ರೈತರಿಗೆ ಸಕಾಲಕ್ಕೆ ಕೃಷಿ ಸೌಲಭ್ಯ ತಲುಪಿಸಿ
ಕ.ಪ್ರ. ವಾರ್ತೆ, ಆಳಂದ, ಮೇ 19
ಸರ್ಕಾರ ರೈತರಿಗಾಗಿ ನೀಡುತ್ತಿರುವ ಸಬ್ಸಿಡಿ ಸೇರಿದಂತೆ ಕೃಷಿ ಸೌಲಭ್ಯಗಳನ್ನು ಸಕಾಲಕ್ಕೆ ಒದಗಿಸಲು ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ತಾಪಂ ಮಾಜಿ ಅಧ್ಯಕ್ಷ ಮೋಹನಗೌಡ ಪಾಟೀಲ್ ಹಾಗೂ ಯುವ ಮುಖಂಡ ಗುರುಶರಣ ಪಾಟೀಲ್ ಒತ್ತಾಯಿಸಿದರು.
ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಆವರಣದಲ್ಲಿ ಸೋಮವಾರ ಕೃಷಿ ಮಾಹಿತಿ ಆಂದೋಲನ ಪ್ರಚಾರ ಜಾಥಾವನ್ನು ಜಂಟಿಯಾಗಿ ಉದ್ಘಾಟಿಸಿ ಮಾತನಾಡಿದರು.
ರೈತರು ಸಂಕಷ್ಟದಲ್ಲಿದ್ದಾರೆ: ರೈತರು ಆಲಿಕಲ್ಲು ಮಳೆ ಹೊಡೆತಕ್ಕೆ ಬೆಳೆ ತುತ್ತಾಗಿ ಸಂಕಷ್ಟದಲ್ಲಿದ್ದಾರೆ. ಇಂಥ ಹೊತ್ತಿನಲ್ಲಿ ಸರ್ಕಾರ ನೀಡುತ್ತಿರುವ ಬೀಜ, ಗೊಬ್ಬರ ಮತ್ತು ಪರಿಕರಗಳನ್ನು ಸಕಾಲಕ್ಕೆ ತಲುಪಿಸುವ ಕಾರ್ಯ ನಡೆಯಬೇಕು ಎಂದು ಒತ್ತಾಯಿಸಿದರು.
ದಾಖಲೆಗಳ ಹೆಸರಿನಲ್ಲಿ ರೈತ ಸಂಪರ್ಕ ಕಚೇರಿಗೆ ಅಲೆಯುವಂತೆ ಮಾಡದೆ ನಿಗದಿತ ಸಮಯಕ್ಕೆ ಅರ್ಹರಿಗೆ ಯೋಜನೆಗಳ ಲಾಭ ಮುಟ್ಟಿಸಬೇಕು ಎಂದರು.
ಆರ್ಥಿಕವಾಗಿ ಸಬಲರಾಗಬೇಕು: ರೈತರು ಸಹ ಹೆಚ್ಚಿನ ಕಾಳಜಿ ವಹಿಸಿ ಇಲಾಖೆಯ ತಾಂತ್ರಿಕ ಅಧಿಕಾರಿಗಳು ಹಂಗಾಮಿನ ಕೃಷಿ ಕುರಿತು ನೀಡುವ ಮಾಹಿತಿ ಪಡೆದು ಕಡಿಮೆ ಖರ್ಚು ಮಾಡಿ ಹೆಚ್ಚಿನ ಇಳುವರಿಗೆ ಪ್ರಯತ್ನಿಸಿ ಆರ್ಥಿಕವಾಗಿ ಸಬಲರಾಗಬೇಕು ಎಂದು ಹೇಳಿದರು.
ಸಹಾಯಕ ಕೃಷಿ ನಿರ್ದೇಶಕ ಶಶಾಂಕ ಶಹಾ, ನೊಡಲ್ ಅಧಿಕಾರಿ ಜಿ. ಜಾಲಿಂದರ್, ಪುರಸಭೆ ಮಾಜಿ ಅಧ್ಯಕ್ಷ ವಿಠ್ಠಲರಾವ್ ಪಾಟೀಲ್, ಕೃಷಿ ಅಧಿಕಾರಿ ಮಾಣಿಕ ಜಾಧವ ಇನ್ನಿತರ ರೈತ ಮುಖಂಡರು ಉಪಸ್ಥಿತರಿದ್ದರು.
ನಿಂಬರಗಾ ರೈತ ಸಂಪರ್ಕ ಕೇಂದ್ರದಲ್ಲಿ ಜಿಪಂ. ಸದಸ್ಯ ಸಿದ್ದರಾಮ ಪ್ಯಾಟಿ ಕೃಷಿ ಪ್ರಚಾರ ಜಾಥಾಕ್ಕೆ ಚಾಲನೆ ನೀಡಿದರು.
ಖಜೂರಿ, ನರೋಣಾ ಮತ್ತು ಮಾದನಹಿಪ್ಪರಗಾ ರೈತ ಸಂಪರ್ಕ ಕೇಂದ್ರಗಳಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಒಂದು ವಾರ ತಾಲೂಕಿನಾದ್ಯಂತ ಪ್ರಚಾರ ಜಾಥಾ ನಡೆಯಲಿದೆ.