ಸಮಾನತೆ ಸಾರಿದ ಮೊದಲ ಪ್ರವಾದಿ
ಶಹಾಬಾದ್:ಮೇಲು-ಕೀಳು, ಗಂಡು-ಹೆಣ್ಣೆಂಬ ಬೇಧ ಭಾವವನ್ನು ಕಿತ್ತೊಗೆದು ಸಮಾನತೆಯ ಸಮಾಜವನ್ನು ನಿರ್ಮಾಣ ಮಾಡಿದ ಜಗತ್ತಿನ ಮೊಟ್ಟ ಮೊದಲ ಪ್ರವಾದಿ ಬಸವಣ್ಣನವರು ಎಂದು ಬೆಂಗಳೂರು ಬಸವ ಸಮಿತಿಯ ಅಧ್ಯಕ್ಷ ಅರವಿಂದ ಜತ್ತಿ ಹೇಳಿದರು.
ಅವರು ನಗರದಲ್ಲಿ ಬಸವಾದಿ ಶರಣರ ಒಕ್ಕೂಟ ಸಮಿತಿಯು ಹಮ್ಮಿಕೊಳ್ಳಲಾದ ಬಸವ ಜಯಂತಿ ಹಾಗೂ ಬಸವಾದಿ ಶರಣರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿಷಾದನೀಯ: ಅಂದು ಕಾಯಕ ಮಾಡುವ ಜೀವಿಗಳನ್ನು ಪುರೋಹಿತಶಾಹಿಗಳು ಶೂದ್ರರನ್ನಾಗಿ ಕಂಡಿದ್ದರು. ಆದರೆ ಬಸವಣ್ಣನವರು ಎಲ್ಲಾ ಕಾಯಕ ಮಾಡುವ ಶ್ರಮ ಜೀವಿಗಳು ಹೇಗೆ ಶೂದ್ರರಾಗುತ್ತಾರೆ ಎಂದು ಪ್ರಶ್ನೆ ಮಾಡುವ ಮೂಲಕ ಎಲ್ಲಾ ಕಾಯಕ ಜೀವಿಗಳನ್ನು ಒಂದುಗೂಡಿಸಿ ಅನುಭವ ಮಂಟಪವನ್ನು ನಿರ್ಮಾಣ ಮಾಡಿದರು. ಇಂದು ಬಸವ ಜಯಂತಿ ರಾಷ್ಟ್ರದ ಎಲ್ಲಾ ಕಡೆಗಳಲ್ಲೂ ನಡೆಯುತ್ತಿದೆ. ಆದರೆ ಬಸವಣ್ಣನವರ ತತ್ತ್ವಗಳನ್ನು ಕಡೆಗಣಿಸಿ ಭವ್ಯವಾದ ಮೆರವಣಿಗೆ ಮಾಡಿ ಜಯಂತಿಗಳನ್ನು ಕೇವಲ ಉತ್ಸವಗಳನ್ನಾಗಿ ಮಾಡುತ್ತಿರುವುದು ವಿಷಾದನೀಯ ಎಂದು ಹೇಳಿದರು.
ನಗರಸಭೆ ಅಧ್ಯಕ್ಷ ಗಿರೀಶ ಕಂಬಾನೂರ ಧ್ವಜಾರೋಹಣ ಮಾಡಿದರು. ಮುಖ್ಯ ಅತಿಥಿಗಳಾಗಿ ಮಲ್ಲಿಕಾರ್ಜುನ ಹುಗ್ಗಿ, ಅನಿಲಕುಮಾರ ಮರಗೋಳ, ವಚನ ಸಾಹಿತ್ಯ ಅಕಾಡೆಮಿ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ವೇದಿಕೆಯ ಮೇಲಿದ್ದರು.
ಅತಿಥಿಗಳಾಗಿ ಮಹಾಲಿಂಗಪ್ಪ ಇಂಗಿನಶೆಟ್ಟಿ, ನಾಗಣ್ಣ ರಾಂಪೂರೆ, ಬಸವ ಸಮಿತಿ ಅಧ್ಯಕ್ಷ ಸುಭಾಶ್ಚಂದ್ರ ರಾಜಾಪೂರ, ಬಸವಾದಿ ಶರಣರ ಒಕ್ಕೂಟ ಸಮಿತಿಯ ಅಧ್ಯಕ್ಷ ನಿಂಗಣ್ಣ ಹುಳಗೋಳಕರ್ ಅಧ್ಯಕ್ಷತೆ ವಹಿಸಿದ್ದರು. ಸೊನ್ನದ ವಿರಕ್ತ ಮಠದ ಡಾ. ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.