ರಸ್ತೆ ಸಂಚಾರಕ್ಕೆ ಸಂಚಕಾರ
ಯಾದಗಿರಿ: ತಾಲೂಕಿನ ಅಬ್ಬೆತುಮಕೂರ ಗ್ರಾಮದಲ್ಲಿ ಒಳಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿದ್ದು ಸಾರ್ವಜನರಿಗೆ ಬಹಳಷ್ಟು ತೊಂದರೆಯಾಗುತ್ತಿದೆ.
ಇಲ್ಲಿ ಸೂಕ್ತ ಒಳಚರಂಡಿ ವ್ಯವಸ್ಥೆಯೇ ಇಲ್ಲ. ಇದರಿಂದಾಗಿ ಗ್ರಾಮಸ್ಥರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ನೀರು ರಸ್ತೆ ಮೇಲೆ ಹರಿಯುತ್ತಿರುವ ಪರಿಣಾಮ ರಸ್ತೆ ಸಂಪೂರ್ಣವಾಗಿ ಕೆಸರುಮಯವಾಗಿದೆ. ಒಳಚರಂಡಿ ಬಗ್ಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಿಷ್ಕಾಳಜಿ ತೋರಿಸಿದ್ದಾರೆ. ಇದ್ದರಿಂದಾಗಿಯೇ ಗ್ರಾಮಸ್ಥರು ತೊಂದರೆ ಎದುರಿಸುವಂತಹ ಪರಿಸ್ಥಿತಿ ಒದಗಿ ಬಂದಿದೆ.
ಹಾಳಾಗಿರುವ ಸಿಸಿ ರಸ್ತೆ: ಗ್ರಾಮದ ಒಳಗಿನ ಸಿಸಿ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿವೆ. ತಗ್ಗುಗಳು ಬಿದ್ದಿವೆ. ದುರಸ್ತಿ ಕೂಡ ಮಾಡಿಲ್ಲ. ಹೀಗಾಗಿ ಗ್ರಾಮಸ್ಥರಿಗೆ ಸರ್ಕಾರಿ ಸೌಲಭ್ಯಗಳು ಗಗನಕುಸುಮವಾಗಿದೆ. ಮನೆಯ ಮುಂಭಾಗದಲ್ಲಿ ರಸ್ತೆಗಳ ಮೇಲೆ ಚರಂಡಿ ನೀರು ನಿಂತಿದೆ. ಈ ನೀರು ಗ್ರಾಮದ ನಲ್ಲಿ ನೀರಿನೊಂದಿಗೆ ಸೇರುವ ಭೀತಿ ಗ್ರಾಮಸ್ಥರಿಗೆ ಎದುರಾಗಿದೆ. ಹೀಗಾಗಿ ತುರ್ತಾಗಿ ಅಧಿಕಾರಿಗಳು ಅಗತ್ಯ ಕ್ರಮಕೈಗೊಳಬೇಕು ಎಂದು ಜಿಲ್ಲಾ ಟೋಕರಿ ಕೋಲಿ ಕಬ್ಬಲಿಗ ಸಮಾಜ ಅಧ್ಯಕ್ಷ ಉಮೇಶ ಮುದ್ನಾಳ ಆಗ್ರಹಿಸಿದ್ದಾರೆ.
ದೇಶಕ್ಕೆ ಸ್ವಾತಂತ್ರ್ಯ ಬಂದು ಆರು ದಶಕ ಕಳೆದರೂ ಜನತೆ ಇನ್ನೂ ಮೂಲ ಸೌಲಭ್ಯಗಳಿಗಾಗಿ ಪರದಾಡುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ. ಇದಕ್ಕೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿಷ್ಕಾಳಜಿಯೇ ಕಾರಣವಾಗಿದೆ ಎಂದು ದೂರಿದ ಅವರು, ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.