ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

5,71,200 ಹೆಕ್ಟೇರ್ ಪ್ರದೇಶ ಬಿತ್ತನೆ ಗುರಿ

Lingaraj Badiger
Updated On : 19 May 2014, 11:12 am

ಕ.ಪ್ರ. ವಾರ್ತೆ, ಗುಲ್ಬರ್ಗ, ಮೇ 18
ಇಲ್ಲಿನ ಕೃಷಿ ಇಲಾಖೆ 2014-15ನೇ ಸಾಲಿನ ಮುಂಗಾರು ಹಂಗಾಮಿಗೆ 5,71,200 ಹೆಕ್ಟೇರ್ ಪ್ರದೇಶ ಬಿತ್ತನೆ ಕ್ಷೇತ್ರದ ಗುರಿ ಹೊಂದಿದೆ. ಸುಮಾರು 1,86,143 ಮೆಟ್ರಿಕ್ ಟನ್ ರಸಗೊಬ್ಬರ ಮತ್ತು 75,568 ಕ್ವಿಂಟಲ್ ಬಿತ್ತನೆ ಬೀಜಗಳ ಬೇಡಿಕೆಯಿದ್ದು, ರೈತರಿಗೆ ರಸಗೊಬ್ಬರ ಹಾಗೂ ಬಿತ್ತನೆ ಬೀಜ ಸಮಯಕ್ಕೆ ಸರಿಯಾಗಿ ಪೂರೈಕೆಗೆ ಅಗತ್ಯವಿರುವ ಎಲ್ಲ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕೃಷಿ ಇಲಾಖೆ ಮೂಲಗಲು ಹೇಳಿವೆ.
ರೈತರಿಗೆ ಅವಶ್ಯವಿರುವ ಬಿತ್ತನೆ ಬೀಜೋಪಚಾರ ಔಷಧಗಳು, ಲಘು ಪೋಷಕಾಂಶಗಳನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ಹಾಗೂ ಗುಚ್ಛ ಗ್ರಾಮ ಮಟ್ಟದಲ್ಲಿರುವ ಗೋದಾಮುಗಳಲ್ಲಿ ದಾಸ್ತಾನಿರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ.
ಮೇ 19ರಿಂದ ಮಾಹಿತಿ ಆಂದೋಲನ: ಜಿಲ್ಲೆಯ ಕೃಷಿ ಇಲಾಖೆಯಿಂದ ಮೇ 19ರಿಂದ ಮೇ 24ರವರೆಗೂ ಪ್ರತಿ ಹಳ್ಳಿಗೆ ಕೃಷಿ ಮಾಹಿತಿ ಆಂದೋಲನ ಕಾರ್ಯಕ್ರಮವನ್ನು ರೂಪಿಸಲಾಗಿದೆ. ರೈತರಿಗೆ ಕೃಷಿ ಇಲಾಖೆಯಿಂದ ದೊರೆಯುವ ಸೌಲಭ್ಯಗಳು ಮತ್ತು ತಾಂತ್ರಿಕತೆಗಳ ಬಗ್ಗೆ ಅರಿವು ಮೂಡಿಸಲು ಕೃಷಿ ಮಾಹಿತಿ ಸಂಚಾರಿ ವಾಹಿನಿ ಮೂಲಕ ಕೃಷಿ ಇಲಾಖೆ ಅಧಿಕಾರಿಗಳು, ರೈತ ಅನುವುಗಾರರ ಮೂಲಕ ಪ್ರತಿ ಗ್ರಾಮದಲ್ಲಿ ಮೆರವಣಿಗೆ, ಜಾಥಾ ಮತ್ತು ಗ್ರಾಮ ಮಟ್ಟದ ತರಬೇತಿ ಕಾರ್ಯಕ್ರಮಗಳನ್ನು ದಿನವೊಂದಕ್ಕೆ 5-6 ಗ್ರಾಮಗಳಲ್ಲಿ ಹಮ್ಮಿಕೊಳ್ಳಲಾಗುವುದು. ಈ ಕೃಷಿ ಮಾಹಿತಿ ಆಂದೋಲನದಲ್ಲಿ ರೈತ ಬಾಂಧವರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಲಾಭ ಪಡೆಯಲು ವಿನಂತಿಸಿದೆ.
86 ಬೀಜೋಪಚಾರ ಕೇಂದ್ರ: ಜಿಲ್ಲೆಯಾದ್ಯಂತ ಕೃಷಿ ಇಲಾಖೆಯಿಂದ ಒಟ್ಟು 86 ಬೀಜೋಪಚಾರ ಕೇಂದ್ರಗಳನ್ನು(32 ರೈತ ಸಂಪರ್ಕ ಕೇಂದ್ರಗಳಲ್ಲಿ ಮತ್ತು 54 ಗುಚ್ಛ ಗ್ರಾಮ ಮಟ್ಟದಲ್ಲಿ) ತೆರೆಯಲಾಗಿದೆ. ರೈತರು ಬೀಜೋಪಚಾರ ಕೇಂದ್ರಗಳಲ್ಲಿ ಬೀಜೋಪಚಾರ ಮಾಡಿಸಿ ಬಿತ್ತುವುದು ಮತ್ತು ಬೀಜೋಪಚಾರ ಕೇಂದ್ರಗಳಿರದ ಗ್ರಾಮಗಳಲ್ಲಿನ ರೈತರು ತಮ್ಮ ಸಮಿಪದ ರೈತ ಸಂಪರ್ಕ ಕೇಂದ್ರಗಳಲ್ಲಿ ಔಷಧಿಗಳನ್ನು ಪಡೆದುಕೊಂಡು ಕಡ್ಡಾಯವಾಗಿ ಬೀಜೋಪಚಾರ ಮಾಡಿಸಿದರೆ ಮುಂಬರುವ ರೋಗ ಮತ್ತು ಪೀಡೆಗಳನ್ನು ತಡೆಯಬಹುದಾಗಿದೆ.
ಈಗಾಗಲೇ ಜಿಲ್ಲೆಯ ಎಲ್ಲ ತಾಲೂಕಿನ ಸ್ಥಳೀಯ(ಕಸಬಾ) ರೈತ ಸಂಪರ್ಕ ಕೇಂದ್ರಗಳಲ್ಲಿ ಕೆ- ಕಿಸಾನ್ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ಸ್ಥಳಿಯ(ಕಸಬಾ) ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರು ನೋಂದಣಿ ಅರ್ಜಿ ಪಡೆದುಕೊಳ್ಳಬಹುದು.
ಕೃಷಿ ಇಲಾಖೆಯ ಅಧಿಕಾರಿಗಳು ಮತ್ತು ತಮ್ಮ ಗ್ರಾಮದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅನುವುಗಾರರು ಮಾಹಿತಿ ಸಂಗ್ರಹಣೆಗೆ ಬಂದಾಗ ಅಗತ್ಯವಿರುವ ಮಾಹಿತಿ ನೀಡಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಕೃಷಿ ಇಲಾಖೆ ರೈತರಿಗೆ ಕೋರಿದೆ.

ಕೃಷಿ ಮಾಹಿತಿ ಜಾಗೃತಿ ಇಂದಿನಿಂದ
ಆಳಂದ: ತಾಲೂಕಿನ ಖಜೂರಿ, ನಿಂಬರಗಾ, ನರೋಣಾ, ಮಾದನಹಿಪ್ಪರಗಾ ಮತ್ತು ಆಳಂದ ರೈತ ಸಂಪರ್ಕ ವಲಯದಲ್ಲಿ ಏಕಕಾಲಕ್ಕೆ ಮೇ 19ರಿಂದ 24ರವರೆಗೆ ಕೃಷಿ ಮಾಹಿತಿ ಆಂದೋಲನ ಜಾಥಾ ಪ್ರಚಾರ ಕಾರ್ಯಕ್ರಮ ನಡೆಯಲಿದೆ. ಈ ಕುರಿತು ಪ್ರಕಟಣೆ ನೀಡಿರುವ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಶಶಾಂಕ ಶಹಾ ಅವರು, ತಾಲೂಕಿನ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಏಕಕಾಲಕ್ಕೆ ಕೃಷಿ ಆಂದೋಲನ ಪ್ರಚಾರ ನಡೆಸಲಾಗುತ್ತಿದೆ. ಆಯಾ ರೈತ ಸಂಪರ್ಕ ಕೇಂದ್ರಗಳ ವ್ಯಾಪ್ತಿಯ ಗ್ರಾಮ ಪಂಚಾಯತಗಳ ಒಳಗೊಂಡು ಗ್ರಾಮಗಳಲ್ಲಿ ಸದರಿ ಆಂದೋಲನ ನಡೆಸಲಾಗುವುದು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement