ಮೊದಲ ನೋಟದಲ್ಲೇ ಸೆಳೆದ NOTA
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಮೇ 16
ಮೇಲ್ಕಂಡವರಲ್ಲಿ ಯಾರೂ ಅಲ್ಲ, ನನ್ ಆಫ್ ದಿ ಅಬೋವ್, NOTA ... ಗುಲ್ಬರ್ಗ ಲೋಕಸಭಾ ಕ್ಷೇತ್ರದಲ್ಲಿ ಮೊದಲ ನೋಟದಲ್ಲೇ ಮತದಾರರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ ಎಂದೇ ಹೇಳಬೇಕು.
ಏಕೆಂದರೆ, ಇದೇ ಮೊದಲ ಬಾರಿಗೆ ಮತದಾರರಿಗೆ ವಿದ್ಯುನ್ಮಾನ ಮತಯಂತ್ರಗಳಲ್ಲೇ ನಕಾರಾತ್ಮಕ ಮತದಾನಕ್ಕೆ ಅವಕಾಶ ದೊರಕಿತ್ತು. ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಪೈಕಿ ಯಾರೂ ಸಮರ್ಥ ಅಭ್ಯರ್ಥಿ ಇಲ್ಲ ಎಂದು ಕಂಡು ಬಂದಲ್ಲಿ ಚುನಾವಣಾ ಆಯೋಗದ 49 ಒ ನಿಯಮ ಬಳಸಿ ಯಾವ ಅಭ್ಯರ್ಥಿಯೂ ಅರ್ಹನಲ್ಲ ಎಂದು ಮತದಾನ ಮಾಡಬಹುದು ಎಂಬ ಅವಕಾಶ ಆಯೋಗವೇ ಮತದಾರರಿಗೆ ನೀಡಿತ್ತು.
ಬೆರಗುಗೊಳಿಸಿದ ನೋಟಾ: ಮೊಟ್ಟ ಮೊದಲ ಬಾರಿಗೆ ಲೋಕಸಭೆ ಚುನಾವಣೆಯಲ್ಲಿ, ಪೂರ್ಣ ಪ್ರಮಾಣದಲ್ಲಿ ನಕರಾತ್ಮಾಕ ಮತದಾನದ ಈ ಅವಕಾಶ ಮತದಾರರಿಗೆ ದೊರಕಿತ್ತು. ಬಿಸಿಲೂರು ಗುಲ್ಬರ್ಗದ ಮತದಾರರು ತಮಗೆ ದೊರಕಿರುವ ಈ ಅವಕಾಶವನ್ನು ಹೆಚ್ಚಿನ ಪ್ರಮಾಣದಲ್ಲೇ ಬಳಸಿಕೊಂಡಿದ್ದಾರೆ. 9, 888 ನೋಟಾ ಮತಗಳು ಚಲಾವಣೆಯಾಗಿರುವುದು ಎಲ್ಲರನ್ನು ಬೆರಗುಗೊಳಿಸಿದೆ.
ಗುರುಮಠಕಲ್ನಲ್ಲಿ ಅತಿ ಹೆಚ್ಚಿನ ನೋಟಾ ಬಳಕೆಯಾದರೆ, ಜೇವರ್ಗಿ ಈ ವಿಚಾರದಲ್ಲಿ 2 ಸ್ಥಾನದಲ್ಲಿದೆ. ಇದರಂತೆಯೇ ಎಲ್ಲಾ 8 ಕ್ಷೇತ್ರಗಳಲ್ಲಿ ನೋಟಾ ಮತಗಳು ಚಲಾವಣೆಯಾಗಿದ್ದರಿಂದ ಜಿಲ್ಲೆಯಲ್ಲಿ ನೋಟಾ ನಾಲ್ಕಂಕಿ ತಲುಪಿದೆ. NOTA
ಗುಲ್ಬರ್ಗದಲ್ಲಿ ನೋಟಾ ಅಸೆಂಬ್ಲಿಯಲ್ಲೇ ಚಲಾವಣೆಯಾಗಿತ್ತು: ಗುಲ್ಬರ್ಗ ಜಿಲ್ಲೆಯಲ್ಲಿ ನೋಟಾ ಅಧಿಕಾರ 2013ರ ಅಸೆಂಬ್ಲಿ ಚುನಾವಣೆಲ್ಲೇ ಪಕ್ಕಾ ಚಲಾವಣೆಯಾಗಿತ್ತು. 13 ಅಸೆಂಬ್ಲಿ ಕ್ಷೇತ್ರಗಳಲ್ಲಿ 400ಕ್ಕೂ ಹೆಚ್ಚು ನಕರಾತ್ಮಕ ಮತದಾನ ದಾಖಲಾಗಿತ್ತು.
