ಟ್ಯಾಂಕರ್ ನೀರು ಪೂರೈಸದೇ ಬೋಗಸ್ ಬಿಲ್
ಕ.ಪ್ರ. ವಾರ್ತೆ ್ಣ ಆಳಂದ ್ಣ ಮೇ 14
ಗ್ರಾಮೀಣ ಪ್ರದೇಶದಲ್ಲಿ ನೀರು ಪೂರೈಕೆಯ ಶಾಶ್ವತ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿರುವ ಅಧಿಕಾರಿಗಳು ಮತ್ತು ಶಾಸಕರು ಸಮರ್ಪಕವಾಗಿ ಟ್ಯಾಂಕರ್ ನೀರು ಪೂರೈಸದೆ ಬೋಗಸ್ ಬಿಲ್ ಮೂಲಕ ಲೂಟಿ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಸುಭಾಷ ಗುತ್ತೇದಾರ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿಲ್ಲ. ಹಳ್ಳಿಗಳಲ್ಲಿ ಟ್ಯಾಂಕರ್ ನೀರು ಹಾಕುವ ಹೆಸರಿನಲ್ಲಿ ಕಾರ್ಯಕರ್ತರಿಗೆ ಅನುಕೂಲ ಒದಗಿಸುವ ನಿಟ್ಟಿನಲ್ಲಿ ಒಂದು ಟ್ಯಾಂಕರ್ ನೀರು ಕೊಟ್ಟು ಐದಾರು ಟ್ಯಾಂಕರ್ ಬರೆದು ಹಣ ಲೂಟಿ ಮಾಡಲಾಗುತ್ತಿದೆ ಎಂದರು.
ಇವರಿಗೆ ಆ ಕೆಲಸ ಬೇಕಾಗಿಲ್ಲ: ಮಾದನಹಿಪ್ಪರಗಾಗೆ ನೀರು ಒದಗಿಸಲು ತೆರೆದ ಬಾವಿ ಕಾಮಗಾರಿ ಪೂರ್ಣಗೊಂಡಿದೆ. ಟ್ಯಾಂಕರ್ ನೀರಿನ ಬದಲು ಬಾವಿಗೆ ಪೈಪಲೈನ್ ಕೈಗೊಂಡರೆ ನೀರಿನ ಸಮಸ್ಯೆಯೇ ನಿವಾರಣೆಯಾಗುತ್ತದೆ. ಈ ಟ್ಯಾಂಕರ್ ನೀರು ಬೋಗಸ್ ಬಿಲ್‌ಗೆ ದಾರಿಯಾಗುತ್ತದೆ ಎಂದ ಅವರು, ಸಾವಳೇಶ್ವರ, ಸರಸಂಬಾ ಇನ್ನಿತರ ಕಡೆ ಕಡಿಮೆ ನೀರು ಕೊಟ್ಟು ಹೆಚ್ಚಿನ ಟ್ಯಾಂಕರ್ ಹಣ ಎತ್ತುತ್ತಿದ್ದಾರೆ. ಸಾವಳೇಶ್ವರದಲ್ಲಿ ಪಂಪಸೆಟ್ ದುರಸ್ತಿ ಕೈಗೊಂಡರೆ ನೀರಿನ ಸಮಸ್ಯೆ ನಿವಾರಣೆಯಾಗುತ್ತದೆ. ಆದರೆ ಇವರಿಗೆ ಆ ಕೆಲಸ ಬೇಕಾಗಿಲ್ಲ ಎಂದಿದ್ದಾರೆ.
ಜನರ ಸಮಸ್ಯೆಗಳಿಗೆ ಹೋರಾಟ ಮಾಡಬೇಕಾಗಿದ್ದ ಶಾಸಕ ಬಿ.ಆರ್. ಪಾಟೀಲ್, ಸ್ವಾರ್ಥಸಾಧನೆಗಾಗಿ ಇದುವರೆಗಿನ ಹೋರಾಟದ ನಾಟಕ ಮಾಡಿದ್ದಾರೆ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಉತ್ತರವನ್ನೇ ಕೊಟ್ಟಿಲ್ಲ: ಅಭಿವೃದ್ಧಿ ವಿಷಯಕ್ಕೆ ಸಂಬಂಧಿಸಿದಂತೆ ನಮ್ಮ ಪ್ರಶ್ನೆಗಳಿಗೆ ಶಾಸಕರು ಉತ್ತರವನ್ನೇ ಕೊಟ್ಟಿಲ್ಲ. ನಾನು ಅಮರ್ಜಾನೀರು ಉಳಿಸಲು ಹೋರಾಟ ಮಾಡಿ ಜೈಲಿಗೆ ಹೋಗಿದ್ದೇನೆ. ಅಧಿಕಾರಿಗಳ ಮೇಲೆ ದಬ್ಬಾಳಿಕೆ ಮಾಡಲು ಶಾಸಕರು ಹೋರಾಟ ಮಾಡಿದ್ದಾರೆ ಎಂದಿದ್ದಾರೆ.
ಹೊಸದೇನಿದೆ? ಸಿಎಂ ಸಿದ್ದರಾಮಯ್ಯನವರು ಎಲ್ಲ ತಾಲೂಕಿಗೆ ಕೊಟ್ಟಂತೆ 2 ಕೋಟಿ ಹಣಕೊಟ್ಟಿದ್ದಾರೆ. ಇದರಲ್ಲಿ ಹೊಸದೇನಿದೆ? ನಮ್ಮ ಅವಧಿಯಲ್ಲಿ ಕೆರೆಗಳಿಗಾಗಿ 14 ಕೋಟಿ ಮಂಜೂರಾಗಿದೆ ಎಂದು ಗುತ್ತೇದಾರ ಹೇಳಿದ್ದಾರೆ.
ಮಂಜೂರಾದ ಆಳಂಗಾ, ಶುಕ್ರವಾಡಿ, ಬಬಲೇಶ್ವರ ಕೋತನಹಿಪ್ಪರಗಾ ಕರೆ ಕಾಮಗಾರಿ ಪೂರ್ಣಗೊಂಡಿದೆ. ಇನ್ನೂ ನಿಂಬರಗಾ, ಪಡಸಾವಳಿ ಕಾಮಗಾರಿ ಆಗಬೇಕಾಗಿದೆ. ಏಳೆಂಟು ಕಡೆ ಬ್ರಿಜ್ ಕಂ-ಬ್ಯಾರೇಜ್ ಮಂಜೂರಾಗಿವೆ. ನಿಜವಾಗಿ ಶಾಸಕರಿಗೆ ಕಾಳಜಿ ಇದ್ದರೆ ಸರ್ಕಾರ ಘೋಷಣೆ ಮಾಡಿದ ಕಬ್ಬಿನ ಬಿಲ್ ನೀಡುತ್ತಿಲ್ಲ. ಈ ಕುರಿತು ಯಾಕೆ ಚಕಾರ ಎತ್ತಿಲ್ಲ. ಹೋರಾಟ ಮಾಡಬೇಕು ಎಂದರು.