ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಜಿಲ್ಲೆಯ 24.77 ಲಕ್ಷ ಜನರಿಗೆ ಡಿಇಸಿ ವಿತರಿಸುವ ಗುರಿ: ಸಿಇಒ

Lingaraj Badiger
Updated On : 21 May 2014, 11:17 am

ಕ.ಪ್ರ. ವಾರ್ತೆ, ಗುಲ್ಬರ್ಗ, ಮೇ 20
ರಾಷ್ಟ್ರೀಯ ಆನೆಕಾಲು ರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಗುಲ್ಬರ್ಗ ಜಿಲ್ಲೆಯ ಎರಡು ವರ್ಷ ಮೇಲ್ಪಟ್ಟ ವಯೋವಾನದ ಅರ್ಹ ಒಟ್ಟು 24,77,757 ಜನರಿಗೆ ಜೂನ್ 5ರಿಂದ ಮೂರು ದಿನಗಳ ಕಾಲ ಸಾಮೂಹಿಕವಾಗಿ ಡಿಇಸಿ ಮಾತ್ರೆಗಳನ್ನು ವಿತರಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಿ.ಎಚ್.ಎಂ. ಕುಮಾರ ತಿಳಿಸಿದರು.  
ನಗರದಲ್ಲಿ ಮಂಗಳವಾರ ಸಾಮೂಹಿಕ ಮಾತ್ರೆ ವಿತರಿಸುವ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಜಿಲ್ಲಾದ್ಯಂತ ಆನೆಕಾಲು ರೋಗವನ್ನು ನಿರ್ಮೂಲನೆ ಮಾಡಲು 10ನೇ ಸುತ್ತಿನ  ಸಾಮೂಹಿಕ ಔಷಧ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದಕ್ಕಾಗಿ 61,82,497 ಡಿಇಸಿ (ಡೈಈಥೈಲ್ ಕಾರ್ಬಮೇಜಿನ್ ಸಿಟ್ರೇಟ್) ಹಾಗೂ 24,75,181 ಅಲ್ಬೆಂಡಾಜೋಲ್ (ಆಟಛಿಜಟಿಜಛಣ್ಟಟಜ) ಮಾತ್ರೆಗಳ ಅವಶ್ಯಕತೆ ಇದೆ. ಈ ಔಷಧಗಳನ್ನು ಸಮರ್ಪಕವಾಗಿ ದಾಸ್ತಾನು ಮಾಡಿಕೊಳ್ಳುವಂತೆ ತಿಳಿಸಿದರು.
ಶೇ. 100 ಗುರಿ ಸಾಧನೆಗೆ ಕರೆ: ಡಿಇಸಿ ಮಾತ್ರೆಗಳನ್ನು ವಿತರಿಸಲು ಒಟ್ಟು 9,818 ಔಷಧ ವಿತರಕರ ಹಾಗೂ 991 ಮೇಲ್ವಿಚಾರಕರ ಅವಶ್ಯವಿದ್ದು, ಇದರಲ್ಲಿ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಹಾಯಕರು ಕಡ್ಡಾಯವಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಶೇ.100 ಗುರಿ ಸಾಧಿಸಿ ಯಶಸ್ವಿಗೊಳಿಸಬೇಕೆಂದು ಸೂಚಿಸಿದರು.
ಜಿಲ್ಲೆಯ 4,91,063 ಮನೆಗಳಲ್ಲಿ ವಾಸಿಸುವ ಕುಟುಂಬದ ಸದಸ್ಯರಿಗೆ ಡಿಇಸಿ ಮಾತ್ರೆಗಳ ವಿತರಣೆಗಾಗಿ 1,343 ಆಶಾ ಕಾರ್ಯಕರ್ತೆಯರು, 3,034 ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಸಹಾಯಕರು ಹಾಗೂ ಅಂಗನವಾಡಿ ಕಿಶೋರಿಯರನ್ನು ನೇಮಿಸಲಾಗುವುದು. ಜಿಲ್ಲಾದ್ಯಂತ ಸಿಬ್ಬಂದಿಗೆ ಡಿಇಸಿ ಮಾತ್ರೆ ವಿತರಿಸುವ ನಿಟ್ಟಿನಲ್ಲಿ ತರಬೇತಿ ನೀಡಲಾಗುವುದು. ತರಬೇತಿ ಪಡೆದ ಸಿಬ್ಬಂದಿ ಜೂನ್ 5ರಂದು ಮನೆಮನೆಗೆ ಭೇಟಿ ನೀಡಿ ಡಿಇಸಿ ಮಾತ್ರೆ ವಿತರಿಸುವರು. ಜೂ.6 ಮತ್ತು 7ರಂದು ಮಾಪ್-ಅಪ್ ಕಾರ್ಯ ಹಮ್ಮಿಕೊಳ್ಳಲಾಗಿದೆ.
ವರ್ಷಕ್ಕೊಮ್ಮೆ ಮಾತ್ರ: ವರ್ಷಕ್ಕೊಂದು ಸಲ ಡಿಇಸಿ ಮಾತ್ರೆಗಳನ್ನು ಸೇವಿಸುವುದರಿಂದ ಆನೆ ಕಾಲು ರೋಗವನ್ನು ತಡೆಗಟ್ಟಬಹುದಾಗಿದೆ. ಈ ಮಾತ್ರೆಗಳಿಂದ ಯಾವುದೇ ತೊಂದರೆ ಆಗದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶಿವರಾಜ ಸಜ್ಜನಶೆಟ್ಟಿ  ಹೇಳಿದರು.
ಸಹಾಯಕ ಆಯುಕ್ತ ಮಹಮ್ಮದ್ ಇಲಿಯಾಸ್, ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಜ್ಞ ಹಾಗೂ ಅಧೀಕ್ಷಕಿ ಡಾ. ನಳನಿ ನಮೋಶಿ, ಮಹಾನಗರ ಪಾಲಿಕೆ ಆಯುಕ್ತ ಶ್ರೀಕಾಂತ ಕಟ್ಟಿಮನಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ರಾಧಾಕೃಷ್ಣ, ಎಲ್ಲ ತಾಲೂಕುಗಳ ತಾಲೂಕು ಆರೋಗ್ಯ ಅಧಿಕಾರಿಗಳು ಮತ್ತಿತರರು ಇದ್ದರು.

ಮಾತ್ರೆ ಪ್ರಮಾಣ ಯಾರಿಗೆ ಎಷ್ಟು?
ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು, ಗರ್ಭಿಣಿಯರು ಹಾಗೂ ತೀವ್ರ ಕಾಯಿಲೆಯಿಂದ ಬಳಲುತ್ತಿರುವವರನ್ನು ಹೊರತುಪಡಿಸಿ ಪ್ರತಿಯೊಬ್ಬರೂ ವಯೋವಾನಕ್ಕೆ ಅನುಗುಣವಾಗಿ ಡಿಇಸಿ ಮಾತ್ರೆಗಳನ್ನು ಲಘು ಉಪಹಾರ ಅಥವಾ ಊಟದ ಬಳಿಕವಷ್ಟೇ ಸೇವಿಸಬೇಕು. ಖಾಲಿ ಹೊಟ್ಟೆಯಲ್ಲಿ ಈ ಮಾತ್ರೆಗಳನ್ನು ಸೇವಿಸಬಾರದು. 2ರಿಂದ 5 ವರ್ಷ ವಯೋವಾನದವರು ಒಂದು ಮಾತ್ರೆಯನ್ನು(100 ಎಂಜಿ), 6ರಿಂದ 14 ವಯೋವಾನದವರು ಎರಡು ಮಾತ್ರೆಗಳನ್ನು (200 ಎಂಜಿ) ಹಾಗೂ 15ಕ್ಕಿಂತ ಮೇಲ್ಪಟ್ಟ ವಯೋವಾನದವರು 3 ಮಾತ್ರೆಗಳನ್ನು (300 ಎಂಜಿ) ಸೇವಿಸಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement