ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಸಂಯೋಜಕನಾದ ಇಂದಿನ ಶಿಕ್ಷಕ

Mainashree
Updated On : 9 May 2014, 11:17 am

ಕನ್ನಡಪ್ರಭ ವಾರ್ತೆ   ಗುಲ್ಬರ್ಗ  ಮೇ 8
ಅತ್ಯಾಧುನಿಕ ತಂತ್ರಜ್ಞಾನದಿಂದ ಇಂದಿನ ಶಿಕ್ಷಣ ಪದ್ಧತಿ ಸಂಪೂರ್ಣ ಬದಲಾಗಿದೆ. ಕಂಪ್ಯೂಟರ್, ವಿಡಿಯೋ, ಡಿಜಿಟಲ್, ಇಂಟರ್ನೆಟ್, ವಿಡಿಯೋ ಕ್ಲಾಸ್‌ಗಳಿಂದಾಗಿ ಶಿಕ್ಷಕ ಪಕ್ಕಾ ಬೋಧಕನಾಗದೆ ಸಂಯೋಜಕನಾಗಿ ಕಾರ್ಯನಿರ್ವಹಿಸುತ್ತಿದ್ದಾನೆ ಎಂದು ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಭಾರಿ ಕುಲಪತಿ ಪ್ರೊ. ಸುದೀಂದ್ರರಾವ್ ಹೇಳಿದರು.
  ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರದ ಸಭಾಂಗಣದಲ್ಲಿ ನಾಲ್ಕು ದಿನಗಳ ತಂತ್ರಜ್ಞಾನ ಸವಾಲುಗಳು ಮತ್ತು ಅವಕಾಶಗಳಲ್ಲಿ ಶಿಕ್ಷಕರ ಪಾತ್ರ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
  ಶಿಕ್ಷಕರು ಸಿದ್ಧವಾದ ಧ್ವನಿ ಮತ್ತು ಚಿತ್ರಗಳನ್ನು ತೋರಿಸುತ್ತಾ ಸಂಯೋಜಕರಾಗುತ್ತಿದ್ದು, ವಿದ್ಯಾರ್ಥಿಗಳು ಪ್ರೇಕ್ಷಕರಾಗುತ್ತಿದ್ದಾರೆ. ತಂತ್ರಜ್ಞಾನ ವಿಷಯದಲ್ಲಿ ಇದು ಉಪಯುಕ್ತವೆನಿಸಿದರೂ ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಬೆನ್ನೆಲುಬಾಗಿ: ಶಿಕ್ಷಕರು ವಿದ್ಯಾರ್ಥಿಗಳಿಗೆ ಬೆನ್ನೆಲುಬಾಗಿ ಕಾರ್ಯ ನಿರ್ವಹಿಸಬೇಕಾಗಿದೆ. ವಿದ್ಯಾರ್ಥಿಗಳಲ್ಲಿ ಜೀವನ ಮೌಲ್ಯಗಳನ್ನು, ಉತ್ತಮ ದೇಹಭಾಷೆ, ಆತ್ಮಸ್ಥೈರ್ಯ, ಮೌಲಿಕ ಶಿಕ್ಷಣ ನೀಡಬೇಕಾಗಿದೆ ಎಂದರು.
  ರಾಜ್ಯ ಸರ್ಕಾರದ ವಿಜಿಎಸ್‌ಟಿಯ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ. ಎಸ್.ಅನಂತ್ ರಾಜ್ ಮಾತನಾಡಿ, ಇಂದಿನ ಸೆಮಿಸ್ಟರ್ ಪದ್ಧತಿಯಿಂದಾಗಿ ಶಿಕ್ಷಕರಿಗೆ ಕಲಿಸಲು ಸಮಯವೇ ಇಲ್ಲದಂತಾಗಿದೆ. ಇದರಿಂದಾಗಿ 3 ಗಂಟೆಯಲ್ಲಿ ಮಾಡಬೇಕಾದ ಪಾಠವನ್ನು ಮೂರು ನಿಮಿಷದಲ್ಲಿ ಮುಗಿಸುವಂತಾಗಿದ್ದು, ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.
  ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯ ಡಾ. ವಿ.ಡಿ. ಮೈತ್ರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿಶ್ವವಿದ್ಯಾಲಯ ವಿಶೇಷ ಆಡಳಿತಾಧಿಕಾರಿ ಡಾ. ಉದಯಕುಮಾರ ಖಡಕೆ ಪ್ರಾಸ್ತಾವಿಕವಾಗಿ ಮಾತನಾಡಿದರು.
  ಪ್ರೊ. ಯಶವಂತ ಅಷ್ಟಗಿ, ಪ್ರೊ. ಕೈಲಾಶ, ಪ್ರೊ. ವೀರೇಶ ಪೂಜಾರಿ, ಪ್ರೊ. ರಂಜನಾ ನಾಡಗೌಡ ಹಾಗೂ ವಿವಿಧ ಎಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕರು, ಪ್ರಾಂಶುಪಾಲರು ಇದ್ದರು. ವಿದ್ಯಾರ್ಥಿನಿಯರಾದ ವಾಣಿ ಮತ್ತು ಸುಧಾ ಪ್ರಾರ್ಥಿಸಿದರು. ಪ್ರಾಧ್ಯಾಪಕಿ ಡಾ. ಸಂಧ್ಯಾ ನಿರೂಪಿಸಿದರು. ಡಾ.ಮಹ್ಮದ್ ಅಬ್ದುಲ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement