ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕೈಗೆಟುಕದ ಎಳನೀರು

Lingaraj Badiger
Updated On : 19 May 2014, 11:13 am

ಕನ್ನಡಪ್ರಭ ವಾರ್ತೆ, ಯಾದಗಿರಿ, ಮೇ 18
ಬಿಸಿಲು ಹೆಚ್ಚಾಗುತ್ತಿದ್ದಂತೆ ಜನತೆ ತಂಪು ಪಾನೀಯಗಳಿಗೆ ಮೊರೆ ಹೋಗುವುದು ಸಾಮಾನ್ಯ. ಅಂತೆಯೇ ನಗರದ ವಿವಿಧೆಡೆ ಎಳನೀರು, ಮೋಸಂಬಿ ಜ್ಯೂಸ್, ಮಜ್ಜಿಗೆ ಸೇರಿದಂತೆ ವಿವಿಧ ತಂಪು ಪಾನೀಯಗಳ ಮಳಿಗೆಗಳು ಪ್ರಾರಂಭವಾಗುತ್ತವೆ. ಆದರೆ ಈ ಸಲ ಕಳೆದ ಬೇಸಿಗೆಗಿಂತಲೂ ಬಿಸಿಲಿನ ತಾಪ ಹೆಚ್ಚಾಗಿದೆ. ಇದರಿಂದಾಗಿ ಎಳನೀರಿನ ಬೆಲೆಯಲ್ಲಿ ಹೆಚ್ಚಳವಾಗಿದ್ದು, ಜನಸಾಮಾನ್ಯರಿಗೆ ಕೈಗೆಟುಕದಂತಾಗಿದೆ.
  ರಸಾಯನಿಕ ಮಿಶ್ರಣ ಮಾಡಿದ ತಂಪು ಪಾನೀಯಕ್ಕಿಂತ ಎಳನೀರು ಆರೋಗ್ಯಕ್ಕೆ ಒಳ್ಳೆಯದು. ಹೀಗಾಗಿ ಕಳೆದ ನಾಲ್ಕೈದು ವರ್ಷದಿಂದ ಎಳನೀರಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಜಿಲ್ಲೆಯಲ್ಲಿ ತೆಂಗಿನ ಮರ ಇಲ್ಲದ್ದರಿಂದ ದಕ್ಷಿಣ ಕರ್ನಾಟದ ಕೆಲ ಜಿಲ್ಲೆಗಳಿಂದ ನಗರಕ್ಕೆ ಎಳನೀರನ್ನು ತಂದು ಮಾರಾಟ ಮಾಡಲಾಗುತ್ತದೆ.
  ಇತರ ದಿನಗಳಲ್ಲಿ 15 ರು.ಗೆ ಒಂದು ಎಳನೀರು ಸಿಗುತ್ತಿದ್ದರೆ, ಪ್ರಸಕ್ತ ದಿನದಲ್ಲಿ 22 ರಿಂದ 25ಕ್ಕೆ ಒಂದರಂತೆ ಎಳನೀರು ಮಾರಾಟವಾಗುತ್ತಿದೆ. ಇದರಿಂದ ಜನತೆಯ ಜೇಬಿಗೆ ಭಾರವಾಗಿದೆ.   
 ಎಳೆ ನೀರು ರೋಗಿಗಳಿಗೆ ಅಮೃತವಿದ್ದಂತೆ. ಅದರಲ್ಲೂ ಕರುಳು ಬೇನೆ, ವಾಂತಿ ಭೇದಿಗೆ ದಿನಕ್ಕೆ ಏನಿಲ್ಲವೆಂದರೂ ಎರಡು-ಮೂರು ಎಳೆ ನೀರು ಕುಡಿಸಲು ವೈದ್ಯರು ಸೂಚಿಸುತ್ತಾರೆ. ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿಂದ ಅಶುದ್ಧ ನೀರು ಸೇವನೆಯಿಂದ ವಾಂತಿಭೇದಿ ಪ್ರಕರಣಗಳು ಹೆಚ್ಚು. ಹೀಗಾಗಿ ಬಡ ಜನರು ಹೆಚ್ಚಿನ ಬೆಲೆ ತೆತ್ತು ರೋಗಿಗಳಿಗೆ ಎಳನೀರು ಕುಡಿಸುವುದು ಅನಿವಾರ್ಯವಾಗಿದೆ.
ಗ್ರಾಮೀಣರ ಗೋಳು: 'ಏನು ಮಾಡೋದ್ರೀ. ಔಷಧಕ್ಕಿಂತ ಎಳನೀರಿನ ಬೆಲೆ ಹೆಚ್ಚಾಗಿದೆ. ದಿನಕ್ಕೆ ನೂರು ರುಪಾಯಿ ಕೂಲಿ ಮಾಡುವ ನಮ್ಮಂತಹ ಬಡ ಜನರು ಈ ಬೆಲೆ ನೀಡಿ ಎಳನೀರು ಖರೀದಿಸಲು ಆಗುತ್ತಿಲ್ಲ. ಆದರೂ ದಿನಕ್ಕೆ ಒಂದಾದರೂ ತಂದು ಕುಡಿಸುತ್ತಿದ್ದೇವೆ' ಅಂತ ಗ್ರಾಮೀಣ ಜನರ ತಮ್ಮ ಗೋಳನ್ನು ತೋಡಿಕೊಳ್ಳುತ್ತಾರೆ.
ಮಾರಾಟಗಾರರ ಅಳಲು: 'ಹೊರಜಿಲ್ಲೆಗಳಿಂದ ತರಿಸುವುದರಿಂದ ಸಾರಿಗೆ ವೆಚ್ಚ ಬಹಳವಾಗುತ್ತದೆ. ಒಂದು ಕಾಯಿ ಸುಮಾರು 15ಕ್ಕೆ ನಮಗೆ ದೊರೆಯುತ್ತದೆ. ಹೀಗಾಗಿ ನಾವು ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಅನಿವಾರ್ಯ' ಎಂದು ಎಳನೀರು ಮಾರಾಟ ಮಾಡುವ ದೇವಿಂದ್ರಪ್ಪ ಹೇಳುತ್ತಾನೆ.  
ಹಣ್ಣಿನ ಪಾನೀಯಗಳ ಬೆಲೆಯೂ ಗಗನಕ್ಕೆ: ಜಿಲ್ಲೆಯಲ್ಲಿ ತೋಟಗಾರಿಕೆ ಇಲ್ಲದ್ದರಿಂದ ಹಣ್ಣುಗಳು ಸಹ ಬೇರೆ ಜಿಲ್ಲೆಯಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಹೀಗಾಗಿ ಅವೂ ಸಹ ಹೆಚ್ಚಿನ ಬೆಲೆ ಹೊಂದಿವೆ.  ಉತ್ತಮ ಸೇಬು 20 ರೂ. ನಿಂದ 25 ರೂ.ಗೆ ಒಂದು, ಸಪೋಟಾ 40 ರೂ.ಗೆ ಒಂದು ಕೆಜಿ, 60 ರಿಂದ 70 ರೂ.ಗೆ ಒಂದು ಕೇಜಿ ದ್ರಾಕ್ಷಿ ಮಾರಾಟ ಮಾಡಲಾಗುತ್ತಿದೆ. ಹೀಗಾಗಿ ಹಣ್ಣಿನ ಪಾನೀಯಗಳ ಬೆಲೆಯೂ ಹೆಚ್ಚು.  
  ಇದರಿಂದ ಶುದ್ಧವಾದ ಎಳನೀರಿನತ್ತ ಜನತೆ ಮೊರೆ ಹೋಗುವುದು ಸಾಮಾನ್ಯ. ಆದರೆ ಬೆಲೆ ಹೆಚ್ಚಳದ ಬಿಸಿಯಿಂದ ಜನಸಾಮಾನ್ಯರಿಗೆ ತೊಂದರೆ ಆಗುತ್ತಿದೆ. ಎಳನೀರು ಮಾರಾಟ ಮಾಡುವವರಿಗಂತೂ ಈ ಬೇಸಿಗೆಯಲ್ಲಿ ಸುಗ್ಗಿ ಎಂದರೆ ತಪ್ಪಾಗಲಿಕ್ಕಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement