ರಕ್ತದಾನ ಮಾಡಿದರೆ ಜೀವ ಉಳಿಸಿದಂತೆ
ಕನ್ನಡಪ್ರಭ ವಾರ್ತೆ, ಯಾದಗಿರಿ, ಮೇ 10
ಸಕಾಲಕ್ಕೆ ರಕ್ತ ದೊರೆಯದೆ ನೂರಾರು ಜನರ ಪ್ರಾಣ ಹಾನಿಯಾಗುತ್ತಿದೆ. ಪ್ರತಿಯೊಬ್ಬರು ತಮ್ಮಲ್ಲಿರುವ ತಪ್ಪು ತಿಳಿವಳಿಕೆ ದೂರ ಮಾಡಿ ರಕ್ತದಾನ ಮಾಡುವ ಮೂಲಕ ಜೀವ ಉಳಿಸಬೇಕೆಂದು ಡಾ. ಶರಣ ಭೂಪಾಲರಡ್ಡಿ ತಿಳಿಸಿದರು.
ನಗರದ ಮುದ್ನಾಳ ಕಾಂಪ್ಲೆಕ್ಸ್‌ನಲ್ಲಿ ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮ ಸೌಹಾರ್ದ ಪತ್ತಿನ ಸಹಕಾರಿ ಕಾರ್ಯಾಲಯದಲ್ಲಿ ಹೇಮರಡ್ಡಿ ಮಲ್ಲಮ್ಮ ಜಯಂತಿ ನಿಮಿತ್ತ ಹಮ್ಮಿಕೊಂಡಿದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ದಾನ ಮಾಡಿದರೂ ಅದು ಅಷ್ಟು ಪ್ರಾಮುಖ್ಯತೆ ಪಡೆದುಕೊಳ್ಳಲಾರದು. ಆದರೆ ರಕ್ತದಾನ ಮಾತ್ರ ಮಹತ್ವ ಪಡೆದುಕೊಳ್ಳುತ್ತದೆ. ಪ್ರತಿಯೊಬ್ಬರು ರಕ್ತದಾನ ಮಾಡುವ ಗುಣ ಬೆಳೆಸಿಕೊಳ್ಳುವ ಮೂಲಕ ಪರೋಪಕಾರಿತನವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ರಕ್ತದಾನ ಸರ್ವಶ್ರೇಷ್ಠ: ಸೌಹಾರ್ದ ಪತ್ತಿನ ಸಹಕಾರಿ ಸಂಸ್ಥೆಯ ಅಧ್ಯಕ್ಷ ಡಾ. ಶರಣರಡ್ಡಿ ಕೊಡ್ಲಾ ಮಾತನಾಡಿ, ರಕ್ತದಾನ ಜೀವದಾನಕ್ಕೆ ಸಮಾನ. ಎಲ್ಲ ದಾನಕ್ಕಿಂತ ಇದು ಸರ್ವಶ್ರೇಷ್ಠ. ಒಂದು ಜೀವ ಉಳಿಸಿದ ಪುಣ್ಯ ಪ್ರಾಪ್ತವಾಗುತ್ತದೆ. ರಕ್ತದಾನ ಮಾಡುವುದರಿಂದ ಮೈಯಲ್ಲಿ ಹೊಸ ರಕ್ತ ಉತ್ಪತ್ತಿಯಾಗುತ್ತದೆ. ಅದರಿಂದ ನಿಮ್ಮ ಆರೋಗ್ಯವೂ ಚೆನ್ನಾಗಿರುತ್ತದೆ ಎಂದರು.
ವಿಜ್ಞಾನ ಎಷ್ಟೇ ಮುಂದುವರಿದರೂ ರಕ್ತ ಉತ್ಪಾದಿಸಲು ಸಾಧ್ಯವಿಲ್ಲ. ವ್ಯಕ್ತಿಗಳೆಲ್ಲರೂ ರಕ್ತದಾನದ ಮೂಲಕ ರೋಗಿಗಳ ಜೀವ ರಕ್ಷಣೆ ಮಾಡಬೇಕು. ಈ ಮಹತ್ತರ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಿ ಮಾನವ ಜೀವ ರಕ್ಷಣೆಗೆ ಸಹಕರಿಸುವಂತೆ ಮನವಿ ಮಾಡಿದರು.
ಈ ವೇಳೆ ಡಾ. ಶೈಲಾಜಾ ಭೂಪಾಲರೆಡ್ಡಿ, ಬ್ಯಾಂಕ್ ಉಪಾಧ್ಯಕ್ಷ ಸೋಮನಾಥರಡ್ಡಿ ಬಾಲಚಂದ್ರ, ಮ್ಯಾನೇಜರ್ ಶಂಕರ ನಾರಾಯಣ, ನಿರ್ದೇಶಕ ಪರ್ವತರಡ್ಡಿ ಪಾಟೀಲ್ ಹೊಸಳ್ಳಿ, ಸಿಬ್ಬಂದಿ ಗೌತಮ್ಮ, ಮಹಾಲಕ್ಷ್ಮೀ, ಶಾಲಿನಿ, ಮಹೇಶ ಪಾಟೀಲ್, ಕಾಶೀಮ್ ಪಾಟೀಲ್ ಇದ್ದರು.
ದಾನಿಗಳಾದ ಶರಣಗೌಡ ಬಾಡಿಯಾಳ, ಮಹೇಶರಡ್ಡಿ ಮುದ್ನಾಳ, ರಾಮರಡ್ಡಿಗೌಡ, ಸಂಗಣ್ಣಗೌಡ ಗೋನಾಳ ಸೇರಿದಂತೆ ಸುಮಾರು 40 ಜನರು ರಕ್ತದಾನ ಮಾಡಿದರು.