ಪ್ರತ್ಯೇಕ ಅರ್ಜಿ ಪಡೆದು ನಕರಾತ್ಮಾಕ ಮತದಾನ ಮಾಡುವ ಪ್ರಕ್ರಿಯೆ ಇದ್ದಾಗಲೇ ಮೂರಂಕಿ ತಲುಪಿದ್ದ ನಕರಾತ್ಮಕ ಮತದಾನಕ್ಕೆ ಈ ಬಾರಿ ಇವಿಎಂನಲ್ಲೇ ಗುಂಡಿ ದೊರಕಿದ್ದರಿಂದ ಬಿಸಿಲೂರು ಮತದಾರ ಅದ್ಹೇಗೆ ಸ್ಪಂದಿಸುತ್ತಾನೋ ಎಂಬುದೇ ಕುತೂಹಲಕಾರಿಯಾಗಿತ್ತು. ಆದರೆ ನೋಟಾ ಗುಂಡಿಗೆ ಗುಲ್ಬರ್ಗ ಮತದಾರ ತುಂಬ ಪರಿಣಾಮಕಾರಿಯಾಗಿಯೇ ಸ್ಪಂದಿಸಿರುವುದು. ಅದು ಪಡೆದ ಮತಗಳ ಸಂಖ್ಯೆಯಿಂದಲೇ ಬಹಿರಂಗವಾಗಿದೆ. ನಕರಾತ್ಮಾಕ ಮತದಾನ ಹಕ್ಕಿನಿಂದಾಗಿ ಚುನಾವಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಬಹುದಾಗಿದ್ದು, ಪಕ್ಷಗಳು ಸಚ್ಚಾರಿತ್ರ್ಯವುಳ್ಳ ಅಭ್ಯರ್ಥಿಗಳನ್ನೇ ಕಣಕ್ಕಿಳಿಸುವ ಒತ್ತಡ ಉಂಟಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆಯಾದರೂ ಪ್ರಸ್ತುತ ರಾಜಕೀಯ ವಿದ್ಯಮಾನಗಳ ಬಗ್ಗೆ ಮೊದಲೇ ಸಿನಿಕನಾಗಿರುವ ಮತದಾರ ನಕರಾತ್ಮಾಕ ಮತದಾನದ ಅವಕಾಶದತ್ತ ಹೆಚ್ಚು ವಾಲಿದರೆ.. ಎಂಬ ಕಳವಳವೂ ತಳ್ಳಿಹಾಕುವಂತಿಲ್ಲ.
ಮರು ಚುನಾವಣೆ ಅಗತ್ಯವಿಲ್ಲ: ಮತದಾರನಿಗೆ ಅಭ್ಯರ್ಥಿಗಳನ್ನು ನಿರಾಕರಿಸುವ ಹಕ್ಕು ಸಿಕ್ಕ ನಂತರ ಆತನ ವಕ್ರನೋಟವೇ ಹೆಚ್ಚಾದರೆ ಚಲಾವಣೆಯಾದ ಮತಗಳಲ್ಲಿ ನೋಟಾ ಪ್ರಮಾಣ ಹೆಚ್ಚಾದರೆ, ಹೇಗೆ ಮೇಲ್ಕಂಡ ಯಾರೂ ಅಲ್ಲ ಎಂಬುದೇ ಬಹುಮತವಾದಲ್ಲಿ ಮುಂದೇನು ಎಂಬ ಪ್ರಶ್ನೆಗಳಿಗೆ ನ್ಯಾಯಾಲಯ ಮತದಾರರ ತೀರ್ಪು ಗೌರವಿಸಬೇಕೆ ಹೊರತು ಮರು ಚುನಾವಣೆ ಅಗತ್ಯವಿಲ್ಲ ಎಂದಿದೆ.
