ಮತ್ತೂ ತಪ್ಪದ ಹಿಂದುಳಿಕೆ ಕಳಂಕ
ಗುಲ್ಬರ್ಗ: ದ್ವಿತೀಯ ಪಿಯುಸಿ ಫಲಿತಾಂಶದಲ್ಲಿಯಾದರೂ ಹೈದ್ರಾಬಾದ್ ಕರ್ನಾಟಕಕ್ಕೆ ಕೊನೆಯ ಸ್ಥಾನದ ಕಳಂಕ ದೂರವಾದೀತೆಂಬ ನಿರೀಕ್ಷೆಗಳು ಮತ್ತೆ ಹುಸಿಯಾಗಿದೆ. ಫಲಿತಾಂಶದ ಸುಧಾರಣೆಗೆ ಇಲಾಖೆ ಸಾಕಷ್ಟು ಶ್ರಮಿಸಿದ್ದರೂ ನಿರೀಕ್ಷಿತ ಫಲಿತಾಂಶ ಬಂದಿಲ್ಲದಿರುವುದು ಶಿಕ್ಷಣ ಇಲಾಖೆಗೆ ಚಿಂತೆಗೀಡು ಮಾಡಿದೆ. ಎಸ್‌ಎಸ್‌ಎಲ್‌ಸಿ, ಪಿಯುಸಿ ಹೀಗೆ ಯಾವುದೇ ಪರೀಕ್ಷೆ ಬಂದರೂ ಹೈ-ಕ ಜಿಲ್ಲೆಗಳೇ ಕಟ್ಟ ಕಡೆಯ ಸ್ಥಾನದಲ್ಲಿರುತ್ತವೆ. ಗುರುವಾರ ಪ್ರಕಟವಾದ ಪಿಯುಸಿ ಪರೀಕ್ಷೆಯಲ್ಲಿ ಹೈ-ಕ ಜಿಲ್ಲೆಗಳೇ ಕೊನೆಯ ಸ್ಥಾನದಲ್ಲಿ ಬಂದು ನಾವೇ ಲಾಸ್ಟ್ ಸ್ಥಾನದಲ್ಲಿದ್ದೇವೆಂದು ಸಾಬೀತು ಪಡಿಸಿವೆ. ಜಿಲ್ಲಾವಾರು ಫಲಿತಾಂಶದ ಪಟ್ಟಿಯಲ್ಲಿ ಹೈ-ಕ ಜಿಲ್ಲೆಗಳ ಸ್ಥಾನ ಪಟ್ಟಿಯ ಕೆಳಗಿನಿಂದ ಹುಡುಕಿದರೇ ಮಾತ್ರ ಬೇಗ ಸಿಗುತ್ತದೆ. ಗುಲ್ಬರ್ಗ ಜಿಲ್ಲೆ ಮತ್ತೆ 29ನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ. 2012-13ನೇ ಸಾಲಿನಲ್ಲಿ 30ನೇ ಸ್ಥಾನ, 2012-13ನೇ ಸಾಲಿನಲ್ಲಿ 29ನೇ ಸ್ಥಾನದಲ್ಲಿದ್ದ ಗುಲ್ಬರ್ಗ ಜಿಲ್ಲೆ ಮತ್ತೆ 29ನೇ ಸ್ಥಾನ ಗಳಿಸಿದೆ. 28ನೇ ಸ್ಥಾನದಲ್ಲಿದ್ದ ರಾಯಚೂರು ಜಿಲ್ಲೆ ಈ ವರ್ಷ 30ನೇ ಸ್ಥಾನಕ್ಕೆ ತಲುಪಿದೆ. 26ನೇ ಸ್ಥಾನದಲ್ಲಿದ್ದ ಕೊಪ್ಪಳ ಈ ಬಾರಿ 27ನೇ ಸ್ಥಾನಕ್ಕೆ, 21ನೇ ಸ್ಥಾನದಲ್ಲಿದ್ದ ಬಳ್ಳಾರಿ ಈ ಬಾರಿ 25ನೇ ಸ್ಥಾನಕ್ಕೆ ಹಾಗೂ 27ನೇ ಸ್ಥಾನಕ್ಕೆ ಏರಿಕೆಯಾಗಿದ್ದ ಬೀದರ್ ಜಿಲ್ಲೆ ಈ ವರ್ಷ ಕೊನೆಯ ಸ್ಥಾನಕ್ಕೆ (31) ಬಂದು ನಿರಾಶೆ ಮೂಡಿಸಿದೆ.
ಅಚ್ಚರಿ ತಂದ ಯಾದಗಿರಿ: ಹೈ-ಕ ಪ್ರದೇಶದ ಹಿಂದುಳಿದ ಯಾದಗಿರಿ ಜಿಲ್ಲೆ ಕಳೆದ ಬಾರಿ ಕಟ್ಟ ಕಡೆಯ ಸ್ಥಾನದಿಂದ 21ನೇ ಸ್ಥಾನಕ್ಕೆ ಜಿಗಿದು ಆಶ್ಚರ್ಯ ಮೂಡಿಸಿದೆ. ಹಿಂದಿನ ವರ್ಷದ ಶೇಕಡಾವಾರಿಗೆ ಹೋಲಿಸಿದರೆ ಹೈ-ಕ ಭಾಗದ ಇತರ ಯಾವ ಜಿಲ್ಲೆಗಳಲ್ಲೂ ಈ ಪ್ರಮಾಣದಲ್ಲಿ ಏರಿಕೆ ಕಂಡಿಲ್ಲ. ಹೀಗಾಗಿ ಬೇರೆ ಜಿಲ್ಲೆಗಳಿಗೆ ಯಾದಗಿರಿ ಜಿಲ್ಲೆ ಮಾದರಿ ಜಿಲ್ಲೆಯೆಂದರೆ ತಪ್ಪಾಗಲಿಕ್ಕಿಲ್ಲ. ಕಳೆದ ವರ್ಷ 31ನೇ ಸ್ಥಾನದಲ್ಲಿದ್ದ ಯಾದಗಿರಿ ಜಿಲ್ಲೆ 21ನೇ ಸ್ಥಾನಕ್ಕೆ ಜಿಗಿದು ಹೈ-ಕ ಪ್ರದೇಶದ ಜಿಲ್ಲೆಗಳಲ್ಲಿ ಅಚ್ಚರಿ ಮೂಡಿಸಿದೆ.
-ರಾಮಲಿಂಗಣ್ಣ ಸಿ. ರಾಠೋಡ್