ಶ್ರೀನಿವಾಸ ಸರಡಗಿ ಸರ್ಕಾರಿ ಕಾಲೇಜಿನ ಸಾಧನೆ
ಗುಲ್ಬರ್ಗ: ಇಲ್ಲಿನ ಶ್ರಿನಿವಾಸ ಸರಡಗಿಯಲ್ಲಿರುವ ಸರ್ಕಾರಿ ಕಲಾ ವಿದ್ಯಾಲಯದ ವಿದ್ಯಾರ್ಥಿಗಳು ಈ ಬಾರಿ ಭೇಷ್ ಎನ್ನಿಸಿಕೊಳ್ಳುವ ಸಾಧನೆ ಮಾಡಿದ್ದಾರೆ. ಇಲ್ಲಿನ 33 ವಿದ್ಯಾರ್ಥಿಗಳ ಪೈಕಿ 32 ಜನ ತೇರ್ಗಡೆಯಾಗಿ, ಕಾಲೇಜಿಗೆ ಶೇ.97ರಷ್ಟು ಫಲಿತಾಂಶ ದಾಖಲಾಗಿದೆ.
ತೇರ್ಗಡೆಯಾದವರ ಪೈಕಿ 29 ಪ್ರಥಮ ದರ್ಜೆಯಲ್ಲಿ, ಇಬ್ಬರು ದ್ವಿತೀಯ ದರ್ಜೆ, ಒಬ್ಬ ತೃತೀಯ ಶ್ರೇಣಿಯಲ್ಲಿ ಉತ್ತೀರ್ಣನಾಗಿದ್ದಾನೆ. ಒಬ್ಬ ವಿದ್ಯಾರ್ಥಿ ಮಾತ್ರ ಅನುತ್ತೀರ್ಣನಾಗಿದ್ದಾನೆ. ಇದೇ ಕಾಲೇಜು 2011, 2012ರಲ್ಲಿ ಸತತ ಶೇ.100ಕ್ಕೆ 100 ಫಲಿತಾಂಶ ದಾಖಲಿಸಿ ಜಿಲ್ಲೆಯ ಗಮನ ಸೆಳೆದಿತ್ತು. ಕಳೆದ ವರ್ಷ ಈ ಫಲಿತಾಂಶ ಶೇ.97 ರಷ್ಟಾಗಿತ್ತು. ಪ್ರಸಕ್ತ ಶಿಕ್ಷಣ ವರ್ಷದಲ್ಲಿಯೂ ಶೇ.97ರಷ್ಟೇ ಸಾಧನೆ ಮಾಡುವ ಮೂಲಕ ಸರಡಗಿ ಸರ್ಕಾರಿ ಕಾಲೇಜು ಮತ್ತೊಮ್ಮೆ ಸರ್ವರ ಗಮನ ಸೆಳೆದಿದೆ. ಇಲ್ಲಿನ ಒಟ್ಟು 33 ಮಕ್ಕಳಲ್ಲಿ 17 ವಿದ್ಯಾರ್ಥಿನಿಯರು, 16 ವಿದ್ಯಾರ್ಥಿಗಳಾಗಿದ್ದಾರೆ.
ಈ ಕಾಲೇಜಿನಲ್ಲಿರುವ ಬೋಧಕ ವರ್ಗ, ಪ್ರಾಚಾರ್ಯರ ತಂಡ ಉತ್ತಮ ಬೋಧನೆ ಹಾಗೂ ಪಠ್ಯೇತರ ಚಟುವಟಿಕೆಗಳ ಮೂಲಕ ಇಲ್ಲಿನ ಹಳ್ಳಿಗಾಡಿನ ಮಕ್ಕಳನ್ನು ಸತತ ಸಾಧನೆಗೆ ಪ್ರೇರಣೆ ನೀಡಿರುವುದೇ ಕಾಲೇಜಿನ ಈ ರೀತಿಯ ಫಲಿತಾಂಶಕ್ಕೆ ಕಾರಣ.
ಪ್ರಾಚಾರ್ಯರಾದ ಇಂದಿರಾ ಗುರುಮಠ, ಉಪನ್ಯಾಸಕರಾದ ರವೀಂದ್ರ ಸಜ್ಜಿ, ಎಸ್.ಎಸ್ ಪಾಟೀಲ್, ತಮ್ಮಾಗೋಳ, ಕೋರಿ ಹಾಗೂ ರಂಗದಾಳ, ಮಾಯಾದೇವಿ ಮಾಲೀಪಾಟೀಲ್ ಇವರನ್ನೊಳಗೊಂಡ ಬೋಧಕ ವರ್ಗದ ಶ್ರಮ, ಮಾರ್ಗದರ್ಶನವೇ ಈ ಸಾಧನೆಗೆ ಪ್ರೇರಣೆ.