ಧನಂಜಯ ವಿರುದ್ಧ ಕ್ರಮಕ್ಕೆ ಆಗ್ರಹ
ಕ.ಪ್ರ. ವಾರ್ತೆ ್ಣ ಗುಲ್ಬರ್ಗ ್ಣ ಮೇ 14
ನಗರದ ಹುಮನಾಬಾದ್ ರಿಂಗ್ ರಸ್ತೆಯಲ್ಲಿರುವ ಬೀದಿ ವ್ಯಾಪಾರಿಗಳಿಗೆ ಕಿರುಕುಳ ನೀಡುತ್ತಿದ್ದ ಧನಂಜಯ ದೇವದಾಸ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಕರ್ನಾಟಕ ಬೀದಿ ವ್ಯಾಪಾರಿಗಳ ಸಂಘ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಮಾಡಿದೆ.
ನಗರದ ರಿಂಗ್ ರಸ್ತೆಯಲ್ಲಿರುವ ಬೀದಿ ಬದಿಯ ಮೇಲೆ ವ್ಯಾಪಾರ ಮಾಡುತ್ತಿರುವ ಬೀದಿ ವ್ಯಾಪಾರಿಗಳ ಮೇಲೆ ಅಲ್ಲಿನ ಕಾಂಪ್ಲೆಕ್ಸ್ ಮಾಲೀಕ ಧನಂಜಯ ದೇವದಾಸ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ. ಮಹಾನಗರ ಪಾಲಿಕೆಗೆ ಸಂಬಂಧಿಸಿದ ಸರ್ಕಾರಿ ಸ್ಥಳದಲ್ಲಿ ಮಹಾನಗರ ಪಾಲಿಕೆಯಿಂದ ಪರವಾನಗಿ ಪಡೆದು ಮತ್ತು ಟೋಕನ್ ಪಡೆದು ಪಾಲಿಕೆಗೆ ಕರ ವಸೂಲಿ ನೀಡುತ್ತಿದ್ದು, ಕಾನೂನಿನ ಚೌಕಟ್ಟಿನಲ್ಲಿ ವ್ಯಾಪಾರ ಮಾಡುತ್ತಿದ್ದೇವೆ. ಆದರೆ ದೇವದಾಸ ಈ ಸ್ಥಳ ನನಗೆ ಸಂಬಂಧಪಟ್ಟಿದ್ದು ಎಂದು ಸುಳ್ಳು ಹೇಳಿ ವ್ಯಾಪಾರಸ್ಥರಿಗೆ ವ್ಯಾಪಾರ ಮಾಡುವ ಸ್ಥಳಕ್ಕಾಗಿ ಪ್ರತಿಯೊಬ್ಬ ವ್ಯಾಪಾರಸ್ಥ ತಲಾ ಮೂವತ್ತು ಸಾವಿರ ರೂಪಾಯಿ ಜಮಾ ಮಾಡಿ ಪ್ರತಿ ತಿಂಗಳಿಗೆ ಮೂರು ಸಾವಿರ ಬಾಡಿಗೆ ದರ ನೀಡಬೇಕೆಂದು ಬೆದರಿಸಿ ಕೇಳುತ್ತಿದ್ದಾರೆ.
ನಾವು ಹಣ ಕೊಡಲು ನಿರಾಕರಿಸಿದಕ್ಕೆ ಮಾಲು ಸಮೇತ ತುಂಬಿದ ಬಂಡೆ ಮತ್ತು ಡಬ್ಬಿಗಳನ್ನು ಗುಂಡಾಗಳಿಂದ ಉರುಳಿಸಿ ವ್ಯಾಪಾರ ಮಾಡುವ ಸ್ಥಳದಲ್ಲಿ ಮಣ್ಣು ಕಲ್ಲುಗಳನ್ನು ಹಾಕಿಸಿದ್ದಾನೆ. ಇದರಿಂದ ವ್ಯಾಪಾರ ಮಾಡಲು ವ್ಯಾಪಾರಸ್ಥರಿಗೆ ಸ್ಥಳದ ಕೊರತೆಯಾಗಿದ್ದು, ಬೀದಿ ಬದಿಯ ಮೇಲೆ ವ್ಯಾಪಾರ ಮಾಡಿ ಉಪ ಜೀವನ ನಡೆಸಬೇಕಾಗಿದೆ. ಆದ್ದರಿಂದ ಕೂಡಲೇ ಧನಂಜಯ್ಯನ ವಿರುದ್ಧ ಕ್ರಮಕೈಗೊಂಡು ಸೂಕ್ತ ನ್ಯಾಯ ಒದಗಿಸಬೇಕು.
ನ್ಯಾಯ ಒದಗಿಸಲು ವಿಳಂಬವಾದಲ್ಲಿ, ಬೀದಿ ವ್ಯಾಪಾರಿಗಳು ಜೊತೆಗೂಡಿ ಗುಲ್ಬರ್ಗ- ಬೀದರ್ ರಾಜ್ಯ ಹೆದ್ದಾರಿ ಬಂದ್ ಮಾಡುವಂತೆ ಹಾಗೂ ಪಾಲಿಕೆ ಕಚೇರಿ ಎದುರುಗಡೆ ಉಪವಾಸ ಧರಣಿ ಮಾಡುವಂತಹ ಉಗ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ರಾಜ್ಯಾಧ್ಯಕ್ಷ ಜಗನ್ನಾಥ ಸೂರ್ಯವಂಶಿ ಎಚ್ಚರಿಸಿದ್ದಾರೆ. ಜಿಲ್ಲಾಧ್ಯಕ್ಷ ಅಮೃತ ಸಿರನೂರ, ನಗರಾಧ್ಯಕ್ಷ ರವಿ ಒಂಟಿ, ರಿಂಗ್‌ರಸ್ತೆ ಅಧ್ಯಕ್ಷ ಚಂದ್ರಕಾಂತ ಮಡಚೆಟ್ಟಿ, ರಿಂಗ್ ರಸ್ತೆ ಉಪಾಧ್ಯಕ್ಷ ಮಲ್ಲು ಅಂಕಲಗಿ ಮುಂತಾದವರು ಇದ್ದರು.