ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಖರ್ಗೆ, ನಾಯಕ ಗೆಲವು: ಕಾರ್ಯಕರ್ತರ ಸಂಭ್ರಮ

Mainashree
Updated On : 17 May 2014, 10:20 am

ಯಾದಗಿರಿ:  ಗುಲ್ಬರ್ಗ ಹಾಗೂ ರಾಯಚೂರಿನ ಲೋಕಸಭಾ ಅಭ್ಯರ್ಥಿಗಳ ಗೆಲುವು ಸಾಧಿಸಿದ ಸುದ್ದಿ ತಿಳಿದ ತಕ್ಷಣ ಇಲ್ಲಿನ ಕಾಂಗ್ರೆಸ್ ನಾಯಕರಲ್ಲಿ ಸಂಭ್ರಮ ಮನೆ ಮಾಡಿದೆ.  
ಆದರೆ ಕೇಂದ್ರದಲ್ಲಿ ಯುಪಿಎ  ಸರ್ಕಾರ ಅಧಿಕಾರ ಕಳೆದುಕೊಂಡಿದ್ದು, ಕೊಂಚ ನಿರಾಸೆ ಮೂಡಿಸಿದ್ದರೂ ಮಲ್ಲಿಕಾರ್ಜುನ ಖರ್ಗೆ ಮತ್ತು ವಿ. ವಿ. ನಾಯಕರ ಗೆಲುವು ಕಾಂಗ್ರೆಸ್ ಬೆಂಬಲಿಗಗಲ್ಲಿ ಖುಷಿ ಮೂಡಿಸಿದೆ.
ಖರ್ಗೆ ಅವರ ಅಭಿವೃದ್ಧಿ ಕೆಲಸಗಳನ್ನು ನೋಡಿ ಈ ಬಾರಿ ಮತ್ತೆ ಜನ ಅವರನ್ನು ಆರಿಸಿದ್ದಾರೆ. ಬಿ. ವಿ. ನಾಯಕರು ಯುವಕರಾಗಿದ್ದು, ಜನರು ವಿಶ್ವಾಸವಿಟ್ಟು ಈ ಬಾರಿ ಅವರನ್ನು ವಿಜೇತರನ್ನಾಗಿ ಮಾಡಿದ್ದಾರೆ ಎಂಬುದು ಕಾಂಗ್ರೆಸ್ ನಾಯಕರ ಮಾತು.
ಅಭಿವೃದ್ಧಿ ಕಾರ್ಯಕೈಗೊಂಡರೆ ಜನತೆ ಬೆಂಬಲಿಸುತ್ತಾರೆ ಎಂಬುದಕ್ಕೆ ಖರ್ಗೆ ಅವರ ಗೆಲುವೇ ಸಾಕ್ಷಿಯಾಗಿದೆ ಎಂದು ಕೆಪಿಸಿಸಿ ಕಾರ್ಮಿಕ ವಿಭಾಗದ ಕಾರ್ಯದರ್ಶಿ ಸಂತೋಷಕುಮಾರ ನಿರ್ಮಲಕರ್ ಹೇಳಿದ್ದಾರೆ.
ಗುರುಮಠಕಲ್ ವರದಿ: ಸುದೀರ್ಘವಾಗಿ ನಾಲ್ಕು ದಶಕಗಳ ಕಾಲ ರಾಜಕೀಯವಾಗಿ ಒಂದೇ ಪಕ್ಷಕ್ಕೆ ಬೆಂಬಲಿಸಿ ಕಾಂಗ್ರೆಸ್ ಪಕ್ಷದ ಭದ್ರಕೋಟೆ ಎಂದೇ ಹೆಸರಾಗಿರುವ ಗುರುಮಠಕಲ್‌ನಲ್ಲಿ ಇದೀಗ ಮತ್ತೊಮ್ಮೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಬೆಂಬಲ ನೀಡುವುದರ ಮೂಲಕ ಈ ಮಾತನ್ನು ಮತ್ತೊಮ್ಮೆ ನಿರೂಪಿಸಿದೆ.
ಗುಲ್ಬರ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಅತ್ಯಂತ ಪ್ರಾಮುಖ್ಯತೆಯನ್ನು ಪಡೆದ ಹಾಗೂ ದೇಶದ ಗಮನ ಸೆಳೆದಿದ್ದ ಗುರುಮಠಕಲ್ ಮತಕ್ಷೇತ್ರದಲ್ಲಿ ಇದೀಗ ಮತ್ತೆ ಕಾಂಗ್ರೆಸ್ ಪಕ್ಷದ ವಿಜಯ ಕಹಳೆ ಮೊಳಗಿದೆ.
ಕಾಂಗ್ರೆಸ್ ಪಕ್ಷಕ್ಕೆ ಮನ್ನಣೆ: ಸತತವಾಗಿ 1972ರಿಂದ ಕಾಂಗ್ರೆಸ್ ಪಕ್ಷಕ್ಕೆ ಮನ್ನಣೆ ನೀಡುತ್ತ ಬಂದಿರುವ ಕ್ಷೇತ್ರದಲ್ಲಿ ಜಿಲ್ಲಾ ಪಂಚಾಯತಿ, ತಾಲೂಕ ಪಂಚಾಯತಿ ಹಾಗೂ ವಿಧಾನಸಭೆಗೆ ಒಂದೇ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುತ್ತ ಬಂದಿದೆ.
  ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿತ್ತು. ಈ ಬಾರಿಯೂ ಕೂಡ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುವ ಮೂಲಕ ಭದ್ರಕೋಟೆ ಸುಭದ್ರವಾಗಿದೆ ಎನ್ನುವುದನ್ನು ಸಾಬಿತು ಪಡಿಸಿದೆ.
ಸಂಭ್ರಮಾಚರಣೆ: 8 ಬಾರಿ ವಿಧಾನಸಭೆಗೆ, ಒಂದು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದ ಈ ಭಾಗದ ಸೋಲಿಲ್ಲದ ಸರದಾರ ಮಲ್ಲಿಕಾರ್ಜುನ ಖರ್ಗೆಯವರು 16ನೇ ಲೋಕಸಭಾ ಚುನಾವಣೆಯಲ್ಲಿ ಸುಮಾರು 74 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಕ್ಕೆ ಪಕ್ಷದ ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿ ಸಿಹಿ ಹಂಚಿ ಸಂಭ್ರಮ ಅಚರಿಸಿದರು.
ಹುಣಸಗಿ ವರದಿ: ರಾಯಚೂರ ಲೋಕಸಭಾ ಕ್ಷೇತ್ರದಲ್ಲಿ ಬಿ.ವಿ.ನಾಯಕ ಗೆಲುವು ಸಾಧಿಸಿದ ವಿಷಯ ತಿಳಿಯುತ್ತಲೇ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.
ಪಟ್ಟಣದ ಮಹಾಂತಸ್ವಾಮಿ ವೃತ್ತ, ಹೊರಅಗಸಿ ಮತ್ತು ಬಸವೇಶ್ವರ ವೃತ್ತದಲ್ಲಿ ಪಟಾಕಿ ಸಿಡಿಸಿ ಪರಸ್ಪರ ಗುಲಾಲು ಎರಚಿ ಸಿಹಿ ಹಂಚಿ ಸಂಭ್ರಮಿಸಿದರು.
ತಾಲೂಕು ಪಂಚಾಯಿತಿ ಸದಸ್ಯ ಸಿದ್ದಣ್ಣ ಮಲಗಲದಿನ್ನಿ ಮಾತನಾಡಿ, ನಾಯಕ ಅವರು ಜನಪರ ಕಾಳಜಿಯ ನಾಯಕರಾಗಿರುವುದರಿಂದಲೇ ಗೆಲುವು ಸಾಧಿಸಿದ್ದಾರೆ. ಹೈ-ಕ ಭಾಗದ ಗುಲ್ಬರ್ಗ ಮತ್ತು ರಾಯಚೂರು ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದು, ಶಾಸಕರಾದ ರಾಜಾ ವೆಂಕಟಪ್ಪನಾಯಕ ಮತ್ತು ಸಂಸದ ಬಿ.ವಿ. ನಾಯಕ ಅವರಿಂದ ಸುರಪುರ ಕ್ಷೇತ್ರದ ಸಮಗ್ರ ಅಭಿವೃದ್ಧಿಯಾಗಲಿದೆ ಎಂದು ನುಡಿದರು. ಭೀಮಣ್ಣ ಕಟ್ಟಿಮನಿ ಸೇರಿ  ಅನೇಕ ಕಾರ್ಯಕರ್ತರು ಹಾಜರಿದ್ದರು.
ವಜ್ಜಲ ಗ್ರಾಮ: ಸಮೀಪದ ವಜ್ಜಲ ಗ್ರಾಮದಲ್ಲಿ ಯುವಮುಖಂಡ ಶರಣಗೌಡ ಪಾಟೀಲ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಬಸ್ ನಿಲ್ದಾಣ, ಬಸವೇಶ್ವರ ವೃತ್ತದಲ್ಲಿ ಪಟಾಕಿ ಸಿಡಿಸಿ ಗುಲಾಲು ಎರಚಿ ಸಂಭ್ರಮಿಸಿದರು. ಚಂದ್ರಶೇಖರ ಬೋರಮಗುಂಡ ಇತರರು ಇದ್ದರು.
ಶಹಾಪುರ ವರದಿ: ದೇಶದೆಲ್ಲೆಡೆ ಮೋದಿ ಅಲೆ ಕಂಡರೂ ರಾಯಚೂರ ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷ ಉಳಿಸಿಕೊಂಡಿದೆ. ಬಿ.ವಿ. ನಾಯಕ ಗೆಲವು ಸಾಧಿಸಿದ್ದು ಶಹಾಪುರ ಪಟ್ಟಣದಲ್ಲಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿ ಸ್ಥಳೀಯ ಬಸವೇಶ್ವರ ವೃತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.     ಹಿರಿಯ ಮುಖಂಡ ಸಣ್ಣನಿಂಗಣ್ಣ ನಾಯ್ಕೋಡಿ ಮಾತನಾಡಿ, ರಾಯಚೂರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಗ್ಗೆ ಮತದಾರರಲ್ಲಿ ಒಳ್ಳೆ ಅಭಿಪ್ರಾಯ ಕಂಡುಬಂದಿದೆ.    ಮೂಲಭೂತ ಸೌಕರ್ಯಕ್ಕಾಗಿ ಹೆಚ್ಚಿನ ಆದ್ಯತೆ ನೀಡಲಿ ಎಂದು ಆಶಿಸಿದರು.   ಪುರಸಭೆ ಅಧ್ಯಕ್ಷ ರಾಯಪ್ಪಸಾಲಿಮನಿ, ಸಿದ್ದು ಆರಬೋಳ ಉಪಸ್ಥಿತರಿದ್ದರು.
 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement