ರೈತರ ಬಿಲ್ ಪಾವತಿಗಾಗಿ ಜೈ ಕರ್ನಾಟಕ ಪ್ರತಿಭಟನೆ
ಆಳಂದ: ತಾಲೂಕಿನ ಭೂಸನೂರ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸಿದ ರೈತರ ಬಿಲ್ ಪಾವತಿ ಮಾಡುವಂತೆ ಆಗ್ರಹಿಸಿ ಜೈ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಈರಣ್ಣ ಕೋರಳ್ಳಿ ಮತ್ತು ತಾಲೂಕಾಧ್ಯಕ್ಷ ಬಸವರಾಜ ಎಸ್.ಕೊರಳ್ಳಿ ನೇತೃತ್ವದಲ್ಲಿ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.
ನಂತರ ಮಾತನಾಡಿ, ಗುತ್ತಿಗೆ ಪಡೆದ ಕಾರ್ಖಾನೆಯವರು ರೈತರಿಂದ ಕಬ್ಬು ಪಡೆದ ಮೇಲೆ ಬಿಲ್ ಪಾವತಿಸುವಾಗ ವಿಳಂಬ ನೀತಿ ಅನುಸರಿಸುತ್ತಿದ್ದು, ಇದರಿಂದ ರೈತರಿಗೆ ತೊಂದರೆಯಾಗುತ್ತಿದೆ. ಕಾರ್ಖಾನೆ ಆಡಳಿತ ಮಂಡಳಿಯವರು ಇನ್ನಾದರೂ ರೈತರ ಬಿಲ್ ಜತೆಗೆ ಶೇ.3ರಷ್ಟು ಬಡ್ಡಿ ಸೇರಿಸಿ ಹಣ ಪಾವತಿಸಬೇಕು. ಇಲ್ಲದಿದ್ದಲ್ಲಿ ಈ ಭಾಗದ ಕಬ್ಬು ಬೆಳೆಗಾರ ರೈತರೊಂದಿಗೆ ಮೇ 25ರಂದು ಕಾರ್ಖಾನೆಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಸಿದರು. ಆಡಳಿತ ಮಂಡಳಿಯ ಅಧಿಕಾರಿಗಳು ಮನವಿ ಪತ್ರ ಸ್ವೀಕರಿಸಿ ರೈತರ ಬೇಡಿಕೆಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು. ಸಂಘಟನೆಯ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸಾರವಾಡ, ಕಾರ್ಯಾಧ್ಯಕ್ಷ ಗುರುರಾಜ ಪಾಟೀಲ, ಪ್ರಮುಖರಾದ ಸಾಗರ ಹತ್ತರಕಿ, ಭಂಡು ಫುಲಾರ, ಅಪ್ಪು ಕೋರಳ್ಳಿ, ಅಣವೀರಯ್ಯ ಸ್ವಾಮಿ, ರಾಜು ಗುತ್ತೇದಾರ, ಸಾಗರ ಪಾಟೀಲ, ಸತೀಶ ರೆಡ್ಡಿ, ಸಿದ್ದ ಪೊದ್ದಾರ, ಉಮಾಶಂಕರ ಮಂಗಾಣೆ ಸೇರಿದಂತೆ ಇತರರು ಪಾಲ್ಗೊಂಡಿದರು.