ಕೈಲಾಸ ಆಶ್ರಮದಲ್ಲಿ 19 ಜೋಡಿಗೆ ಕಂಕಣ ಭಾಗ್ಯ
ಶಹಾಪುರ:ನವ ದಂಪತಿಗಳು ಬದುಕಿನುದ್ದಕ್ಕೂ ಪರಸ್ಪರ ವಿಶ್ವಾಸ, ಸಹಕಾರ, ಸಹಬಾಳ್ವೆಯಿಂದ ಜೀವನ ನಡೆಸಿ ಎಂದು ಮಾಗಣಗೇರಿ ಬೃಹನ್ಮಠದ ಡಾ. ವಿಶ್ವರಾಧ್ಯ ಶಿವಾಚಾರ್ಯರು ತಿಳಿಸಿದರು.
ತಾಲೂಕಿನ ಹೋತಪೇಟ ಗ್ರಾಮದ ಕೈಲಾಸ ಆಶ್ರಮದಲ್ಲಿ ನೆಡೆದ 12ನೇ ಜಾತ್ರಾಮಹೋತ್ಸವ ಮತ್ತು ಉಚಿತ ಸರಳ ಸಾಮೂಹಿಕ ವಿವಾಹ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಸಮಾಜಮುಖಿ ಕಾರ್ಯಕ್ರಮ:ಈ ಸಂದರ್ಭದಲ್ಲಿ ಒಟ್ಟು 19 ಜೋಡಿಗಳ ವಿವಾಹ ನೆರವೇರಿತು. ಜಾತ್ರಾ ಮಹೋತ್ಸವ ನಿಮಿತ್ತ ಮೇ 8 ರಿಂದಲೇ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ನಡೆದಿದ್ದು ಇದರ ಜತೆಗೆ ಸಮಾಜಮುಖಿಯಾಗಿ ಸಾಮೂಹಿಕ ವಿವಾಹ ಕಾರ್ಯಕ್ರಮವೂ ನಡೆದಿದೆ.
ಕೈಲಾಸ ಆಶ್ರಮದ ಶಿವಲಿಂಗ ಶರಣರ ನೇತೃತ್ವದಲ್ಲಿ ಕ್ಷೇತ್ರ ದೈವವಾದ ರೇವಣಸಿದ್ದೇಶ್ವರರ ಗದ್ದುಗೆಗೆ ರುದ್ರಾಭಿಷೇಕ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ವೀರಮಹಾಂತ ಶಿವಾಚಾರ್ಯ ಹಿರೇಮಠ ದೋರನಳ್ಳಿಯವರು ವಹಿಸಿದ್ದರು.
ಸ್ವಾಮೀಜಿ ಉಪಸ್ಥಿತಿ: ಅಭಿನವ ಬ್ರಹ್ಮಾನಂದ ಸ್ವಾಮೀಜಿ, ಪರಮಾನಂದವಾಡಿ ರಾಜಭಾರತಿ ಸ್ವಾಮೀಜಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ತಾಪಂ ಮಾಜಿ ಅಧ್ಯಕ್ಷ ಧರ್ಮಣ್ಣ ಹೋತಪೇಟ, ಜೆಸ್ಕಾಂ ಸಿಪಿಐ ಈರಣ್ಣ ದೊಡಮನಿ, ಗಂಗಾಮತ ಸಮಾಜದ ಅಧ್ಯಕ್ಷ ಮಾಹಾದೇವಪ್ಪ ಸಾಲಿಮನಿ, ಕರವೇ ತಾಲುಕಾ ಅಧ್ಯಕ್ಷ ಭೀಮು ಶಖಾಪುರ, ಪಂಡಿತ ಮಹಾದೇವಯ್ಯ ಶಾಸ್ತ್ರಿಗಳು, ವೇ.ಮೂರ್ತಿ ಮಡಿವಾಳಯ್ಯ ಶಾಸ್ತ್ರಿಗಳು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲಾವಿದರಾದ ಬಸವರಾಜ ಬಂಟನೂರ ಶಾಂತಕುಮಾರ ಜೇರಟಗಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಅಪಾರ ಸಂಖ್ಯೆಯಲ್ಲಿ ವಧು-ವರರ ಕುಟುಂಬದವರು ಅಭಿಮಾನಿಗಳು, ಮಠದ ಭಕ್ತರು ಪಾಲ್ಗೊಂಡಿದ್ದರು.