ನೋಟಾ (ಃಕಖಿಆ) ಇತ್ತೀಚೆಗಷ್ಟೇ ಕಾನೂನು ಸ್ವರೂಪ ಪಡೆದು, ಲೋಕ ಸಮರದಲ್ಲಿ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳ್ಳುತ್ತಿರುವುದರಿಂದ ಇದಕ್ಕೆ ಗುಲ್ಬರ್ಗ ವ್ಯಾಪ್ತಿಯಲ್ಲಂತೂ ಮತದಾರ ಪ್ರಭು ಮೊದಲ ಚುನಾವಣೆಯಲ್ಲೇ ಪಕ್ಕಾ ಸ್ಪಂದಿಸಿರುವುದು ಸುದ್ದಿಗೆ ಗ್ರಾಸವಾಗಿದೆ.
ನೋಟಾ... ಸುತ್ತಮುತ್ತ: ಕಣದಲ್ಲಿರುವವರ ಪೈಕಿ ಯಾರೂ ನನಗಿಷ್ಟವಿಲ್ಲ ಎಂದು ನೆಪ ಮುಂದೊಡ್ಡಿ ಮತದಾರ ಮತಗಟ್ಟೆಗೆ ಬಾರದೆ ಇರುವಂತಿಲ್ಲ, ಕಣದಲ್ಲಿರುವವರ ಪೈಕಿ ಯಾರೂ ತಮಗಿಷ್ಟವಿಲ್ಲ ಎಂಬ ಆಯ್ಕೆ ಗುಂಡಿ ಅದುಮುವ ಅವಕಾಶ ಲೋಕಸಭೆಯಲ್ಲಿ ಇದೇ ಮೊದಲ ಬಾರಿಗೆ ದೊರಕಿದೆ.
ಇನ್ಯಾಕೆ ಮತಗಟ್ಟೆಯಿಂದ ದೂರ ಇರಬೇಕು. ಅಭಿಮತ ತಿಳಿಸಿಬಿಟ್ಟರಾಯ್ತು ಎಂದು ಜಿಲ್ಲೆಯಲ್ಲಿ ಮತದಾರರು ಬಂದಂತಿದೆ. ಈ ಬಾರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶೇ. 8.07 ರಷ್ಟು ಮತದಾನ ಹೆಚ್ಚಾಗಿತ್ತು. ನೋಟಾ ಬಳಕೆ ಪ್ರಮಾಣ ನೋಡಿದರೆ ಅಧಿಕ ಮತದಾನ ನೋಟಾದಲ್ಲೇ ಬಳಕೆಯಾಯ್ತೆ ಎಂಬ ಚರ್ಚೆಗಳು ಸಾಗಿವೆ. ಕಣದಲ್ಲಿರುವ ಅಭ್ಯರ್ಥಿಗಳಿಗೆ ಮತ ಹಾಕಲು ಇಷ್ಟವಿಲ್ಲದಿದ್ದರೆ ವಿದ್ಯುನ್ಮಾನ ಯಂತ್ರದಲ್ಲಿ ಅಳವಡಿಸಲಾಗಿರುವ ಪ್ರತ್ಯೇಕ ಬಟನ್ ಒತ್ತಿದರೆ ಸಾಕು ನಿಮ್ಮ ಮತ ಯಾರಿಗೂ ಕೂಡ ಚಲಾವಣೆಯಾಗುವುದಿಲ್ಲ.
ಕುತೂಹಲಕಾರಿ ವಿಚಾರವೆಂದರೆ ಕರ್ನಾಟಕದಲ್ಲಿ ಕಳೆದ 2013ರ ಮೇ ತಿಂಗಳಲ್ಲಿ ನಡೆದ ಅಸೆಂಬ್ಲಿ ಚುನಾವಣೆಯಲ್ಲಿಯೇ 49 ಒ ನಿಯಮ ಬಳಕೆ ಮಾಡಲು ಮತದಾರರಿಗೆ ಅವಕಾಶ ನೀಡಲಾಗಿತ್ತು.
ಆದರೆ, ಅರ್ಜಿ ನಮೂನೆ ಗೊಂದಲದ ಕಾರಣ ಅನೇಕ ಮತದಾರರು ಇಷ್ಟವಿಲ್ಲದಿದ್ದರೂ ಕಡ್ಡಾಯ ಮತದಾನ ಮಾಡಬೇಕಾಯಿತು. ಈ ಬಾರಿ ಮತಯಂತ್ರದಲ್ಲೇ ನೋಟಾ ಬಟನ್ ಸೌಕರ್ಯ ಇರುವುದರಿಂದ ಮತದಾರರಿಗೆ ಈ ಹಕ್ಕು ಚಲಾವಣೆ ಸರಳವಾಯ್ತು.
ಶೇಷಮೂರ್ತಿ ಅವಧಾನಿ