5 ರೌಡಿಗಳ ವಿರುದ್ಧ 'ಗೂಂಡಾ' ಪ್ರಯೋಗ, 3 ತಿಂಗಳು ಜೈಲು
ಕ.ಪ್ರ. ವಾರ್ತೆ, ಗುಲ್ಬರ್ಗ, ಮೇ 19
ಜಿಲ್ಲೆಯ ಐದು ಕುಖ್ಯಾತ ರೌಡಿಗಳ ಮೇಲೆ ಗೂಂಡಾ ಕಾಯ್ದೆ ಪ್ರಯೋಗಿಸಲಾಗಿದೆ. ಈ ಕಾಯ್ದೆ ಅಡಿಯಲ್ಲಿ ಬಂಧಿಸಲು ಮಾನ್ಯ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ವಿವಿಧ ಠಾಣೆಗಳಲ್ಲಿ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿ ಅಶಾಂತಿ, ಭಯದ ವಾತಾವರಣವುಂಟು ಮಾಡುತ್ತಿದ್ದ ಹಾಗೂ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುವಂತಹ ಕೃತ್ಯದಲ್ಲಿ ಭಾಗಿಯಾಗಿರುವ ಐವರು ಕುಖ್ಯಾತ ರೌಡಿ ಶೀಟರುಗಳ ಮೇಲೆ ಗೂಂಡಾ ಕಾಯ್ದೆ ಪ್ರಯೋಗಿಸಲಾಗಿದ್ದು, ಅವರೆಲ್ಲರನ್ನು ಗೂಂಡಾ ಕಾಯ್ದೆ ಅಡಿಯಲ್ಲಿ ಬಂಧಿಸಿ ವಿವಿಧ ಜೈಲುಗಳಿಗೆ ಕಳುಹಿಸಲು ಡಾ. ಪ್ರಸಾದ್ ಸೂಚನೆ ಆದೇಶ ಹೊರಡಿಸಿದ್ದಾರೆ.
ಕಾರಾಗೃಹಕ್ಕೆ: ಈ ಐವರು ಆರೋಪಿಗಳನ್ನು ಮೂರು ತಿಂಗಳುಗಳ ಕಾಲಾವಧಿವರೆಗೆ ಗೂಂಡಾ ಕಾಯ್ದೆ ಅಡಿಯಲ್ಲಿ ಬಂಧಿಸುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದು, ಪೊಲೀಸರು ಇವರನ್ನೆಲ್ಲ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಗೂಂಡಾ ಕಾಯ್ದೆ ಅಡಿಯಲ್ಲಿ ಬಂಧಿಸಿ ಬೆಳಗಾವಿ, ಗುಲ್ಬರ್ಗ, ಬಿಜಾಪುರ, ಬಳ್ಳಾರಿ ಕೇಂದ್ರ ಕಾರಾಗೃಹಗಳಿಗೆ ರವಾನಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ಕಚೇರಿಯ ಪ್ರಕಟಣೆ ತಿಳಿಸಿದೆ.