಿಡಲು ಎಲ್ಲ ದಲಿತ ಸಂಘಟನೆಗಳನ್ನು ಒಂದೇ ವೇದಿಕೆಯಡಿ ಕರೆದು ಚರ್ಚಿಸಲಾಗುವುದು ಎಂದರು.